ನಾನೂ ಈ ರಾಜ್ಯದ ಸಿಎಂ ಆಗಬೇಕು, ವಿದ್ಯಾರ್ಥಿಗಳಿಗೂ ಫ್ರೀ ಬಸ್ ಕೊಡಿ ಅಂತ ಅಂದವರಿಗೆ ಡಿಸಿಎಂ ಹೇಳಿದ್ದೇನು..?

ಮಕ್ಕಳಲ್ಲಿ ಜ್ಞಾನ ಹೆಚ್ಚಾಗಬೇಕೆಂಬ ಉದ್ದೇಶದಿಂದಲೇ ಕಾರ್ಯಕ್ರಮಗಳಲ್ಲಿ ನಿರೂಪಣೆ ಹಾಗೂ ಮಾತನಾಡಲು ಅವಕಾಶ ನೀಡಲಾಗುತ್ತಿದೆ. 

Last Updated : Nov 14, 2024, 06:29 PM IST
  • ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರು ಆಗಬಹುದು
  • ಗುಣಮಟ್ಟದ ಶಿಕ್ಷಣ, ಆರ್ಥಿಕ ಸ್ಥಿತಿ ಹಾಗೂ ನಾಯಕತ್ವದ ಗುಣ ಬೆಳಸಿಕೊಳ್ಳಬೇಕು
  • ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ
ನಾನೂ ಈ ರಾಜ್ಯದ ಸಿಎಂ ಆಗಬೇಕು, ವಿದ್ಯಾರ್ಥಿಗಳಿಗೂ ಫ್ರೀ ಬಸ್ ಕೊಡಿ ಅಂತ ಅಂದವರಿಗೆ ಡಿಸಿಎಂ ಹೇಳಿದ್ದೇನು..? title=

ಬೆಂಗಳೂರು : ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರು ಆಗಬಹುದು. ನಮ್ಮ ತಂದೆ ರೈತರಾಗಿದ್ದರು, ನಿಮ್ಮ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕಾದರೆ  ಗುಣಮಟ್ಟದ ಶಿಕ್ಷಣ, ಆರ್ಥಿಕ ಸ್ಥಿತಿ ಹಾಗೂ ನಾಯಕತ್ವದ ಗುಣ ಬೆಳಸಿಕೊಳ್ಳಬೇಕು ಎಂದು ಹೇಳಿದರು. 

ಇದು ವಿಧಾನಸೌಧದಲ್ಲಿ ಶಾಲಾ ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಂಚಶೀಲನಗರದ ಪಾಲಿಕೆ ಹಿರಿಯ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿ ವಿದ್ಯಾಸಾಗರ್, ನಾನು ಈ ರಾಜ್ಯದ ಸಿಎಂ ಆಗಬೇಕು, ಇದಕ್ಕಾಗಿ ಏನು ಓದಬೇಕು ಎಂದು ಕೇಳಿದ ಪ್ರಶ್ನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೊಟ್ಟ ಸಲಹೆಯುಕ್ತ ಉತ್ತರ ಎಂದರು.

“ಮಕ್ಕಳಲ್ಲಿ ಜ್ಞಾನ ಹೆಚ್ಚಾಗಬೇಕೆಂಬ ಉದ್ದೇಶದಿಂದಲೇ ಕಾರ್ಯಕ್ರಮಗಳಲ್ಲಿ ನಿರೂಪಣೆ ಹಾಗೂ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ನೀವೆಲ್ಲರೂ ಸಿಎಂ, ಡಿಸಿಎಂ, ಐಎಎಸ್ ಅಧಿಕಾರಿಗಳ ಜೊತೆ ನೇರವಾಗಿ ಹಾಗೂ ಧೈರ್ಯವಾಗಿ ಮಾತನಾಡುತ್ತಿದ್ದೀರಾ, ವಿಧಾನಸೌಧನ ಸಮ್ಮೇಳನಾ ಸಭಾಂಗಣವು ದೇಶಕ್ಕೆ ಸಂವಿಧಾನ ತರುವಂತಹ ಜಾಗ, ಶಾಸಕಾಂಗ ಸಭೆ ನಡೆಸುವಂತಹ ಜಾಗ, ನೀವೇ ಇಲ್ಲಿ ಕೂತು, ಸಿಎಂ, ಡಿಸಿಎಂ, ಐಎಎಸ್ ಅಧಿಕಾರಿಗಳು ಆಗಬೇಕು” ಎಂದು ಸಲಹೆ ನೀಡಿದರು.

