ಅಕ್ಕಿ ಗ್ಯಾರಂಟಿ ಬಗ್ಗೆ ದಿನಕ್ಕೊಂದು ನೆಪ: ಕಾಂಗ್ರೆಸ್ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಅಕ್ಕಿ ಗ್ಯಾರಂಟಿ ಬಗ್ಗೆ ದಿನಕ್ಕೊಂದು ನೆಪ ಹೇಳುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ತಾನು ಎಸಗಿದ ಸ್ವಯಂಕೃತ ತಪ್ಪಿಗೆ ಕೇಂದ್ರ ಸರಕಾರ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ಯಮಾರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Written by - Prashobh Devanahalli | Edited by - Manjunath N | Last Updated : Jun 21, 2023, 04:58 PM IST
  • ತಾನು ತಪ್ಪು ಮಾಡಿ ಕೇಂದ್ರ ಸರಕಾರದ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ
  • ಅಕ್ಕಿ ಬಗ್ಗೆ ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಬೇಕಿತ್ತು
  • ಸ್ಟ್ರಾಟೆಜಿಸ್ಟ್ ಐಡಿಯಾ ಕೊಟ್ಟ ಅಂತ ಫ್ರೀ ಫ್ರೀ ಅಂದವರು ಯಾರು?
ಅಕ್ಕಿ ಗ್ಯಾರಂಟಿ ಬಗ್ಗೆ ದಿನಕ್ಕೊಂದು ನೆಪ: ಕಾಂಗ್ರೆಸ್ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ title=
file photo

ಬೆಂಗಳೂರು: ಅಕ್ಕಿ ಗ್ಯಾರಂಟಿ ಬಗ್ಗೆ ದಿನಕ್ಕೊಂದು ನೆಪ ಹೇಳುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ತಾನು ಎಸಗಿದ ಸ್ವಯಂಕೃತ ತಪ್ಪಿಗೆ ಕೇಂದ್ರ ಸರಕಾರ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ಯಮಾರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ಯಾರೋ ಚುನಾವಣಾ ತಂತ್ರಗಾರರ ಮಾತು ಕೇಳಿಕೊಂಡು ಗ್ಯಾರಂಟಿ ಘೋಷಣೆ ಮಾಡಿದಾಗ, ಯೋಜನೆ ಜಾರಿಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಕ್ಕಿ ಗ್ಯಾರಂಟಿ ಬಗ್ಗೆ ಇವರೇನು ಕೇಂದ್ರ ಸರಕಾರಕ್ಕೆ ಅರ್ಜಿ ಹಾಕಿದ್ರಾ? ಪೊಳ್ಳು ಭರವಸೆ ಕೊಟ್ಟು ಗ್ಯಾರಂಟಿ ಎಂದು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ.ಸರಿ ತಪ್ಪು ಎನ್ನುವುದನ್ನು ನಾವು ಮಾಡಬೇಕಲ್ಲವೇ ? ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ ಕೊಡಬೇಕು ಯಾಕೆ ಅಕ್ಕಿ.ಕೊಡಬೇಕು ನಿಮಗೆ? ಕೇಂದ್ರ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡಿದ್ರಾ ನೀವು? ಯಾವನೋ ಬಂದು ಎಲೆಕ್ಷನ್ ಸ್ಟ್ರಾಟೆಜಿಸ್ಟ್ ಐಡಿಯಾ ಕೊಟ್ಟ ಅಂತ ನೀವು ಫ್ರೀ ಫ್ರೀ ಅಂದ್ರಿ. ಸಚಿವರ ಹೆಂಡ್ತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಎಂದು ಹೇಳಿ ಎಲ್ಲರೂ ಅರ್ಜಿ ಹಾಕಿಕೊಳ್ಳಬಹುದು ಎಂದ್ರಿ. ಈಗ ನೋಡಿದರೆ ಬೇರೆ ವರಸೆ ಶುರು ಮಾಡಿಕೊಂಡಿದ್ದೀರಿ.

