ಮುಖ್ಯಮಂತ್ರಿ ಯಡಿಯೂರಪ್ಪ 'ಒನ್‍ಮ್ಯಾನ್ ಶೋ' ಮಾಡ್ತಿದಾರೆ: ಮಾಜಿ ಸಿಎಂ ಸಿದ್ದರಾಮಯ್ಯ

ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಆದರೆ ರಾಜ್ಯ ಪ್ರವಾಹಕ್ಕಾಗಿ ಕೇಂದ್ರದಿಂದ ಈವರೆಗೂ ಒಂದು ರೂಪಾಯಿ ಕೊಡುವುದಾಗಿ ಎಲ್ಲಿಯೂ ಹೇಳಿಲ್ಲ- ಮಾಜಿ ಸಿಎಂ ಸಿದ್ದರಾಮಯ್ಯ  

Last Updated : Aug 19, 2019, 01:34 PM IST
ಮುಖ್ಯಮಂತ್ರಿ ಯಡಿಯೂರಪ್ಪ 'ಒನ್‍ಮ್ಯಾನ್ ಶೋ' ಮಾಡ್ತಿದಾರೆ: ಮಾಜಿ ಸಿಎಂ ಸಿದ್ದರಾಮಯ್ಯ title=

ಹುಬ್ಬಳ್ಳಿ: ನೆರೆ ಪರಿಹಾರಕ್ಕೆ ಕೇಂದ್ರ ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರವಾಹ ಬಂದು ರಾಜ್ಯದ ಜನ ಸಂಕಷ್ಟಕ್ಕೀಡಾಗಿ 15 ದಿನ ಕಳೆದರೂ ಕೇಂದ್ರದಿಂದ ಒಂದೇ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒನ್‍ಮ್ಯಾನ್ ಶೋ ಮಾಡಿಕೊಂಡು ತಿರುಗುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ಸ್ವಕ್ಷೇತ್ರ ಬಾದಾಮಿಗೆ ತೆರಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನನ್ನ ಅಂದಾಜಿನ ಪ್ರಕಾರ ಪ್ರವಾಹದಿಂದಾಗಿ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ರೂ. ಹಾನಿಯಾಗಿದೆ. 6 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೂ ಈವರೆಗೆ ಕೇಂದ್ರದಿಂದ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಆದರೆ ರಾಜ್ಯ ಪ್ರವಾಹಕ್ಕಾಗಿ ಕೇಂದ್ರದಿಂದ ಈವರೆಗೂ ಒಂದು ರೂಪಾಯಿ ಕೊಡುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರು ಸ್ವತಃ ಬಂದು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಸಿಎಂ ಬಿಎಸ್​​ವೈ ಕೂಡ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಬಗ್ಗೆ ವಿವರಿಸಿದ್ದಾರೆ. ಆದರೂ ಕೇಂದ್ರ ಸರ್ಕಾರ ಎಲ್ಲಿಯೂ ರಾಜ್ಯ ಪ್ರವಾಹಕ್ಕೆ ಹಣ ಬಿಡುಗಡೆ ಮಾಡುವುದಾಗಿ ಹೇಳಿಲ್ಲ.

2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದಿದ್ದ ಆಗಿನ ಪ್ರಧಾನಿ ಮನಮೋಹನ್‍ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ ಸ್ಥಳದಲ್ಲೇ 1600 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ, ಯಡಿಯೂರಪ್ಪ ಈವರೆಗೆ ಕೇಂದ್ರಕ್ಕೆ ಮನವಿಯನ್ನೇ ಸಲ್ಲಿಸಿಲ್ಲ. ನರೇಂದ್ರ ಮೋದಿ, ಅಮಿತ್ ಷಾ ಕಂಡರೆ ಬಿಎಸ್​​ವೈ ಗಡಗಡ ನಡುಗುತ್ತಾರೆ. ಪಾಪ ಅವರಿಗೆ ಸಿಕ್ಕಾಪಟ್ಟೆ ಭಯ. ಏಕೆ ಭಯ ಅಂತ ಯಡಿಯೂರಪ್ಪ, ಶೆಟ್ಟರ್ ಅವರೇ ಹೇಳಬೇಕು. ಅವರಿಗೆ ಭಯವಿದ್ದರೆ ನಮ್ಮನ್ನಾದರೂ ಪ್ರಧಾನಿ ಮೋದಿ ಹತ್ತಿರ ಕರೆದುಕೊಂಡು ಹೋಗಲಿ. ನಾವು ಪ್ರವಾಹಕ್ಕೆ ಪರಿಹಾರ ನೀಡುವಂತೆ ಕೇಳುತ್ತೇವೆ ಎಂದರು.

ರಾಜ್ಯ ಸಂಪುಟ ರಚನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪನವರಿಗೆ ಮಂತ್ರಿಮಂಡಲ ರಚಿಸಲು ಸಂವಿಧಾನಬದ್ಧ ಅಧಿಕಾರವಿದೆ. ಆದರೂ ಅವರು ಅಮಿತ್ ಷಾ ಮರ್ಜಿಯಲ್ಲಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಜಿಲ್ಲಾ ಮಂತ್ರಿಗಳಿಲ್ಲದೆ ಸ್ವಾಂತಂತ್ರ್ಯೋತ್ಸವವನ್ನು ಆಚರಿಸಲಾಯಿತು.  ಹೊಸ ಸರ್ಕಾರ ರಚನೆಯಾಗಿ ತಿಂಗಳಾಗುತ್ತಾ ಬಂದಿದ್ದರೂ ಇದುವರೆಗೂ ಸಚಿವ ಸಂಪುಟ ರಚನೆ ಆಗಿಲ್ಲ. ಸಿಎಂ ಬಿಎಸ್​ವೈ ಒನ್​ ಮ್ಯಾನ್​ ಶೋ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

Trending News