ಬೆಂಗಳೂರು: ಭೂಸುಧಾರಣೆ ಕಾಯ್ದೆಯನ್ನು (Land reform act ammendment) ಭೂಸ್ವಾಧೀನ ಕಾಯ್ದೆಯನ್ನಾಗಿ ಪರಿವರ್ತಿಸಿರುವ ಹಾಗು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಗಳ ವಿರುದ್ಧ ಇಂದು ರಾಜ್ಯದ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ (Karnataka Bandh) ಮತ್ತು ಪ್ರತಿಭಟನೆಗೆ ಕರೆ ಕೊಟ್ಟಿದ್ದು ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.
ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಎದುರು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಕಾಂಗ್ರೆಸ್ ಭವನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಕಾಂಗ್ರೆಸ್ ನಾಯಕರು ಮಾಲಾರ್ಪಣೆ ಮಾಡಿದರು. ಬಳಿಕ ಸಿದ್ದರಾಮಯ್ಯ ಹಸಿರು ಶಾಲನ್ನು ಬೀಸುವ ಮೂಲಕ ಧರಣಿಗೆ ಚಾಲನೆ ನೀಡಿದರು. ಬಳಿಕ ಕಾಂಗ್ರೆಸ್ ನಾಯಕರಯ ರಾಜಭವನಕ್ಕೆ ಭೇಟಿ ರಾಜ್ಯಪಾಲ ವಜುಬಾಯ್ ವಾಲಾಗೆ ಅವರಿಗೆ ರಾಜ್ಯ ಬಿಜೆಪಿ ಸರ್ಕಾರ ತಂದಿರುವ ರೈತ ವಿರೋಧಿ ಭೂಸ್ವಾಧೀನ ಕಾಯ್ದೆ ಹಾಗು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಈಗ ರೈತ ಸಮುದಾಯದ ಎದುರು ಬತ್ತಲಾಗಿದ್ದಾರೆ, ಅವರು ಹೊದ್ದುಕೊಂಡಿರುವ ಯಾವ ಹಸಿರು ಶಾಲು ಕೂಡಾ ಅವರ ಮಾನ ಮುಚ್ಚಲಾರದು. ಯಡಿಯೂರಪ್ಪನವರು ನಿಜವಾಗಿಯೂ ರೈತರ ಪರವಾಗಿದ್ದರೆ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರ (Farmers) ಜೊತೆ ನಿಂತುಕೊಳ್ಳಬೇಕು.
ದೇಶವನ್ನು ಕಾರ್ಪೋರೇಟ್ ಕುಳಗಳು ಮತ್ತು ರಿಯಲ್ ಎಸ್ಟೇಟ್ ಧಣಿಗಳಿಗೆ ಮಾರಾಟ ಮಾಡಲು ಹೊರಟಿರುವ ಮೋದಿಯವರ ತಾಳಕ್ಕೆ ನೀವು ಕುಣಿಯತೊಡಗಿದರೆ ವರ್ತಮಾನ ಮಾತ್ರವಲ್ಲ, ಇತಿಹಾಸ ಕೂಡ ನಿಮ್ಮನ್ನು ಕ್ಷಮಿಸಲಾರದು. ಈಗಲೂ ಕಾಲ ಮಿಂಚಿಲ್ಲ, ಯಡಿಯೂರಪ್ಪನವರು ಆತ್ಮಸಾಕ್ಷಿಗೆ ಕರೆಗೊಟ್ಟು ರೈತರ ಬೇಡಿಕೆ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಎಪಿಎಂಸಿ ಕಾಯ್ದೆ (APMC Act) ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕವಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ರೈತರ ಪರ ನಿಲ್ಲಲಿದೆ. ನಾವು ಬಿಜೆಪಿ ಸರ್ಕಾರವನ್ನು ಬೀಳಿಸಲು ಹೋಗುವುದಿಲ್ಲ. ರಾಜ್ಯದ ರೈತರೇ ಬಿಜೆಪಿ ಸರ್ಕಾರವನ್ನು ಕಿತ್ತು ಬಿಸಾಕುತ್ತಾರೆ. ರೈತನಿಗೆ ಯಾವ ಪೆನ್ಷನ್ ಸಿಗಲ್ಲ, ನಿವೃತ್ತಿನೂ ಇಲ್ಲ. ಅವನ ಬದುಕು ದುಸ್ತರವಾಗಿದೆ. ಆದರೂ ರಾಜ್ಯ ಬಿಜೆಪಿ ಸರ್ಕಾರ ಅವನ ಹೊಟ್ಟೆಯ ಮೇಲೆ ಹೊಡೆಯಲೊರಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ (Congress) ನಾಯಕರು ನಡೆಸುತ್ತಿರುವ ಧರಣಿಯಲ್ಲಿ ನೂತನ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಭಾಗಿಯಾಗಿದ್ದರು.