ನೀಲಸಂದ್ರದ ಪಾಲಿಕೆ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿ ಚರಣ್, ನೀವು 5 ಗ್ಯಾರಂಟಿ ನೀಡಿದ್ದೀರಿ, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದು, ನಮ್ಮ ಅಮ್ಮ ಅಕ್ಕ ತಂಗಿಯರನ್ನು ಮಾತ್ರ ಊರಿಗೆ ಕರೆದುಕೊಂಡು ಹೋಗುತ್ತಾರೆ. ಗಂಡು ಮಕ್ಕಳಿಗಾಗಿ ಯಾವುದೇ ಯೋಜನೆ ಇಲ್ಲವೇ ಎಂದು ಕೇಳಿದಾಗ, “ನಿಮ್ಮ ತಾಯಿಗೆ 2000, ಬಸ್ ಉಚಿತ, 10 ಕೆಜಿ ಅಕ್ಕಿ, ಉಚಿತ ವಿದ್ಯುತ್ ನೀಡಲಾಗುತ್ತಿದೆ. ನೀನು ಕೇಳಿರುವ ಪ್ರಶ್ನೆಗೆ ಸರ್ಕಾರದಲ್ಲಿ ಚರ್ಚಿಸಿ ಒಂದು ವಯೋಮಿತಿಯವರೆಗೆ ಯೋಚಿಸಿ ಮುಂದೆ ಕ್ರಮವಹಿಸಲಾಗುವುದು” ಎಂದು ಭರವಸೆ ನೀಡಿದರು. 

ಹೇರೋಹಳ್ಳಿ ಪಾಲಿಕೆ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ಶಾಲಿನಿ ಬಿ.ಆರ್, ಗ್ರಾಮೀಣ ಭಾಗದಲ್ಲಿ ಪ್ರೌಢಶಾಲೆಗಳ ಕೊರತೆ ಇದೆ ಎಂದು ಕೇಳಿದಾಗ, “ಸರ್ಕಾರದಿಂದ ಹೊಸ ಯೋಜನೆ ಜಾರಿ ಮಾಡಲಾಗುತ್ತಿದ್ದು, 3 ಎಕರೆ ಪ್ರದೇಶದಲ್ಲಿ 2000 ಕಡೆ ಶಾಲೆ ನಿರ್ಮಾಣ ಮಾಡಲು ಮುಂದಾಗುತ್ತಿದೆ. ಅದನ್ನು ಖಾಸಗಿ ಶಾಲೆಗಳು ದತ್ತು ಪಡೆದುಕೊಳ್ಳಬೇಕು. ನಗರದಲ್ಲಿ ಬಂದು ವಿದ್ಯಾಭಾಸ ಪಡೆಯುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶದಲ್ಲಿಯೇ ಶಾಲೆ ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಪ್ರಸ್ತಾವನೆ ತಪ್ಪುಗ್ರಹಿಕೆ- ಜಿ.ಪರಮೇಶ್ವರ

