'ನಮ್ಮ ಪಾದಯಾತ್ರೆ ಕಂಡು ಬಿಜೆಪಿ ಅವರಿಗೆ ಹತಾಶೆ ಕಾಡುತ್ತಿದೆ'

ನಮ್ಮ ಪಾದಯಾತ್ರೆ ಕಂಡು ಬಿಜೆಪಿ ಅವರಿಗೆ ಹತಾಶೆ ಕಾಡುತ್ತಿದೆ. ಇದೇ ಕಾರಣಕ್ಕೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಪತಿಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

Written by - Zee Kannada News Desk | Last Updated : Oct 1, 2022, 07:34 PM IST
  • ಇಂದು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಸಮಾಜಮುಖಿ ಚಿಂತಕರು, ಬರಹಗಾರರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವಾಗಿದೆ.
'ನಮ್ಮ ಪಾದಯಾತ್ರೆ ಕಂಡು ಬಿಜೆಪಿ ಅವರಿಗೆ ಹತಾಶೆ ಕಾಡುತ್ತಿದೆ' title=

ಬೆಂಗಳೂರು: ನಮ್ಮ ಪಾದಯಾತ್ರೆ ಕಂಡು ಬಿಜೆಪಿ ಅವರಿಗೆ ಹತಾಶೆ ಕಾಡುತ್ತಿದೆ. ಇದೇ ಕಾರಣಕ್ಕೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಪತಿಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಭಾರತೀಯ ಜನತಾ ಪಕ್ಷದವರು ಯಾವತ್ತೂ ಕೂಡ ಬಾಬಾ ಸಾಹೇಬ್‌ ಅಂಬೇಡ್ಕರರು ರಚನೆ ಮಾಡಿರುವ ಸಂವಿಧಾನದಲ್ಲಿ ಆಗಲೀ, ವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಸ್ವಾತಂತ್ರ್ಯದಲ್ಲಿ ಆಗಲೀ ನಂಬಿಕೆ ಇಟ್ಟುಕೊಂಡವರಲ್ಲ. ಸಂವಿಧಾನ ರಚನೆಯಾಗಿ ಅಂಗೀಕಾರವಾದ ದಿನದಿಂದಲೂ ಅವರು ಸಂವಿಧಾನವನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ. ಇಂದು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಸಮಾಜಮುಖಿ ಚಿಂತಕರು, ಬರಹಗಾರರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವಾಗಿದೆ.

ಇದನ್ನೂ ಓದಿ: BBK 9 : ವಾರದ ಕತೆ ಕಿಚ್ಚನ ಜೊತೆ.. ಇಂದು ದೊಡ್ಮನೆಯಿಂದ ಹೊರ ಹೋಗೋರು ಯಾರು?

ಸಂವಿಧಾನಾತ್ಮಕವಾಗಿ ದೊರೆತಿರುವ ವಾಕ್‌ ಸ್ವಾತಂತ್ರ್ಯವನ್ನು ಇಂದು ಕಿತ್ತುಕೊಳ್ಳಲಾಗಿದೆ. ಸಂವಿಧಾನದ ಪೀಠಿಕೆಯಲ್ಲೇ ಮಾನವ ಹಕ್ಕುಗಳು ಇರಬೇಕು ಎಂದು ನಾವೇ ತೀರ್ಮಾನ ಮಾಡಿಕೊಂಡಿದ್ದು. ಇಂದು ಸರ್ಕಾರದ ನೀತಿ ನಿರ್ಧಾರಗಳನ್ನು ಪ್ರಶ್ನೆ ಮಾಡಿದರೆ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಜೈಲಿಗೆ ಹಾಕುವುದು, ಅವರ ಮೇಲೆ ಇ.ಡಿ, ಸಿಬಿಐ ಗಳನ್ನು ಛೂ ಬಿಡುವುದು ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲರಿಂದ ಆತಂಕ ವ್ಯಕ್ತವಾಗುತ್ತಿದೆ. 

ರಾಹುಲ್‌ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಂಡಿರುವುದು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶಕ್ಕಲ್ಲ. ಜನರಲ್ಲಿ ಭಯ, ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ, ಈ ಜನರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂಬ ಕಾರಣಕ್ಕೆ. ಭಾರತ ಐಕ್ಯತಾ ಯಾತ್ರೆಗೆ ನಮ್ಮ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ. ಯಾತ್ರೆಗೆ ಸಂಘಸಂಸ್ಥೆಗಳು, ವಿಚಾರವಂತರು, ಚಿಂತಕರು, ಬರಹಗಾರರು, ಹೀಗೆ ಎಲ್ಲ ವರ್ಗದ ಜನರು ಭಾಗವಹಿಸುತ್ತಿದ್ದಾರೆ. ಈ ಜನರ ಅಭಿಪ್ರಾಯ ಸಂಗ್ರಹಿಸಲು ರಾಹುಲ್‌ ಗಾಂಧಿ ಅವರು ಸಂವಹನ ಸಭೆಗಳನ್ನು ನಡೆಸುತ್ತಿದ್ದಾರೆ.

