ನೂತನ ತಂತ್ರಜ್ಞಾನದ ಮೂಲಕ ರಸ್ತೆ ಡಾಂಬರೀಕರಣ: ದೇಶದಲ್ಲೇ ಇದೇ ಮೊದಲು

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಾಯಿಲ್ ಸ್ಟಬಿಲೈಸೇಶನ್ ಟೆಕ್ನಾಲಾಜಿ (ಮಣ್ಣು ಸ್ಥಿರೀಕರಣ ತಂತ್ರಜ್ಞಾನ)ಯನ್ನು ಬಳಸಿ ಬಿಡಿಎ 15 ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರ್ಮಾಣಕ್ಕೆ ಬಿಡಿಎ ಚಾಲನೆ ನೀಡಿದೆ.

Written by - Manjunath Hosahalli | Edited by - Manjunath N | Last Updated : Dec 14, 2022, 07:03 PM IST
  • - ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ರಸ್ತೆ ನಿರ್ಮಾಣ
  • - ಕಡಬಗೆರೆ ಕ್ರಾಸ್ ನಿಂದ ಕಾಚೋಹಳ್ಳಿವರೆಗಿನ 15 ಕಿಲೋಮೀಟರ್ ರಸ್ತೆ
  • - ಪ್ರತಿ ದಿನ 500 ಮೀಟರ್ ರಸ್ತೆ ನಿರ್ಮಾಣ ಮಾಡಲಿರುವ ಜರ್ಮನ್ ಯಂತ್ರಗಳು
ನೂತನ ತಂತ್ರಜ್ಞಾನದ ಮೂಲಕ ರಸ್ತೆ ಡಾಂಬರೀಕರಣ: ದೇಶದಲ್ಲೇ ಇದೇ ಮೊದಲು title=
file photo

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಾಯಿಲ್ ಸ್ಟಬಿಲೈಸೇಶನ್ ಟೆಕ್ನಾಲಾಜಿ (ಮಣ್ಣು ಸ್ಥಿರೀಕರಣ ತಂತ್ರಜ್ಞಾನ)ಯನ್ನು ಬಳಸಿ ಬಿಡಿಎ 15 ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರ್ಮಾಣಕ್ಕೆ ಬಿಡಿಎ ಚಾಲನೆ ನೀಡಿದೆ.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ ನಿಂದ ಕಾಚೋಹಳ್ಳಿವರೆಗಿನ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡುವ ಮೂಲಕ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಏಕಕಾಲಕ್ಕೆ ಜರ್ಮನ್ ಮೂಲದ 5 ಯಂತ್ರಗಳನ್ನು ಬಳಸಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ. ಈ ಯಂತ್ರಗಳ ಸಹಾಯದಿಂದ ದಿನಕ್ಕೆ ಸುಮಾರು ಅರ್ಧ ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಅಲ್ಲದೇ ಈ ರಸ್ತೆ ನಿರ್ಮಾಣಕ್ಕೆ ಬಿಡಿಎ 40 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಸಾಮಾನ್ಯ ಡಾಂಬರ್ ರಸ್ತೆಗಿಂತ ಈ ರಸ್ತೆ ಗಟ್ಟಿಮುಟ್ಟಾಗಿರಲಿದ್ದು, ಇದಕ್ಕೆ ಕಾಂಕ್ರೀಟ್ ರಸ್ತೆಯ ವೆಚ್ಚಕ್ಕಿಂತ ಕಡಿಮೆ ವೆಚ್ಚ ತಗುಲಲಿದ್ದು, ಪ್ರಾಯೋಗಿಕವಾಗಿ ನಿರ್ಮಾಣವಾಗಲಿರುವ ಈ ರಸ್ತೆಯನ್ನು ಪರಿಶೀಲಿಸಿದ ನಂತರ ಹಂತಹಂತವಾಗಿ ಬಿಡಿಎ ನಿರ್ಮಾಣ ಮಾಡಲಿರುವ ಎಲ್ಲಾ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Ram Charan : ರಾಮ್‌ಚರಣ್‌ ಜೊತೆ ಕನ್ನಡಿಗ ಡೈರೆಕ್ಟರ್‌ ಸಿನಿಮಾ..! ಯಾರು ಆ ನಿರ್ದೇಶಕ..?

15 ಕಿಲೋಮೀಟರ್ ಉದ್ದದ ರಸ್ತೆಯು 10 ಮೀಟರ್ ಅಗಲವಿರಲಿದ್ದು, ಇದಕ್ಕೆ ಸುಮಾರು 40 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಕಾಮಗಾರಿ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಈ ರಸ್ತೆ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮಗಳ ಜನತೆ ಬೆಂಗಳೂರು ನಗರ ಮತ್ತು ವಿವಿಧ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಲಿದ್ದು, ಇದರಿಂದ ಅವರಿಗೆ ಆರ್ಥಿಕ, ಸಾಮಾಜಿಕವಾಗಿ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಬಿಡಿಎ ಅಭಿಯಂತರ ಸದಸ್ಯ ಶಾಂತರಾಜಣ್ಣ, ಇಂಜಿನಿಯರ್ ಗಳಾದ ಸುಷ್ಮಾ, ಸುರೇಶ್, ಪ್ರಕಾಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು, ಸ್ಥಳೀಯ ಬಿಜೆಪಿ ಮುಖಂಡರು ಇದ್ದರು.

ಏನಿದು ಸಾಯಿಲ್ ಸ್ಟಬಿಲೈಸೇಶನ್ ಟೆಕ್ನಾಲಜಿ..?

