ರೈತ ಬೆಳೆ ಸಮೀಕ್ಷೆ ಆ್ಯಪ್ ಕಂಡು ಸಂತಸಪಟ್ಟಿದ್ದ ಸುರೇಶ್ ಅಂಗಡಿ: ಬಿ.ಸಿ. ಪಾಟೀಲ್ ನೆನಪು

ಹುಬ್ಬಳ್ಳಿ-ಅಂಕೋಲಾ ರೈಲು ಸಂಪರ್ಕ ಹಾಗೂ ರಾಣೆಬೆನ್ನೂರು ಬೈಂದೂರು ರೈಲು ಬ್ಯಾಡಗಿ ರಸ್ತೆ ಸಂಪರ್ಕ ಸಂಬಂಧ ತಮ್ಮೊಂದಿಗೆ ಚರ್ಚೆಯನ್ನು ಮಾಡಿದ್ದರು. 

Last Updated : Sep 24, 2020, 02:30 PM IST
  • ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರಕ್ಕೂ ಹೋಗದ ದುಃಸ್ಥಿತಿಯನ್ನು ಕೊರೊನಾ ತಂದಿಟ್ಟಿದೆ
  • ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಹೋಗುವುದಾಗಲೀ ಅವರ ಬಂಧುಗಳನ್ನು ಭೇಟಿ ಮಾಡಲಾಗಲೀ ಸಾಧ್ಯವಾಗುತ್ತಿಲ್ಲ ಎಂದು ಬಿ.ಸಿ. ಪಾಟೀಲ್ ಬೇಸರ
ರೈತ ಬೆಳೆ ಸಮೀಕ್ಷೆ ಆ್ಯಪ್ ಕಂಡು ಸಂತಸಪಟ್ಟಿದ್ದ ಸುರೇಶ್ ಅಂಗಡಿ: ಬಿ.ಸಿ. ಪಾಟೀಲ್ ನೆನಪು title=
File Image

ಬೆಂಗಳೂರು: ರೈತ ಬೆಳೆ ಸಮೀಕ್ಷೆ ಆ್ಯಪ್ ಕಂಡು ಸಂತಸಪಟ್ಟಿದ್ದ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ (Suresh Angadi) ಇದು ಇತರೆ ರಾಜ್ಯಗಳಿಗೂ ಮಾದರಿಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ (BC Patil) ಸ್ಮರಿಸಿದ್ದಾರೆ.

ವಿಧಾನಸಭೆಯಲ್ಲಿ ಸುರೇಶ್ ಅಂಗಡಿ ಅವರ ನಿಧನ ಮೇಲಿನ ಸಂತಾಪ ಸೂಚನೆ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ದುಡಿಯುತ್ತಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನ ವೈಯಕ್ತಿಕವಾಗಿಯೂ ಹಾಗೂ ರಾಜ್ಯಕ್ಕೂ ತಮಗೂ ಅನಿರೀಕ್ಷಿತದ ಜೊತೆಗೆ  ಆಘಾತವನ್ನುಂಟು ಮಾಡಿದೆ ಎಂದು  ಬಿ.ಸಿ. ಪಾಟೀಲ್ ದುಃಖವ್ಯಕ್ತಪಡಿಸಿದರು.

ದಕ್ಷಿಣ ಭಾರತದ ಮೊದಲ ಕಿಸಾನ್ ರೈಲು, ಆಂಧ್ರ ಪ್ರದೇಶದಿಂದ ನೇರವಾಗಿ ದೆಹಲಿ ತಲುಪಲಿರುವ ಹಣ್ಣು-ತರಕಾರಿಗಳು