ನಿನ್ನೆ ಆದಿವಾಸಿ ಜನರ ಜೊತೆ, ಕೊರೊನಾ ಕಾಲದಲ್ಲಿ ಆಕ್ಸಿಜನ್‌ ಹಾಗೂ ವೆಂಟಿಲೇಟರ್‌ ಸಿಗದೆ ಸಾವಿಗೀಡಾದ 36 ಜನರ ಕುಟುಂಬಗಳ ಜೊತೆ ಮಾತುಕತೆ ನಡೆಸಿದ್ದಾರೆ. ಈ 36 ಜನರನ್ನು ಸರ್ಕಾರವೇ ಕೊಲೆ ಮಾಡಿದ್ದು, ಅವರಿಗೆ ಸಕಾಲದಲ್ಲಿ ಆಮ್ಲಜನಕ, ವೆಂಟಿಲೇಟರ್‌, ವೈದ್ಯರು ಹೀಗೆ ಅಗತ್ಯ ಚಿಕಿತ್ಸೆ ಸಿಕ್ಕಿದ್ದರೆ ಈ ಎಲ್ಲರೂ ಬದುಕುಳಿಯುತ್ತಿದ್ದರು. ಆರೋಗ್ಯ ಮಂತ್ರಿ ಸುಧಾಕರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್‌ ಕುಮಾರ್‌ ಅವರು ವೈದ್ಯರ ಜೊತೆ ಸಭೆ ನಡೆಸಿ ಸತ್ತವರು ಮೂರೇ ಮಂದಿ ಎಂದು ಸುಳ್ಳು ಹೇಳಿದ್ದರು. ಇವರು ಎಂಥಾ ಕುತಂತ್ರಿಗಳು ಎಂಬುದು ಇದರಲ್ಲೇ ಗೊತ್ತಾಗುತ್ತದೆ. ಸತ್ತವರ ಸಂಬಂಧಿಕರಿಗೆ, ಕುಟುಂಬದವರಿಗೆ ತಮ್ಮವರ ಸಾವಿಗೆ ನಿಜ ಕಾರಣ ಏನು ಎಂಬುದು ಗೊತ್ತಿದೆ. ಆದರೂ ಹೀಗೆ ಸುಳ್ಳು ಹೇಳಿದ್ದರು. ಸತ್ತವರಲ್ಲಿ ಬಹುತೇಕರು ಕುಟುಂಬಕ್ಕೆ ಆದಾಯದ ಮೂಲವಾಗಿದ್ದವರು. ಒಬ್ಬ ಮೃತನ ಕುಟುಂಬದಲ್ಲಿ ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ಮೃತನ ಹೆಂಡತಿ ಈಗ ಮಕ್ಕಳನ್ನು ಶಾಲೆಗೆ ಕಳಿಸಬೇಕು, ಕೂಲಿ ಮಾಡಿ ಜೀವನ ನಿರ್ವಹಣೆ ಮಾಡಬೇಕು. ಇದೆಲ್ಲಾ ಸಾಧ್ಯವೇ? ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಅಲ್ಲವಾ? 

ಸರ್ಕಾರ ಈ ದುರಂತದಲ್ಲಿ ಮಡಿದವರಿಗೆ ಪರಿಹಾರ ನೀಡಿಲ್ಲ. ಮೃತರ ಕುಟುಂಬದವರು ನೀಡಿದ್ದ ಅರ್ಜಿಯನ್ನು ಕೂಡ ಈ ವ್ಯಕ್ತಿ ಆಮ್ಲಜನಕ ಕೊರತೆಯಿಂದ ಸತ್ತಿಲ್ಲ ಎಂದು ಹೇಳಿ ತಿರಸ್ಕಾರ ಮಾಡಲಾಗಿದೆ. ನಾನು ಮತ್ತು ಡಿ.ಕೆ ಶಿವಕುಮಾರ್‌ ಅವರು ದುರಂತ ಸಂಭವಿಸಿದ ವೇಳೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೆವು. ಆ ವೇಳೆ ಎಲ್ಲ ಅಧಿಕಾರಿಗಳು 36 ಜನರ ಸಾವಿಗೆ ಆಮ್ಲಜನಕದ ಕೊರತೆ ಕಾರಣ ಎಂದು ಒಪ್ಪಿಕೊಂಡಿದ್ದರು. ಆರೋಗ್ಯ ಸಚಿವ ಸುಧಾಕರ್‌ ಅವರು ಇವರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ. ಇದು ಕೇವಲ ಒಂದು ಉದಾಹರಣೆ ಮಾತ್ರ. 

