'ರಾಜ್ಯ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು'

ನಾವು ರಾಜ್ಯದ ಜನರ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ, ನಾವು ಅಧಿಕಾರಕ್ಕೆ ಬರಬೇಕು ಎನ್ನುವುದಕ್ಕಿಂತ ರಾಜ್ಯ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

Written by - Zee Kannada News Desk | Last Updated : Feb 26, 2022, 12:03 AM IST
  • ಬಿಜೆಪಿಯವರು ಪಾದಯಾತ್ರೆಯನ್ನು ರಾಜಕೀಯ ದುರ್ಬಿನ್ ಮೂಲಕ ನೋಡುತ್ತಾರೆ.
  • ಬಿಜೆಪಿ ಅವರಿಗೆ ರಾಷ್ಟ್ರದ ಬಗ್ಗೆ ಪ್ರೀತಿ, ಗೌರವ ಇಲ್ಲ.
  • ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ
'ರಾಜ್ಯ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು'  title=

ನವದೆಹಲಿ: ನಾವು ರಾಜ್ಯದ ಜನರ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ, ನಾವು ಅಧಿಕಾರಕ್ಕೆ ಬರಬೇಕು ಎನ್ನುವುದಕ್ಕಿಂತ ರಾಜ್ಯ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಜೊತೆಗೂಡಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ಧರಾಮಯ್ಯ(Siddaramaiah) ಮಾತನಾಡಿದ್ದಿಷ್ಟು...

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ವರ್ಷವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಈಗಿನ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದು ಒಂದು ಅನೈತಿಕ ಸರ್ಕಾರವಾಗಿ ನಡೀತಾ ಇದೆ. ಕಳೆದ ಎರಡೂವರೆ ವರ್ಷಗಳಿಂದ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ, ಹೀಗಾಗಿ ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ. ಜನ ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಇದು ಒಂದು ನಿಷ್ಕ್ರಿಯ, ಭ್ರಷ್ಟ ಸರ್ಕಾರ: 

ಸರ್ಕಾರ ಕೊವಿಡ್ 19 ಅನ್ನು ಕೂಡ ಸರಿಯಾಗಿ ನಿಭಾಯಿಸದೆ ಎರಡನೇ ಅಲೆಯಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಇದು ಅಭಿವೃದ್ಧಿ ಶೂನ್ಯ ಸರ್ಕಾರ. ಹೀಗಾಗಿ ರಾಹುಲ್ ಗಾಂಧಿ ಅವರು ರಾಜ್ಯದ ಸುಮಾರು 16 ಜನ ಹಿರಿಯ ನಾಯಕರನ್ನು ದೆಹಲಿಗೆ ಕರೆದು ಸಭೆ ನಡೆಸಿ ರಾಜ್ಯದ ಸದ್ಯದ ಸ್ಥಿತಿಗತಿ, ಮುಂದೆ ನಾವು ಗೆಲ್ಲಬೇಕಾದರೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳು ಬಗ್ಗೆ ಚರ್ಚೆ, ಗೆಲ್ಲುವ ಅವಕಾಶ ಇರುವುದರಿಂದ ಎಚ್ಚರ ತಪ್ಪದೆ ಕೆಲಸ ಮಾಡಬೇಕು ಎಂಬ ಸಲಹೆ ಹಾಗೂ ಮತ್ತೆ ಅಧಿಕಾರಕ್ಕೆ ಬರಲು ಅಗತ್ಯವಿರುವ ಬೆಂಬಲ, ಸಹಕಾರವನ್ನು ತಾವು ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. 

ಇದನ್ನೂ ಓದಿ: HDK: ‘ತಮ್ಮ ಪಕ್ಷದ ಕಾರ್ಯಕರ್ತರನ್ನೇ ರಕ್ಷಣೆ ಮಾಡದವರು ರಾಜ್ಯವನ್ನು ಹೇಗೆ ರಕ್ಷಣೆ ಮಾಡ್ತಾರೆ?’