ಗೃಹಜ್ಯೋತಿ ಕತ್ತಲಾಗಿ ಪರಿಣಮಿಸಿದೆ. ವಿದ್ಯುತ್ ಉಚಿತ ಕೊಡ್ತೀವಿ ಅಂತ ಹೇಳಿದವರು ಈಗಿನ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು. ವಿಟಿಯು ಉಪ ಕುಲಪತಿ ಬಾಯಿ ಬಡ್ಕೊತಿದ್ದಾರೆ. ವಿದ್ಯುತ್ ಬಿಲ್ ನೋಡಿ ಅವರು ಶಾಕ್ ಗೆ ಗುರಿಯಾಗಿದ್ದಾರೆ. ಬಾಕಿ ಮೊತ್ತ ಕಂಡು ಬೇಸ್ತು ಬಿದ್ದಿದ್ದಾರೆ. ಇನ್ನೆಷ್ಟು ಶಾಕ್ ಕೊಡುತ್ತೀರಿ ಎಂದು ಮಾಜಿ ಮುಖ್ಯಮಂತ್ರಿ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಎರಡು ರಾಷ್ಟ್ರೀಯ ಪಕ್ಷಗಳ ಇಂದಿನ ನಡವಳಿಕೆ ನೋಡಿದಾಗ ತೀವ್ರ ಬೇಸರವಾಗುತ್ತಿದೆ ಎಂದ ಅವರು, ರಾಜ್ಯದ ಜನತೆ ಅವರನ್ನು ನಂಬಿ ಮತ ಕೊಟ್ಟಿದ್ದಾರೆ. ಜನತೆ ಎರಡು ಪಕ್ಷಗಳ ನಾಟಕ ನೋಡಬೇಕಾಗಿದೆ. ಇವರು ಯಾವ ರೀತಿ ಟೋಪಿ ಹಾಕ್ತಾರೆ ಅಂತ ನೋಡುವ ಅನಿವಾರ್ಯತೆಯನ್ನು ಜನರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷಡ ಅಧ್ಯಕ್ಷರು, ಸರಕಾರದ ಸಚಿವ ಕೇಂದ್ರ ಸರ್ಕಾರವನ್ನು ದೂಷಣೆ ಮಾಡುತ್ತಿದ್ದಾರೆ. ಗ್ಯಾರಂಟಿಗಳನ್ನು ರೂಪಿಸುವಾಗ ಇದೆಲ್ಲಾ ಗೊತ್ತಿರಲಿಲ್ಲವೇ? ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿಗಳು ನೋಡಿದರೆ ಭಾರತದ ಆಹಾರ ನಿಗಮಕ್ಕೆ ಪತ್ರ ಬರೆದಿದ್ದೆ ಎಂದು ಹೇಳುತ್ತಿದ್ದಾರೆ. ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಇಂಥ ಉಡಾಫೆ ಉತ್ತರ ಕೊಟ್ಟರೆ ಹೇಗೆ? ಕೇಂದ್ರದಿಂದ ಅಕ್ಕಿ ಬೇಕು ಅಂದರೆ ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರ ಜತೆ ಮಾತನಾಡಬೇಕಿತ್ತು. ಮನವಿ ಕೊಡಬೇಕಿತ್ತು. ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರೇ ಹೋಗಿ ಚರ್ಚೆ ನಡೆಸಬೇಕಿತ್ತು. ಅದನ್ನು ಬಿಟ್ಟು ಉಡಾಫೆ ಹೇಳಿಕೆ ಕೊಡ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಕೇಂದ್ರ ಸರ್ಕಾರಕ್ಕೆ ಅವರದೇ ಆದ ಕಮಿಟ್‌ಮೆಂಟ್ ಇರುತ್ತದೆ. ನಮಗೆ ಅಕ್ಕಿ ಬೇಕು ಅಂದರೆ ಅವರು ಹೇಗೆ ಕೊಡ್ತಾರೆ? ನಾನು ಸಾಲಾಮನ್ನಾ ಮಾಡಿದಾಗ ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿದ್ದ ಸಾಲಮನ್ನಾ ಮಾಡಿದಾಗ ಪ್ರಧಾನಿಗಳ ಹತ್ತಿರ ಹೋಗಿ ಕೇಳಿದ್ನಾ? ದರ್ದು ಇರೋದು ಕಾಂಗ್ರೆಸ್ ಪಕ್ಷಕ್ಕೆ, ಅವರಿಗೇನಿದೆ ದರ್ದು? ನಿಮಗೆ ಬೇಕಾದ ವ್ಯವಸ್ಥೆ ನೀವೇ ಮಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನಾನು ಪಂಚರತ್ನ ಯೋಜನೆಗಳನ್ನು ಘೋಷಣೆ ಮಾಡಿದ್ದೆ. ಅವುಗಳನ್ನು ಹೇಗೆ ಜಾರಿ ಮಾಡಬೇಕು? ಹೇಗೆ ಹಣ ಹೊಂದಿಸಬೇಕು ಎಂಬುದಕ್ಕೆ ರೂಪುರೇಷೆ ಸಿದ್ದಮಾಡಿದ್ದೆ. ಆದರೆ ಜನ ನನ್ನನ್ನು ನಂಬಲಿಲ್ಲ. ಪಾಪ ಇವರ 5 ಗ್ಯಾರಂಟಿಗಳನ್ನು ನಂಬಿದರು. ಇನ್ನು ಯಜಮಾನಿಯರಿಗೆ 2 ಸಾವಿರ ಹೇಗೆ ಕೊಡ್ತಾರೆ ನೋಡೊಣ ಎಂದರು ಮಾಜಿ ಮುಖ್ಯಮಂತ್ರಿಗಳು.