ನಮ್ಮ ಪಾದಯಾತ್ರೆ ಕಂಡು ಬಿಜೆಪಿ ಅವರಿಗೆ ಹತಾಶೆ ಕಾಡುತ್ತಿದೆ. ಇದೇ ಕಾರಣಕ್ಕೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರ ಹತಾಶೆ ಎಷ್ಟಿದೆ ಎಂದರೆ ಇಂದು ಕೆಲವು ಪತ್ರಿಕೆಗಳಲ್ಲಿ ಜಾಹಿರಾತು ನೀಡಿ 'ದೇಶ ವಿಭಜನೆಗೆ ನೆಹರು ಕಾರಣ, ಅವರ ಮೊಮ್ಮಗನ ಮಗ ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ವಿಪರ್ಯಾಸ' ಎಂದು ತಲೆಬುಡವಿಲ್ಲದೆ ಆರೋಪ ಮಾಡುತ್ತಿದ್ದಾರೆ. 1937ರಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಸಾವರ್ಕರ್‌ ಅವರು ಹಿಂದೂ ಮತ್ತು ಮುಸ್ಲಿಂಮರನ್ನು ಒಳಗೊಂಡ ಭಾರತ ಒಂದು ದೇಶವಾಗಿ ಇರಲು ಸಾಧ್ಯವಿಲ್ಲ, ಇಲ್ಲಿ ಹಿಂದೂ ಮತ್ತು ಮುಸ್ಲಿಂಮರು ಒಟ್ಟಾಗಿ ವಾಸವಿರಲು ಸಾದ್ಯವಿಲ್ಲ, ದೇಶವಿಭಜನೆ ಆಗಲೇಬೇಕು ಎಂದು ಹೇಳಿದ್ದರು. ಇಂಥವರು ನಮಗೆ ಪಾಠ ಮಾಡಲು ಬರುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷ ಭಾರತವನ್ನು ಒಟ್ಟುಗೂಡಿಸಿದೆ. 600 ಅಧಿಕ ಸಣ್ಣ ಪುಟ್ಟ ರಾಜ್ಯಗಳನ್ನು ಒಟ್ಟುಗೂಡಿಸಿ ಒಂದು ದೇಶ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಪಕ್ಷ. ಆರ್‌,ಎಸ್‌,ಎಸ್‌ ನ ಯಾರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರ? ಒಂದು ಹೆಸರು ಹೇಳಿ ಸಾಕು. ಹೆಡಗೆವಾರ್‌, ಗೋಲ್ವಾಲ್ಕರ್‌ ಅವರು ಭಾಗವಹಿಸಿದ್ದರ? ಯಾರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರ? ನೆಹರು ಕುಟುಂಬ ಈ ದೇಶಕ್ಕಾಗಿ ಬೇಕಾದಷ್ಟು ತ್ಯಾಗ ಬಲಿದಾನ ಮಾಡಿದೆ. ಇಂದಿರಾ ಗಾಂಧಿಯವರನ್ನು ಯಾಕೆ ಗುಂಡು ಹೊಡೆದು ಕೊಂದರು? ರಾಜೀವ್‌ ಗಾಂಧಿ ಅವರನ್ನು ಯಾಕೆ ಹತ್ಯೆ ಮಾಡಿದರು? ನೆಹರು 9 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದು ಯಾಕೆ? ಅವರೇನು ಅಮಿತ್‌ ಶಾ ಅವರಂತೆ ತಮ್ಮ ಸ್ವಂತ ಅಪರಾಧಕ್ಕಾಗಿ ಜೈಲು ಸೇರಿದ್ದರಾ? ದೇಶಕ್ಕಾಗಿ ಅಲ್ಲವೇ? 