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ: 

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವ ಬಗ್ಗೆ ಹೈಕಮಾಂಡ್ ಗೆ ಸಂದೇಶ ಸಿಕ್ಕಂತಿದೆ. ಹಾಗಾಗಿ ಅವರು ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಇತರೆ ಎಲ್ಲಾ ನಾಯಕರು ಒಗ್ಗೂಡಿ, ಚೆನ್ನಾಗಿ ಕೆಲಸ ಮಾಡುತ್ತಿದ್ದೀರ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂಬ ಮಾಹಿತಿ ನಮಗಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು. ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಬಿಜೆಪಿಯವರು ನಮ್ಮ ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಅವೆಲ್ಲ ಬರಿ ಸುಳ್ಳು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ ಕಾಂಗ್ರೆಸ್ ಮಾತ್ರ, ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಹೀಗಿದ್ದಾಗ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತೆ, ಭಿನ್ನಾಭಿಪ್ರಾಯವೇ ಇಲ್ಲ ಅಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರಲ್ಲ.ನಾವು ರಾಜ್ಯದ ಜನರ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ, ನಾವು ಅಧಿಕಾರಕ್ಕೆ ಬರಬೇಕು ಎನ್ನುವುದಕ್ಕಿಂತ ರಾಜ್ಯ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದಾಗಿದೆ. 

ಬಿಜೆಪಿ ಅವರಿಗೆ ರಾಷ್ಟ್ರದ ಬಗ್ಗೆ ಪ್ರೀತಿ, ಗೌರವ ಇಲ್ಲ.

ಬಿಜೆಪಿ ಅವರಿಗೆ ರಾಷ್ಟ್ರದ ಬಗ್ಗೆ ಪ್ರೀತಿ, ಗೌರವ ಇಲ್ಲ. ಸಚಿವ ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದರೂ ಅವರನ್ನು ಸಂಪುಟದಿಂದ ವಜಾ ಮಾಡಿಲ್ಲ.ಅವರ ಹೇಳಿಕೆ ಸಂಪೂರ್ಣ ತಪ್ಪು, ಕಾಂಗ್ರೆಸ್ ಮಾಡುತ್ತಿರುವ ಹೋರಾಟ ಸರಿಯಾಗಿದೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಹೇಳಿದ್ದಾರೆ.ಇಷ್ಟೆಲ್ಲಾ ಆದರೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಮೊನ್ನೆ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯಾದಾಗ ಆತನ ಶವಯಾತ್ರೆಯ ಮುಂದಾಳತ್ವ ವಹಿಸಿದ್ದು ಈಶ್ವರಪ್ಪ ಅವರು. ಅಲ್ಲಿ 144 ಸೆಕ್ಷನ್ ಹಾಕಿದ್ದು ಬಿಜೆಪಿ ಸರ್ಕಾರ, ಅದನ್ನು ಉಲ್ಲಂಘನೆ ಮಾಡಿದ್ದು ಬಿಜೆಪಿ ಸರ್ಕಾರದ ಸಚಿವರೆ. ಇದಕ್ಕಾಗಿ ಈಶ್ವರಪ್ಪ ಮೇಲೆ ಒಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಿತ್ತು. ಅದನ್ನೂ ಮಾಡಿಲ್ಲ. ಹಾಗಾಗಿ ನಾವು ರಾಜ್ಯಪಾಲರನ್ನು ಭೇಟಿಯಾಗಿ ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ಮನವಿ ಪತ್ರ ನೀಡಿದ್ದೆವು.ಮೇಲ್ನೋಟಕ್ಕೆ ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವುದು ಗೊತ್ತಾಗುತ್ತಿದೆ, ಈ ಕೆಲಸವನ್ನು ಯಾರೇ ಮಾಡಿದರು ಅದು ಅಪರಾಧ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದು ಎಂದು ಕಾನೂನಿದೆ. ಜೆ.ಪಿ ನಡ್ಡಾ ಅವರೇ ಈಶ್ವರಪ್ಪ ಅವರ ರಾಷ್ಟ್ರ ದ್ರೋಹದ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಪಕ್ಷದ ತಾಲೂಕು, ಜಿಲ್ಲೆಗಳ ಕಾರ್ಯಕರ್ತರು ಹೋರಾಟ ಮಾಡಿ, ತಹಶಿಲ್ದಾರರು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ, ಹೋರಾಟ ಹೀಗೆಯೇ ಮುಂದುವರೆಯುತ್ತೆ. 