ಮಾರುತಿ ಮಂದಿರದ ಪ್ರಾಥಮಿಕ ಪಾಠಶಾಲೆ 5ನೇ ತರಗತಿ ವಿದ್ಯಾರ್ಥಿ ಹರ್ಷ, ದೊಡ್ಡ ದೊಡ್ಡ ಪ್ರೈವೇಟ್ ಸ್ಕೂಲ್‌ಗಳಂತೆ ನಮ್ಮ ಬಿಬಿಎಂಪಿ ಶಾಲೆಗಳಲ್ಲಿ ಕ್ವಾಲಿಟಿ ಎಜುಕೇಷನ್ ನೀಡಲು ಯೋಜನೆ ಇದಿಯಾ ಎಂದು ಕೇಳಿದಾಗ, “ರಾಜ್ಯದಲ್ಲಿ ಸರ್ಕಾರಿ, ಪಾಲಿಕೆ ಸೇರಿ ಸುಮಾರು 46,000 ಶಾಲೆಗಳಿದ್ದು, ಎಲ್ಲರಿಗೂ ಗುಣಮಟ್ಟ ಶಿಕ್ಷಣ ನೀಡುವುದು ಸರ್ಕಾರದ ಚಿಂತನೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಕ್ವಾಲಿಟಿ ಎಜುಕೇಷನ್ ನೀಡುತ್ತಿದ್ದಾರೆ. ಯಾರ ಪ್ರಭಾವಕ್ಕೂ ಒಳಗಾಗದೆ ಮೆರಿಟ್ ಮೇಲೆ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತಿದೆ. ಶಿಕ್ಷಕರಿಗೆ ಹೊಸ ಸ್ಕೀಮ್ ತರಲಾಗುತ್ತಿದ್ದು, ಸಿಬಿಎಸ್‌ಸಿ, ಐಸಿಎಸ್‌ಸಿ ಶಿಕ್ಷಣ ನೀಡುವ ಹಾಗೆ ಸರ್ಕಾರಿ ಶಾಲೆಗಳನ್ನು ಹೊಸ ವ್ಯವಸ್ಥೆ ಜಾರಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಈ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಬಾಗಲಕೋಟೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮೊದಲ ರ‍್ಯಾಂಕ್ ಬಂದಿದ್ದು, ಅದರಿಂದಲೇ ನಾವು ಯಾವ ರೀತಿಯ ಶಿಕ್ಷಣ ಸಿಗಲಿದೆ ಎಂಬುದನ್ನು ಗಮನಿಸಬಹುದಾಗಿದೆ. ಶ್ರಮ ಎಲ್ಲಿದಿಯೋ ಅಲ್ಲಿ ಫಲವಿರುತ್ತದೆ” ಎಂದು ತಿಳಿಸಿದರು.

ವಿಜಯನಗರದ ಪಾಲಿಕೆ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ ಅಜಿತ್ ಎಂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ವರ್ಷ ತುಂಬಾ ಮಾಲಿನ್ಯ ಉಂಟಾಗುತ್ತಿದೆ, ಬೆಂಗಳೂರು ನಗರ ಕೂಡ  ಅನಿಯಮಿತ ಮಳೆ, ಬರ, ನೀರಿನ ಕೊರತೆಯನ್ನು ಎದುರಿಸುತ್ತಿದೆ. ನಮ್ಮ ನಗರವನ್ನು ಉಳಿಸಲು ಏನು ಕ್ರಮ ಕೈಗೊಳ್ಳುತ್ತಿರಾ? ಎಂದು ಕೇಳಿದಾಗ, “ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಕಡೆ ಹೆಚ್ಚು ಗೋಧಿ ಬೆಳೆಯುತ್ತಾರೆ, ಆ ಹುಲ್ಲನ್ನು ಉಪಯೋಗಿಸಲು ಸಾಧ್ಯವಾಗದ ಕಾರಣ ಸುಡುತ್ತಿದ್ದಾರೆ. ಆದ್ದರಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ನಮ್ಮಲ್ಲಿ ಆ ರೀತಿಯ ಸಮಸ್ಯೆ ಇಲ್ಲ, ವಾಹನಗಳ ಮಾಲಿನ್ಯ ಅಷ್ಟೇ ಇದ್ದು, ಕಾರ್ಖಾನೆಗಳನ್ನು ಕೂಡಾ ಹೊರ ಭಾಗದಲ್ಲಿ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುತ್ತಿದೆ. ನಗರದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್  ವಾಹನಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ, ನಮ್ಮ ನಾಗರೀಕರೀಕರು ಸಹ ಪರಿಸರ ಸ್ನೇಹಿ ವಾಹನಗಳಿಗೆ ಬದಲಾಗಬೇಕು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು” ಎಂದರು.

ಮತ್ತಿಕೆರೆಯ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮಹೇಶ್ವರಿ, ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರು ಬೇರೆ ಊರುಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದೆಬರುವುದಿಲ್ಲ ಎಂದು ಕೇಳಿದಾಗ, “ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ ಆಗಲಿ, ಇಡೀ ರಾಜ್ಯ ಒಂದೇ, ಎಲ್ಲಾ ಕಡೆ ಒಂದೇ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನೀವು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ” ಎಂದು ಧೈರ್ಯ ತುಂಬಿದರು.