ಬಿಜೆಪಿಗೆ ಜನರನ್ನು ದಾರಿ ತಪ್ಪಿಸುವುದೇ ದೊಡ್ಡ ಕೆಲಸವಾಗಿದೆ. ಬಿಜೆಪಿ ಒಂದು ಸುಳ್ಳು ಉತ್ಪಾದಕಾ ಕಾರ್ಖಾನೆಯಾಗಿದೆ. ನಮ್ಮ ಪಾದಯಾತ್ರೆಗೆ ಅದ್ಭುತವಾದ ಜನಸ್ಪಂದನೆ ವ್ಯಕ್ತವಾಗುತ್ತಿದೆ. ಇಷ್ಟು ಬೃಹತ್‌ ಪ್ರಮಾಣದ ಸ್ಪಂದನೆಯನ್ನು ನಾವೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಇದರಿಂದ ವಿಚಲಿತರಾಗಿ ಜನರಿಗೆ ತಪ್ಪು ಮಾಹಿತಿ ಕೊಡುವುದು, ಸುಳ್ಳು ಜಾಹಿರಾತು ನೀಡುವುದನ್ನು ಬಿಜೆಪಿ ಅವರು ಮಾಡುತ್ತಿದ್ದಾರೆ. ಇಂಥಾ ಹಲವು ಸುಳ್ಳುಗಳನ್ನು ಹಿಂದೆಯೂ ಹೇಳಿದ್ದಾರೆ. ಅದರ ಜೊತೆಗೆ ಇದೂ ಒಂದು ಸುಳ್ಳು. 

ರಾಹುಲ್‌ ಗಾಂಧಿ ಅವರು ಐತಿಹಾಸಿಕ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ದೇಶದಲ್ಲಿ 150ಕ್ಕೂ ಹೆಚ್ಚು ದಿನಗಳ ಕಾಲ 3570 ಕಿ.ಮೀ ಕ್ರಮಿಸಲಿದ್ದಾರೆ. ಕರ್ನಾಟಕದಲ್ಲಿ 510 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಈ ಪಾದಯಾತ್ರೆಗೆ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಅದ್ಭುತವಾದ ಸ್ಪಂದನೆ ಸಿಕ್ಕಿದೆ. ಬಹುಶಃ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇದೇ ರೀತಿ ಸ್ಪಂದನೆ ಸಿಗುತ್ತದೆ ಎಂದು ಬಿಜೆಪಿಗೆ ಭಯ ಶುರುವಾಗಿದೆ. ದೇಶದ ಜನರ ಅಭಿಪ್ರಾಯ ಬದಲಾಗುತ್ತಿದೆ, ಜನ ಭಯದಿಂದ ಹೊರಬರುತ್ತಿದ್ದಾರೆ. ಹೀಗಾಗಿ ಬಿಜೆಪಿ ನಮ್ಮ ವಿರುದ್ಧ ಅಪಪ್ರಚಾರ ಮಾಡಲು ಆರಂಭಿಸಿದೆ. 

40% ಕಮಿಷನ್‌ ಆರೋಪ ಮಾಡಿರುವುದು ಗುತ್ತಿಗೆದಾರರ ಸಂಘದವರು. ಈ ಬಗ್ಗೆ 6-7-2021ರಲ್ಲಿ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯದಲ್ಲಿ 40% ಕಮಿಷನ್‌ ನಡೆಯುತ್ತಿದ್ದು, ಇದರಿಂದ ನಮಗೆ ಕಿರುಕುಳ ಆಗುತ್ತಿದೆ. ದಯವಿಟ್ಟು ತಪ್ಪಿಸಿ ಎಂದು ಮನವಿ ಮಾಡಿದ್ದರು. ಆ ನಂತರ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈಗ ಸರ್ಕಾರ ನಮಗೆ ದಾಖಲಾತಿ ಕೊಡಿ ಎಂದು ಹೇಳುತ್ತಿದೆ. ನರೇಂದ್ರ ಮೋದಿ ಅವರು 2018 ರ ಮಾರ್ಚ್‌ ನಲ್ಲಿ ಬೆಂಗಳೂರಿನಲ್ಲಿ ಭಾಷಣ ಮಾಡುವಾಗ ಸಿದ್ದರಾಮಯ್ಯ ಅವರ ಸರ್ಕಾರ 10% ಕಮಿಷನ್‌ ಸರ್ಕಾರ ಎಂದು ಹೇಳಿದ್ದರು. ಒಬ್ಬ ಪ್ರಧಾನಿಯಾಗಿ ಈ ರೀತಿ ಆಧಾರ ರಹಿತವಾಗಿ ರಾಜಕೀಯ ಭಾಷಣ ಮಾಡಬಹುದಾ? 