ಮೇಕೆದಾಟು ಯೋಜನೆ:

ನಮ್ಮ ಸರ್ಕಾರ ಮೇಕೆದಾಟು ಯೋಜನೆಗೆ 2017 ರಲ್ಲಿ ವಿಸ್ತೃತ ಯೋಜನಾ ವರದಿ ತಯಾರಿಸಿ, ಕೇಂದ್ರ ಜಲಮಂಡಳಿಗೆ ನೀಡಿತ್ತು. ಅವರು ಕೆಲವು ಸ್ಪಷ್ಟೀಕರಣ ಕೇಳಿ ರಾಜ್ಯಕ್ಕೆ ವಾಪಾಸು ಕಳಿಸಿದ್ದರು, ಆಗ ನಮ್ಮ ಸರ್ಕಾರ ಇರಲಿಲ್ಲ, ಸಮ್ಮಿಶ್ರ ಸರ್ಕಾರ ಇತ್ತು. ಡಿ.ಕೆ ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದರು, ಅವರು ಕೇಂದ್ರ ಜಲಮಂಡಳಿ ಕೇಳಿದ್ದ ಹೆಚ್ಚಿನ ಮಾಹಿತಿಯನ್ನು ಒದಗಿಸಿದ್ದರು ಮತ್ತು ಪರಿಷ್ಕೃತ ಯೋಜನಾ ವರದಿ ಮಾಡಿ ಕಳಿಸಿದ್ದರು. ಇನ್ನುಳಿದಿರೋದು ಪರಿಸರ ಅನುಮತಿ ಮಾತ್ರ. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು, ಯಡಿಯೂರಪ್ಪ ಎರಡು ವರ್ಷ, ಬಸವರಾಜ ಬೊಮ್ಮಾಯಿ ಏಳು ತಿಂಗಳು ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ್ದಾರೆ. ಇಷ್ಟು ಸಮಯದಲ್ಲಿ ಒಂದು ಪರಿಸರ ಅನುಮತಿ ಪಡೆಯಲು ಈ ಡಬ್ಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಗಿಲ್ಲ. 

ಇದು ಕುಡಿಯುವ ನೀರಿನ ಯೋಜನೆ. ಮಳೆಗಾಲದಲ್ಲಿ ಹರಿದು ಹೋಗಿ ಸಮುದ್ರ ಪಾಲಾಗುವ 67 ಟಿ.ಎಂ.ಸಿ ನೀರನ್ನು ಶೇಖರಿಸಿಟ್ಟು, ಬೆಂಗಳೂರು ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಯೋಜನೆಯ ಉದ್ದೇಶ. ಬೆಂಗಳೂರು ನಗರದ ಶೇ. 25 ಕ್ಕೂ ಹೆಚ್ಚು ಜನರಿಗೆ ಕಾವೇರಿ ನೀರು ಲಭ್ಯವಿಲ್ಲ. ಮೇಕೆದಾಟು ಯೋಜನೆ ಜಾರಿಯಾದರೆ ಬೆಂಗಳೂರು ನಗರಕ್ಕೆ ಮುಂದಿನ 50 ವರ್ಷಗಳ ವರೆಗೆ ಕುಡಿಯುವ ನೀರಿನ ಸಮಸ್ಯೆ ಇರಲ್ಲ.400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದರಿಂದ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕೆಗಳಿಗೆ ವಿದ್ಯುತ್ ಸಮಸ್ಯೆ ಕೂಡ ಆಗಲ್ಲ.

ಇದನ್ನೂ ಓದಿ: #HinduBoyMurder: ಶಿವಮೊಗ್ಗದಲ್ಲಿ ಮುಸಲ್ಮಾನರು ಎಂದೂ ಕೂಡ ಬಾಲ ಬಿಚ್ಚಿರಲಿಲ್ಲ: ಸಚಿವ ಕೆ ಎಸ್ ಈಶ್ವರಪ್ಪ 