ರಸ್ತೆಯಲ್ಲಿನ ಮಣ್ಣು, ಡಾಂಬರ್, ಜಲ್ಲಿಯನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡುವ ತಂತ್ರಜ್ಞಾನ ಇದಾಗಿದೆ. 1 ಅಡಿ ಆಳದವರೆಗೆ ಇರುವ ಡಾಂಬರ್, ಜಲ್ಲಿ ಮತ್ತು ಮಣ್ಣನ್ನು ಜರ್ಮನ್ ನಿಂದ ತರಿಸಿರುವ ಯಂತ್ರಗಳು ಪುಡಿ ಮಾಡಿ ಪೇಸ್ಟ್ ರೀತಿಯಲ್ಲಿ ಮಾರ್ಪಡಿಸಿ ಅದಕ್ಕೆ ಸಿಮೆಂಟ್, ರಾಸಾಯನಿಕ ಮತ್ತು ನೀರನ್ನು ಸೇರಿಸಿ ಮಣ್ಣನ್ನು ಸ್ಥಿರೀಕರಿಸಲಾಗುತ್ತದೆ. ಇದನ್ನು ರಸ್ತೆಗೆ ಹಾಕಿ 3 ದಿನಗಳವರೆಗೆ ಕ್ಯೂರಿಂಗ್ ಮಾಡಲಾಗುತ್ತದೆ. ನಂತರ ಅದರ ಮೇಲೆ ಜಿಯೋ ಟೆಕ್ಸ್ ಟೈಲ್ ಲೇಯರ್ ನ ಅತ್ಯಂತ ತೆಳುವಾದ ಪ್ಲಾಸ್ಟಿಕ್ ಶೀಟ್ ಅನ್ನು ಹಾಕಲಾಗುತ್ತದೆ. ಇದರ ಮೇಲೆ ಡಾಂಬರ್ ಹಾಕಲಾಗುತ್ತದೆ.

ಏಕಕಾಲಕ್ಕೆ ಐದು ಯಂತ್ರಗಳ ಬಳಕೆ:

ಈ ರಸ್ತೆ ನಿರ್ಮಾಣಕ್ಕೆ ಏಕ ಕಾಲಕ್ಕೆ ಜರ್ಮನಿಯಿಂದ ತರಿಸಲಾಗಿರುವ ಐದು ಯಂತ್ರಗಳನ್ನು ಬಳಸಲಾಗುತ್ತದೆ.

ಇದನ್ನೂ ಓದಿ:  ಬಂಗಾರ ಕೊಡಿಸು ಅಂತಾ ಹೆಂಡತಿ ಟಾರ್ಚರ್: ಬೇಸತ್ತು ನವವಿವಾಹಿತ ಸೂಸೈಡ್‌

1)    ಸಾಯಿಲ್ ರೀಸೈಕ್ಲಿಂಗ್ ಮಶಿನ್
2)    ಸಿಮೆಂಟ್ ಮಿಕ್ಸಿಂಗ್ ಮಶಿನ್
3)    ಕೆಮಿಕಲ್ ಮಿಕ್ಸಿಂಗ್ ಮಶಿನ್
4)    ಗ್ರೇಡರ್
5)    ಕಾಂಪ್ಯಾಕ್ಟ್ ಮಶಿನ್
ಸಾಯಿಲ್ ರೀಸೈಕ್ಲಿಂಗ್ ಮಶಿನ್ ಹಾಲಿ ರಸ್ತೆಯಲ್ಲಿರುವ ಡಾಂಬರ್, ಜಲ್ಲಿಯನ್ನು ಪುಡಿ ಮಾಡುತ್ತದೆ. 
ಇದರ ನಂತರದ ಸಿಮೆಂಟ್ ಮಿಕ್ಸಿಂಗ್ ಯಂತ್ರವು ಡಾಂಬರ್ ಮತ್ತು ಜಲ್ಲಿಯ ಪುಡಿಗೆ ಸಿಮೆಂಟ್ ಅನ್ನು ಮಿಶ್ರಣ ಮಾಡುತ್ತದೆ.
ನಂತರ ರಾಸಾಯನಿಕ ಮಿಶ್ರಣ ಯಂತ್ರದ ವಾಹನವು ಡಾಂಬರ್ ಮತ್ತು ಜಲ್ಲಿಯ ಮಿಶ್ರಣಕ್ಕೆ ರಾಸಾಯನಿಕವನ್ನು ಮಿಶ್ರಣ ಮಾಡಿ ಹದಗೊಳಿಸುತ್ತದೆ.
ನಂತರದಲ್ಲಿರುವ ಎರಡು ವಾಹನಗಳಲ್ಲಿ ಕ್ರಮವಾಗಿ ಗ್ರೇಡರ್ ಮತ್ತು ಕಾಂಪ್ಯಾಕ್ಟ್ ಯಂತ್ರವಿದ್ದು, ಗ್ರೇಡರ್ ಗುಣಮಟ್ಟವನ್ನು ಕಾಯ್ದುಕೊಳ್ಳಲಿದ್ದರೆ, ಕಾಂಪ್ಯಾಕ್ಟ್ ಎಲ್ಲಾ ಮಿಶ್ರಣವನ್ನು ಒಟ್ಟುಗೂಡಿಸಿ ರಸ್ತೆಗೆ ಬಿಡುಗಡೆ ಮಾಡಿದ ನಂತರ ರೋಲರ್ ನಲ್ಲಿ ಬಿಗಿಗೊಳಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News