ಸತೀಶ್ ಜಾರಕಿಹೊಳಿ ಹೇಳಿಕೆ ಸರಿಯಲ್ಲ:

ಕೇಂದ್ರ ಸರಕಾರ ಸರ್ವರ್ ಹ್ಯಾಕ್ ಮಾಡಿದ್ದ ಪರಿಣಾಮ ಗೃಹಲಕ್ಷ್ಮಿ ಗ್ಯಾರಂಟಿ ಜಾರಿ ಮಾಡಲಾಗುತ್ತಿಲ್ಲ ಎಂದಿರುವ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಿಡಿಮಿಡಿಯಾದ ಮಾಜಿ ಮುಖ್ಯಮಂತ್ರಿಗಳು, ಯಾರ್ರೀ ಸತೀಶ್ ಜಾರಕಿಹೊಳಿ? ಬಾಯಿ ಚಪಲಕ್ಕೆ ಮಾತನಾಡ್ತಿದ್ದಾರೆ ಅವರು. ಯಾಕೆ ಆ್ಯಕ್ ಮಾಡ್ತಾರೆ, ನಿಮ್ಮ ಸರ್ವರ್ ಬಲಪಡಿಸಿಕೊಳ್ಳೋದು ನಿಮ್ಮ ಜವಾಬ್ದಾರಿ ಎಂದರು.ನಾನಿನ್ನು ಇವರಿಗೆ ಟೈಮ್ ಕೊಡ್ತೀನಿ. ಬಜೆಟ್ ಅಧಿವೇಶನದಲ್ಲಿ ಏನೇನು ಘೋಷಣೆ ಮಾಡ್ತಾರೆ ನೋಡೋಣ. ಪ್ರಣಾಳಿಕೆಯಲ್ಲಿ ಕೂಡ ಅದೆಷ್ಟೋ ಭರವಸೆಗಳನ್ನು ನೀಡಿದ್ದಾರೆ. ಎಲ್ಲವೂ ಎಲ್ಲಿಗೆ ಬಂದು ನಿಲ್ಲುತ್ತದೆಯೋ ನೋಡೋಣ.