ಇಂಥದ್ದೊಂದು ಜನಪರ ಯೋಜನೆ ಜಾರಿಯಾಗಬೇಕು ಎಂದು ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಇದು ರಾಜಕೀಯ ಪಾದಯಾತ್ರೆ ಅಲ್ಲ, ಅದಕ್ಕಾಗಿ ಎಲ್ಲಾ ಸಂಘ ಸಂಸ್ಥೆಗಳು, ಕಾರ್ಮಿಕ ಸಂಘಗಳು, ರೈತರು, ಕೂಲಿ ಕಾರ್ಮಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ನೇತ್ರತ್ವ ವಹಿಸಿದ್ದು ಬಿಟ್ಟರೆ ಇದು ಎಲ್ಲರ ಹೋರಾಟ.ಜನವರಿ 9 ರಿಂದ ಪಾದಯಾತ್ರೆ ಆರಂಭಿಸಿ ನಾಲ್ಕು ದಿನ ನಡೆದಿದ್ದೆವು, ಆ ವೇಳೆಗೆ ಕೊರೊನಾ ಮೂರನೇ ಅಲೆ ಆರಂಭವಾಗಿತ್ತು, ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು ಎಂಬ ಉದ್ದೇಶದಿಂದ ರಾಮನಗರ ತಲುಪಿದ ಮೇಲೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೆವು. 

ಮತ್ತೆ ಅಲ್ಲಿಂದಲೇ ಪಾದಯಾತ್ರೆ ಆರಂಭ ಮಾಡೋಣ ಎಂದು ನಾನು, ಅಧ್ಯಕ್ಷರು ಹಾಗೂ ಪಕ್ಷದ ಇತರೆ ಎಲ್ಲ ನಾಯಕರು ಸೇರಿ ತೀರ್ಮಾನ ಮಾಡಿದ್ದೆವು. ಬಜೆಟ್ ಅಧಿವೇಶ ಮಾರ್ಚ್ ನಲ್ಲಿ ಆರಂಭವಾಗುತ್ತಿದ್ದು, ಅದಕ್ಕಾಗಿ ಈ ತಿಂಗಳ 27 ರಿಂದಲೇ ಪಾದಯಾತ್ರೆ ಮಾಡೋಣ ಎಂದು ನಿರ್ಧರಿಸಿದ್ದೇವೆ. ಬೆಂಗಳೂರು ನಗರದಲ್ಲಿ 5 ದಿನದ ಬದಲು ಮೂರೇ ದಿನ ಪಾದಯಾತ್ರೆ ಮಾಡುತ್ತೇವೆ. 3 ನೇ ತಾರೀಖಿನಂದು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಭೆ ನಡೆಸಿ ಪಾದಯಾತ್ರೆ ಮುಕ್ತಾಯ ಮಾಡುತ್ತೇವೆ.

ಇದು ಪ್ರತಿಷ್ಠೆಗಾಗಿ ನಡೆಸುತ್ತಿರೋದಲ್ಲ. ಅಂತರ್ಜಲ ಮಟ್ಟ ಹೆಚ್ಚಾಗುತ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸಿಗುತ್ತದೆ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಬಿನಿ, ಕೆ‌ಆರ್‌ಎಸ್, ಹೇಮಾವತಿ, ಹಾರಂಗಿ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಈ ಅಣೆಕಟ್ಟಿನಲ್ಲಿ ನೀರು ಕಡಿಮೆಯಾದಾಗ ಮೇಕೆದಾಟಿನಿಂದ ಬಿಡಬಹುದು. ಇದರಿಂದ ತಮಿಳುನಾಡಿಗೆ ಏನೇನೂ ತೊಂದರೆಯಾಗಲ್ಲ, ರಾಜಕೀಯ ಕಾರಣಕ್ಕೆ ಅವರು ತಕರಾರು ಮಾಡುತ್ತಿದ್ದಾರೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರು ಕೂಡ ತಮಿಳುನಾಡಿಗೆ ಹೋಗುತ್ತೆ. ಎರಡೂ ರಾಜ್ಯಗಳಿಗೆ ಇದರಿಂದ ಅನುಕೂಲ ಇದೆ. ಪರಿಸರ ಅನುಮತಿ ಪತ್ರ ಪಡೆಯಲು ಎರಡೂವರೆ ವರ್ಷ ಬೇಕ? ಇದೊಂದು ಜನಪರವಾದ ಯೋಜನೆ, ಹಾಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. 

