ಬೆಂಗಳೂರು: ಕೊಡಗಿನಲ್ಲಿ ರೆಸಾರ್ಟ್ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿಯುವುದನ್ನು ಕೂಡಲೇ ನಿಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಕೊಡಗಿನ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿದು ಹಾಕಲು ಅರಣ್ಯ ಇಲಾಖೆಯೇ ಅನುಮತಿ ನೀಡಿದೆ ಎನ್ನಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳೂ ಪ್ರಸಾರವಾಗಿದ್ದವು. ಅಲ್ಲದೆ, ಮರಗಳನ್ನು ಕಡಿಯುವುದಕ್ಕೆ ಅಲ್ಲಿನ ಜನತೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಅರಿತ ಸಿಎಂ ಕೂಡಲೇ ಮರಗಳನ್ನು ಕಡಿಯುವುದನ್ನು ನಿಲ್ಲಿಸುವಂತೆ ಸೂಚಿಸಿದ್ದು, ವರದಿ ನೀಡುವಂತೆ ಮುಖ್ಯ ಅರಣ್ಯಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಕಾರ್ಯಾಲಯ, "ಕೊಡಗು ಜಿಲ್ಲೆಯಲ್ಲಿ 800 ಮರಗಳನ್ನು ಕಡಿಯುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದೇ ಮರಗಳನ್ನು ಕಡಿಯುವುದನ್ನು ನಿಲ್ಲಿಸಿ, ವರದಿಯನ್ನು ನೀಡುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ" ಎಂದು ತಿಳಿಸಿದೆ.
*ಕೊಡಗು ಜಿಲ್ಲೆ:ಮರ ಕಡಿಯುವುದನ್ನು ನಿಲ್ಲಿಸಲು ಸೂಚನೆ*
ಕೊಡಗು ಜಿಲ್ಲೆಯಲ್ಲಿ 800 ಮರಗಳನ್ನು ಕಡಿಯುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದೇ ಮರಗಳನ್ನು ಕಡಿಯುವುದನ್ನು ನಿಲ್ಲಿಸಿ, ವರದಿಯನ್ನು ನೀಡುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ— CM of Karnataka (@CMofKarnataka) June 7, 2019
ಕೆಲ ತಿಂಗಳ ಹಿಂದಷ್ಟೇ ಭೀಕರ ಪ್ರವಾಹದಿಂದಾಗಿ ತತ್ತರಿಸಿದ್ದ ಕೊಡಗಿಗೆ, ಈಗ 800 ಮರಗಳ ಹನನದಿಂದ ಮತ್ತಷ್ಟು ಪ್ರಕೃತಿ ನಾಶವಾಗಲಿದೆ ಎಂಬುದನ್ನು ಮನಗಂಡ ಸಿಎಂ ಈ ಆದೇಶ ಹೊರಡಿಸಿದ್ದಾರೆ.