ಬೆಂಗಳೂರು: ರಾಜ್ಯದಲ್ಲಿ ಎರಡು ತಿಂಗಳ ಹಿಂದೆಯೇ ಜಾರಿಗೆ ಬರಬೇಕಿದ್ದ ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಕೇಂದ್ರ ಚುನಾವಣಾ ಆಯೋಗ ಸಮ್ಮತಿಸಿದೆ. ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿ ಇದೇ(ಏಪ್ರಿಲ್) ತಿಂಗಳಿನಿಂದ ಅನ್ವಯವಾಗಲಿದೆ.
ಆರನೇ ವೇತನ ಆಯೋಗದ ಶಿಫಾರಸುಗಳನ್ನು ಅನ್ವಯಿಸಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸಿದ್ದ ಸರ್ಕಾರ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪರಿಷ್ಕೃತ ವೇತನ ಅನ್ವಯ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಇದೀಗ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಅನ್ವಯಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪತ್ರ ರವಾನಿಸಿದ್ದು, 2018ರ ಏಪ್ರಿಲ್ 1ರಿಂದ ಪರಿಷ್ಕೃತ ವೇತನ ಶ್ರೇಣಿ ಅನ್ವಯವಾಗಲಿದೆ.
5.20 ಲಕ್ಷ ನೌಕರರು, 5.73 ಲಕ್ಷ ಪಿಂಚಣಿದಾರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ 73,000 ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯ ಪ್ರಯೋಜನ ಸಿಗಲಿದೆ.