ಕೋವಿಡ್ ಗೈಡ್​​ಲೈನ್ಸ್ ಅನುಸಾರ ದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ ಮೊದಲ ಕೇಂದ್ರ ಸಚಿವ ಬೆಳಗಾವಿಯ ಸಂಸದ ಸುರೇಶ್ ಅಂಗಡಿ.

Last Updated : Sep 24, 2020, 08:05 AM IST
  • ಕರ್ನಾಟಕ ರಾಜ್ಯ ಸರ್ಕಾರ ಸಚಿವ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ಕರೆತರಲು ವ್ಯವಸ್ಥೆ ಮಾಡಿದ್ದರೂ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ
  • ಈ ಹಿನ್ನಲೆಯಲ್ಲಿ ದೆಹಲಿಯ ಲೋದಿ ಗಾರ್ಡನ್ ರಸ್ತೆಯಲ್ಲಿರುವ ಚಿತಾಗಾರದಲ್ಲೇ ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರ
  • ಕೋವಿಡ್ ನಿಯಮಾವಳಿ ಪ್ರಕಾರ ಸುರೇಶ್ ಅಂಗಡಿ ಅವರ ನಡೆಯಲಿರುವ ಅಂತ್ಯಸಂಸ್ಕಾರ
ಕೋವಿಡ್ ಗೈಡ್​​ಲೈನ್ಸ್ ಅನುಸಾರ ದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ title=

ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು 66ನೇ ವಯಸ್ಸಿನಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಕೋವಿಡ್‌ನಿಂದ ನವದೆಹಲಿಯ ಏಮ್ಸ್‌ ಅಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಸಂಸದರಾಗಿದ್ದ  ಸುರೇಶ್ ಅಂಗಡಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮೊದಲ ಕೇಂದ್ರ ಸಚಿವರು. ಈ ಹಿಂದೆ ಕನಿಷ್ಠ ಆರು ಶಾಸಕರು ಮತ್ತು ಮೂವರು ಸಂಸದರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ  (Suresh Angadi)ಯವರ ನಿಧನ ಕರುನಾಡಿಗೆ ಬರಸಿಡಿಲು ಬಡಿದಂತಾಗಿದೆ. 

ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ಕರ್ನಾಟಕ ರಾಜ್ಯ ಸರ್ಕಾರ ಸಚಿವ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ಕರೆತರಲು ವ್ಯವಸ್ಥೆ ಮಾಡಿದ್ದರೂ ಸಹ ಅವರು ಕೋವಿಡ್ -19 (Covid-19) ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿರುವುದರಿಂದ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ದೆಹಲಿಯ ಲೋದಿ ಗಾರ್ಡನ್ ರಸ್ತೆಯಲ್ಲಿರುವ ಚಿತಾಗಾರದಲ್ಲೇ ಕೋವಿಡ್ ನಿಯಮಾವಳಿ ಪ್ರಕಾರ ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಳಗಾವಿಯಲ್ಲಿ ಕೋವಿಡ್-19 ವಾರ್ ರೂಮ್ ಗೆ ಚಾಲನೆ

ಕೋವಿಡ್ ಗೈಡ್​​ಲೈನ್ಸ್ ಅನುಸಾರ ಅಂತ್ಯಕ್ರಿಯೆ:-
ಕೋವಿಡ್ ನಿಯಮಗಳ ಅನುಸಾರ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಬೇಕು. ಅಂದರೆ ಅವರ ಮೃತದೇಹವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗಬಾರದು ಅನ್ನೋ ಕೊರೊನಾ ಗೈಡ್‌ಲೈನ್ಸ್‌ (Corona Guidelines) ಇದೆ. ಈ ಹಿನ್ನಲೆಯಲ್ಲಿ ಕೋವಿಡ್ ನಿಯಮಾವಳಿ ಪ್ರಕಾರ ಕೆಲವೇ ಕೆಲವು ಗಣ್ಯರ ಸಮ್ಮುಖದಲ್ಲಿ ಸುರೇಶ್ ಅಂಗಡಿಯವರ ಅಂತ್ಯಸಂಸ್ಕಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಬೆಳಿಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದ್ದು ಅಂತ್ಯ ಸಂಸ್ಕಾರದಲ್ಲಿ ಕುಟುಂಬಸ್ಥರಿಗಷ್ಟೇ ಪಾಲ್ಗೊಳ್ಳಲು ಅವಕಾಶವಿದೆ. ಇತರರಿಗೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶವಿರುವುದಿಲ್ಲ. ಉಳಿದವರು ವೆಬಿನಾರ್ ಮೂಲಕ ಸುರೇಶ್ ಅಂಗಡಿಯವರ ಅಂತ್ಯ ಸಂಸ್ಕಾರವನ್ನು ನೋಡಬಹುದು ಎಂದು ಹೇಳಲಾಗಿದೆ.

Trending News