ಎಕ್ಸ್ ಪ್ರೆಸ್ ಹೆದ್ದಾರಿ ಅಲ್ಲ ಸಾವಿನ ರಹದಾರಿ:

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ನಿರಂತರ ಅಪಘಾತಗಳ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಇದು ಎಕ್ಸ್ ಪ್ರೆಸ್ ಹೆದ್ದಾರಿಯೋ ಅಥವಾ ಸಾವಿನ ರಹದಾರಿಯೋ ಎಂದು ಪ್ರಶ್ನಿಸಿದರು.ಈ ಹೆದ್ದಾರಿಯನ್ನು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಅದನ್ನು ಸರಿಪಡಿಸುವ ಬಗ್ಗೆ ಕೇಂದ್ರ ಸರ್ಕಾರವಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಗಮನ ಕೊಡುತ್ತಿಲ್ಲ. ಯಾರೋ ಬಂದರು, ದುಡ್ಡು ಮಾಡಿಕೊಂಡು ಹೋದರು. ಜನ ಮಾತ್ರ ದಿನನಿತ್ಯವೂ ಸಾಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಕಿಡಿಕಾರಿದರು.

ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು ಕಡಿತಕ್ಕೆ ಕಿಡಿ:

ಶಾಲಾ ಮಕ್ಕಳಿಗೆ ವಿತರಣೆ ಮಾಡಲಾಗುವ ಮೊಟ್ಟೆ, ಬಾಳೆ ಹಣ್ಣು ಕಡಿತ ಮಾಡಿರುವ ಬಗ್ಗೆಯೂ ಕುಮಾರಸ್ವಾಮಿ ಅವರು  ಆಕ್ಷೇಪ ವ್ಯಕ್ತಪಡಿಸಿದರು.

ಮುಂದೆ ಒಂದು ಮೊಟ್ಟೆ, ಒಂದು ಬಾಳೆಹಣ್ಣು ಅದು ಕೂಡ ಇರಲ್ವೇನೊ? ಇವರಿಗೆ ಮಕ್ಕಳ ಆಹಾರದಲ್ಲಿ ಹಣದ ಹಪಾಹಪಿ ಶುರುವಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.

ಪವರ್ ಶೇರಿಂಗ್ ಅವರಿಗೇ ಬಿಟ್ಟಿದ್ದು:

ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಎದ್ದಿರುವ ಕೋಲಾಹಲದ ಬಗ್ಗೆ ಕುಮಾರಸ್ವಾಮಿ ಅವರು ಹೇಳಿದ್ದು ಇಷ್ಟು;

ಅಧಿಕಾರ ಹಂಚಿಕೆ ಅವರಿಗೆ ಸೇರಿದ ವಿಚಾರ. 5 ವರ್ಷ ಅವರೇ ಇರುತ್ತಾರೋ, ಇನ್ನಾರದರೂ ಬರುತ್ತಾರೋ ನನಗೆ ಗೊತ್ತಿಲ್ಲ. ವೀರಪ್ಪ ಮೊಯ್ಲಿ ಅವರ ಕಾಲದಲ್ಲಿ ವಿಧಾನಸೌಧದಲ್ಲಿ ಚೇರ್, ಮೇಜು ಹಿಡಿದುಕೊಂಡು ಕುಸ್ತಿ ಮಾಡಿದ್ದರು. ಈಗಲೂ ಆ ರೀತಿ ಆಗುತ್ತೋ ಏನೋ ನನಗೆ ಗೊತ್ತಿಲ್ಲ. ಎಲ್ಲವೂ ಮುಂದೆ ಗೊತ್ತಾಗಲಿದೆ ಎಂದರು ಅವರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News