ಬೆಂಗಳೂರು: ಬ್ಯಾಂಕ್ ಮತ್ತು ಫೈನಾನ್ಸ್ ಕಂಪನಿಗಳ ಹೆಸರಿನಲ್ಲಿ ನಿರಾಕ್ಷೇಪಣ ಪತ್ರ (ಎನ್ಓಸಿ) ಪಡೆದು ಮಾಲೀಕರಿಂದ ಕಾರು ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಮೂವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಭಾಕರ್, ಪ್ರಕಾಶ್ ಮತ್ತು ಕಿರಣ್ ಬಂಧಿತರು. ಸದ್ಯ ಆರೋಪಿಗಳಿಂದ 90 ಲಕ್ಷ ಬೆಲೆಯ ವಿವಿಧ ಕಂಪನಿಗಳ ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳೆದ ತಿಂಗಳು 25 ರಂದು ಕುಮಾರ್ ನಾಯ್ಕ್ ಎಂಬುವರು ತಮ್ಮ ಮಾರುತಿ ಸುಜುಕಿ ಕಾರಿನ ನೋಂದಣಿ ಸಂಖ್ಯೆ ಹಾಗೂ ಕಾರಿನ ಮಾಲೀಕತ್ವ ಆರ್ ಟಿಓನಲ್ಲಿ ಬದಲಾಯಿಸಿ ಮೋಸ ಮಾಡಿರುವುದಾಗಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ನೇತೃತ್ವದ ತಂಡ ಖತರ್ನಾಕ್ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ!
ರಾಷ್ಟ್ರೀಯ ಬ್ಯಾಂಕ್ ಸೇರಿದಂತೆ ವಿವಿಧ ಹಣಕಾಸು ಕಂಪನಿಗಳು ತಮ್ಮ ಗ್ರಾಹಕರ ಕಾರುಗಳ ಮೇಲಿನ ಲೋನ್ ಇರುವುದನ್ನು ಕಂಡುಕೊಳ್ಳುತ್ತಿದ್ದ ಆರೋಪಿಗಳು ಕಾರಿನ ಮಾಲೀಕರನ್ನ ಸಂಪರ್ಕಿಸಿ ನಿಮ್ಮ ಕಾರುಗಳ ಮೇಲಿನ ಸಾಲವನ್ನ ನಾವೇ ಕಟ್ಟಿಕೊಳ್ಳುತ್ತೇವೆ ಎಂದು ನಂಬಿಸಿ ಅವರಿಂದ ಕಡಿಮೆ ಬೆಲೆಗೆ ಕಾರು ಖರೀದಿಸಿ ಆರ್ ಟಿಓ ಮುಖಾಂತರ ಅಸಲಿ ಕಾರುಗಳ ಮಾಲೀಕರ ಹೆಸರನ್ನು ಬದಲಾಯಿಸಿ ಬೇರೆಯವರಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು.
ಆರೋಪಿ ಕಿರಣ್ ಈ ಹಿಂದೆ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ವಿವಿಧ ಕಾರಣಗಳಿಗಾಗಿ ಕೆಲಸ ತೊರೆದಿದ್ದ. ಕುಡಿತದ ಚಟ ಅಂಟಿಸಿಕೊಂಡಿದ್ದ ಕಿರಣ್ , ಬ್ಯಾಂಕ್ ಗಳು ನೀಡುವ ಎನ್ಓಸಿ ಬಗ್ಗೆ ತಿಳಿದುಕೊಂಡಿದ್ದ. ಯಾವುದೇ ಬ್ಯಾಂಕ್ ಆಥವಾ ಫೈನಾನ್ಸ್ ಕಂಪನಿಗಳ ಹೆಸರಿನಲ್ಲಿ ಕ್ಷಣಾರ್ಧದಲ್ಲಿ ಎನ್ಓಸಿ ತಯಾರು ಮಾಡುತ್ತಿದ್ದ. ಎನ್ ಓಸಿ ಪಡೆದುಕೊಂಡ ಆರೋಪಿಗಳು ಕಾರಿನ ಮೇಲೆ ಯಾವುದೇ ಲೋನ್ ಇಲ್ಲ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಮಾರಾಟ ಮಾಡುತ್ತಿದ್ದರು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.