ಗುತ್ತಿಗೆದಾರರು ತಾವು ಮಾಡಿರುವ ಆರೋಪ ಸಾಬೀತು ಮಾಡಲು ಸಾಧ್ಯವಿಲ್ಲ ಎಂದರೆ ಕಾನೂನು ಕ್ರಮ ಎದುರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡಿ. ಸತ್ಯ ಗೊತ್ತಾಗಲಿ. ನಮ್ಮ ಕಾಲದಲ್ಲಿ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆವು. ಆಗ ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇತ್ತು. ಈ ಸರ್ಕಾರ ಯಾಕೆ ತನಿಖೆಗೆ ಕೊಡಬಾರದು? 

ಡಿ.ಕೆ ರವಿ ಆತ್ಮಹತ್ಯೆ ಮಾಡಿಕೊಂಡ ವೇಳೆ ಗಲಾಟೆ ಮಾಡಿ, ಅವರ ತಂದೆ ತಾಯಿಗಳನ್ನು ವಿಧಾನಸೌಧದ ಮುಂದೆ ಕೂರಿಸಿ ಪ್ರತಿಭಟನೆ ಮಾಡಿಸಿದ್ರು. ಆಗ ಅವರ ಪೋಷಕರ ಮನವಿಯಂತೆ ನಾನು ತಕ್ಷಣ ಸಿಇಐ ತನಿಖೆಗೆ ಒಪ್ಪಿಸಿದೆ. ಒಂದಂಕಿ ಲಾಟರಿ ಪ್ರಕರಣದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಆರೋಪ ಮಾಡಿದ್ರು, ಅವರ ಬಳಿ ದಾಖಲೆ ಇಲ್ಲದಿದ್ರೂ ನಾನು ಡಿಐಜಿ ಅವರನ್ನು ಅಮಾನತು ಮಾಡಿ ಸಿಬಿಐ ತನಿಖೆಗೆ ವಹಿಸಿದ್ದೆ. 
ಸರ್ಕಾರ ಕಾಂಗ್ರೆಸ್ ವಿರುದ್ಧ ಪೊಲೀಸನವರನ್ನು ಛೂ ಬಿಟ್ಟಿದೆ. ನಾನು, ಡಿ.ಕೆ. ಶಿವಕುಮಾರ್‌ ಹಾಗೂ ಸುರ್ಜೇವಾಲಾ ಅವರು PayCM ಪೋಸ್ಟರ್‌ ಅಂಟಿಸಿದ್ದಕ್ಕೆ ನಮ್ಮ ಮೇಲೆ ಕೇಸ್‌ ಹಾಕಿದ್ದಾರೆ. ಇಂದು PayCM ಟೀ ಶರ್ಟ್ ಧರಿಸಿದ್ದ ನಮ್ಮ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ. ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಜೀವಂತವಿದೆಯೇ?

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಣೆ ಪೊಲೀಸರ ಕಾರ್ಯಾಚರಣೆ : ಲೋನ್ ಆ‌ಪ್‌ ಕಾಲ್‌ ಸೆಂಟರ್‌ನ 11 ಮಂದಿ ಅರೆಸ್ಟ್..!‌

ನಾವು ಜನರ ನಾಡಿ ಮಿಡಿತ ನೋಡಿ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದೇವೆ. ಅಧಿಕಾರಕ್ಕೆ ಬಂದ ಮೇಲೆ ಏನು ಮಾಡುತ್ತೇವೆ ಎಂದು ಈಗಲೇ ಹೇಳೋದು ಸರಿಯಲ್ಲ. ಹಾಗೆ ಹೇಳಿದ್ರೆ ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲೆಸಿದಂತಾಗುತ್ತದೆ. ನಿಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿಲ್ವಾ ಎಂದು ಬಿಜೆಪಿ ಅವರು ನಮ್ಮನ್ನು ಕೇಳುತ್ತಾರೆ. ಅದಕ್ಕೆ ನಾನು ಹೇಳಿದ್ದೆ, 2006 ರಿಂದ ಈ ವರೆಗಿನ ಎಲ್ಲವನ್ನು ನ್ಯಾಯಾಂಗ ತನಿಖೆ ಮಾಡಿಸಿ, ಯಾರು ತಪ್ಪು ಮಾಡಿದ್ದಾರೆ ಗೊತ್ತಾಗಲಿ ಎಂದು. ಬಸವರಾಜ ಬೊಮ್ಮಾಯಿ ಅವರ ಮಾತಿನ ಧಾಟಿಯಲ್ಲೇ ಹೇಳುವುದಾದರೆ ಅದಕ್ಕೆ ಬಿಜೆಪಿಗೆ ಧಮ್‌ ಇಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News