ಕಳೆದ ತಿಂಗಳು 22ರಂದು ದೆಹಲಿಗೆ ತಾವು ಭೇಟಿ ನೀಡಿದ್ದಾಗ ಸುರೇಶ್ ಅಂಗಡಿ ತಮ್ಮನ್ನು ಉಪಹಾರಕ್ಕೆ ಅವರ ನಿವಾಸಕ್ಕೆ ಆಹ್ವಾನಿಸಿ ತಮ್ಮ ಸರಳ ಸಜ್ಜನಿಕೆ ಮೆರೆದಿದ್ದರು. ಅಷ್ಟೇ ಅಲ್ಲದೇ ಅವರೊಂದಿಗೆ ಚರ್ಚೆ ವೇಳೆಯನ್ನು ರೈತ ಬೆಳೆ ಸಮೀಕ್ಷೆ ಆಪ್ (Farmer's Crop Survey app) ಅನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ತಂತ್ರಜ್ಞಾನದ ಮೂಲಕ ರೈತರ ಬೆಳೆ ಸಮೀಕ್ಷೆ ವಿಡಿಯೋವನ್ನು ತಮ್ಮ ಪೆನ್ ಡ್ರೈವ್ ಲ್ಲಿ ಹಾಕಿಕೊಂಡು ಎಲ್ಲಾ ರಾಜ್ಯಗಳಿಗೂ ಇದು ಸ್ಫೂರ್ತಿಯಾಗಬೇಕು ಎಂದು ಸಂತಸ ವ್ಯಕ್ತಪಡಿಸಿದ್ದಾಗಿ ಹೇಳಿದರು.

ಕೋವಿಡ್ ಗೈಡ್​​ಲೈನ್ಸ್ ಅನುಸಾರ ದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಹುಬ್ಬಳ್ಳಿ-ಅಂಕೋಲಾ ರೈಲು ಸಂಪರ್ಕ ಹಾಗೂ ರಾಣೆಬೆನ್ನೂರು ಬೈಂದೂರು ರೈಲು ಬ್ಯಾಡಗಿ ರಸ್ತೆ ಸಂಪರ್ಕ ಸಂಬಂಧ ತಮ್ಮೊಂದಿಗೆ ಚರ್ಚೆಯನ್ನು ಮಾಡಿದ್ದರು. ರಾಜ್ಯದ ಕೆಲಸ ಎಂದರೆ ಬಹಳ ಆಸಕ್ತಿ ಮತ್ತು ಶ್ರದ್ಧೆಯಿಂದ ಮಾಡುತ್ತಿದ್ದರು. ಇತ್ತೀಚೆಗೆ ಕಿಸಾನ್ ರೈಲನ್ನು ಇಡೀ ದೇಶಕ್ಕೆ ಪರಿಚಯಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟರು ಎಂದು ಬಿ.ಸಿ. ಪಾಟೀಲ್ ಹೇಳಿದರು.

ಕೊರೊನಾ ಸೋಂಕು ಎಲ್ಲರಲ್ಲೂ ಆತಂಕವನ್ನುಂಟು ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಬಗ್ಗೆ ನಿರ್ಲಕ್ಷ್ಯಭಾವ ಎದ್ದುಕಾಣುತ್ತಿದ್ದೆ.ಈ ನಿಟ್ಟಿನಲ್ಲಿ ಜನ ಜಾಗೃತಿ, ಸಾಮಾಜಿಕ ಅಂತರ ಹೆಚ್ಚಾಗಬೇಕು ಎಂದರು.

ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರಕ್ಕೂ ಹೋಗದ ದುಃಸ್ಥಿತಿಯನ್ನು ಕೊರೊನಾ ತಂದಿಟ್ಟಿದೆ. ಮೊದಲು ಬಂಧುಗಳಾಗಲೀ ಸ್ನೇಹಿತರಾಗಲೀ ಯಾರೇ ಆಗಲೀ ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿತಿಳಿಯುತ್ತಿದ್ದಂತೆಯೇ ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಮನೆಗೆ ತೆರಳುತ್ತಿದ್ದೆವು. ಇದು ನಮ್ಮ ಸಂಸ್ಕೃತಿ ಕೂಡ. ಆದರೆ ಕೊರೊನಾ ಇದೆಲ್ಲವನ್ನು ತಲೆಕೆಳಗೆ ಮಾಡಿಹಾಕಿದೆ. ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಹೋಗುವುದಾಗಲೀ ಅವರ ಬಂಧುಗಳನ್ನು ಭೇಟಿ ಮಾಡಲಾಗಲೀ ಸಾಧ್ಯವಾಗುತ್ತಿಲ್ಲ ಎಂದು ಬಿ.ಸಿ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.

Trending News