ಇದಕ್ಕೆ ಎಲ್ಲರ ಸಹಕಾರ ಕೇಳುತ್ತಿದ್ದೇವೆ. ಬಿಜೆಪಿಯವರು ಪಾದಯಾತ್ರೆಯನ್ನು ರಾಜಕೀಯ ದುರ್ಬಿನ್ ಮೂಲಕ ನೋಡುತ್ತಾರೆ. ಪಾದಯಾತ್ರೆ ಆರಂಭ ಮಾಡಿದ ಕೂಡಲೇ ಜಾಹಿರಾತು ಕೊಡುತ್ತಾರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಏನೂ ಮಾಡಿಲ್ಲ ಎಂದು ಸುಳ್ಳು ಹೇಳುತ್ತಾರೆ. ಸರಿ ಕಾಂಗ್ರೆಸ್ ಪಕ್ಷ ವಿಸ್ತೃತ ಯೋಜನಾ ವರದಿ ಮಾಡಿ ಕಳಿಸಿಕೊಟ್ಟಿದ್ದೆ, ಕಳೆದ ಎರಡೂವರೆ ವರ್ಷಗಳಲ್ಲಿ ನೀವೇನು ಮಾಡಿದ್ದೀರ ಎಂದು ಪ್ರಶ್ನೆ ಕೇಳಿದ್ರೆ ಅದಕ್ಕೆ ಉತ್ತರವೇ ಇಲ್ಲ. ಪಾದಯಾತ್ರೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ. ತಮಿಳುನಾಡಿಗೆ ಅವರ ಪಾಲಿನ ನೀರು ಕೊಡುವುದಾಗಿ ಒಪ್ಪಿಕೊಂಡಿದ್ದೇವೆ, ಅಷ್ಟೆ. ಬೇರೇನು ಸಮಸ್ಯೆ? ಎಷ್ಟು ಅರಣ್ಯ ಮುಳುಗಡೆ ಆಗುತ್ತದೋ ಅಷ್ಟೇ ಪ್ರಮಾಣದ ಜಮೀನನ್ನು ನೀಡಲು ನಾವು ಒಪ್ಪಿಕೊಂಡಿದ್ದೇವೆ. ಮೇಧಾ ಪಾಟ್ಕರ್ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಅನ್ನಿಸುತ್ತೆ. ತಮಿಳುನಾಡಿಗೆ ಯೋಜನೆ ಬಗ್ಗೆ ತಕರಾರು ಮಾಡಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ಕಾವೇರಿ ವಿವಾದವನ್ನು ಜೀವಂತವಾಗಿಡಲು ತಮಿಳುನಾಡಿನ ಎಲ್ಲಾ ಪಕ್ಷಗಳು ಪ್ರಯತ್ನ ಮಾಡುತ್ತಿವೆ ಎಂದು ಹೇಳಿದರು.

ಇದನ್ನೂ ಓದಿ: #HinduBoyMurder: ಶಿವಮೊಗ್ಗದಲ್ಲಿ ಮುಸಲ್ಮಾನರು ಎಂದೂ ಕೂಡ ಬಾಲ ಬಿಚ್ಚಿರಲಿಲ್ಲ: ಸಚಿವ ಕೆ ಎಸ್ ಈಶ್ವರಪ್ಪ

ಯುಕ್ರೇನ್ ನಿಂದ ರಾಜ್ಯದ ಮತ್ತು ದೇಶದ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವುದು ಕೇಂದ್ರ ಸರ್ಕಾರದ ಹೊಣೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಮತ್ತು ರಾಹುಲ್ ಗಾಂಧಿ ಅವರ ಜೊತೆ ಮಾತನಾಡಿ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೇಳಿಕೊಳ್ಳುತ್ತೇನೆ.ಯುಕ್ರೇನ್ ನಲ್ಲಿರುವ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಕೇಂದ್ರದ್ದು. ರಾಜ್ಯಗಳು ಈ ಕಾರ್ಯಾಚರಣೆಗೆ ಆರ್ಥಿಕ ಸಹಾಯ ಮಾಡಬಹುದು ಅಷ್ಟೆ" ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News