ದ ಪ್ರೌಢಶಾಲೆಯ 9ನೇ ತರಗತಿ ಕೌಸಲ್ಯ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಮಾಲಿನ್ಯವೂ ಹೆಚ್ಚುತ್ತಿದೆ ಎಂದು ಕೇಳಿದಾಗ, “ಬೆಂಗಳೂರು ನಗರವನ್ನು ಕೆಂಪೇಗೌಡರು ಕಟ್ಟಿದ್ದಾರೆ. ದೊಡ್ಡ ಗಾತ್ರದಲ್ಲಿ ಇಡೀ ದೇಶದಲ್ಲಿ ಯಾವ ನಗರವೂ ಬೆಳೆಯುತ್ತಿಲ್ಲ. ಮುಂಬೈ, ಚೆನ್ನೈ, ಕಲ್ಕತ್ತಾಗೆ ಸಮುದ್ರ ಹತ್ತಿರವಾಗಿದೆ. ಸಮುದ್ರದಿಂದ ನಗರಗಳು ಬೆಳೆದು ಅಲ್ಲಿ ವಹಿವಾಟು ವ್ಯವಹಾರ ಹೆಚ್ಚಾಗಿರುತ್ತದೆ. ಆದರೆ, ಇಲ್ಲಿ ಆ ರೀತಿಯ ವಹಿವಾಟಿಲ್ಲ. ನಮ್ಮಲ್ಲಿರುವ ಹವಾಗುಣದಿಂದ, ಇಲ್ಲಿ ಐಟಿ ಹಬ್, ಟೆಕ್ನಿಕಲ್ ಹಬ್, ಮೆಡಿಕಲ್ ಹಬ್ ಆಗಿ ಬೆಳೆದಿದೆ. 20 ವರ್ಷದಿಂದ ನಗರಾಭಿವೃದ್ಧಿ ಸಚಿವನಾಗಿದ್ದಾಗ 70 ಲಕ್ಷ ಜನಸಂಖ್ಯೆಯಿತ್ತು. ಇದೀಗ ದ್ವಿಗುಣವಾಗಿ 1.40 ಕೋಟಿ ಜನಸಂಖ್ಯೆಯಾಗಿದೆ. ಅದೇ ರಸ್ತೆಯಿದ್ದು, ವಾಹನಗಳ ಸಂಖ್ಯೆ ಮಾತ್ರ ಹೆಚ್ಚಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಸರ್ಕಾರದಿಂದ ಎಷ್ಟೇ ಬಸ್, ಮೆಟ್ರೋ ಹಾಕಿದರು ಕೂಡಾ ಸ್ವಂತ ವವಾಹನಗಳನ್ನೇ ಬಳಸುತ್ತಾರೆ. ಆದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ರಿಂಗ್ ರಸ್ತೆ, ಮೆಟ್ರೋ 3ನೇ ಫೇಸ್ ಮಾಡಲಾಗುತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ಮೆಟ್ರೋ ನಿರ್ಮಾಣ ಮಾಡಲಾಗಿದೆ. ನಗರದಲ್ಲಿ ಸಬ್ ಅರ್ಬನ್ ಮಾಡಲಾಗುತ್ತಿದೆ. ಎಷ್ಟೇ ಮೇಲ್ಸೇತುವೆ ಮಾಡುತ್ತಿದ್ದರೂ, ಸಂಚಾರ ದಟ್ಟಣೆ ನಿಯಂತ್ರಣವಾಗುತ್ತಿಲ್ಲ. ಇದೀಗ ಟನಲ್ ರಸ್ತೆ ಕೂಡಾ ಪ್ರಾರಂಭಿಸಲಾಗುತ್ತಿದೆ. ನಗರದಲ್ಲಿ ಬೇರೆ ನಗರಗಳಿಗೆ ಹೋಲಿಸಿದರೆ ಮಾಲಿನ್ಯ ನಿಯಂತ್ರಣದಲ್ಲಿದೆ” ಎಂದು ತಿಳಿಸಿದರು.

ಲಗ್ಗೆರೆಯ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಲಿಖಿತ, ನಿಮ್ಮ ಮಕ್ಕಳು ಚಿಕ್ಕವರಾಗಿದ್ದಾಗ ನೀವು ಅವರೊಂದಿಗೆ ಸಲುಗೆಯಿಂದ ಇದ್ದಿರಾ, ಕಟ್ಟುನಿಟ್ಟಾಗಿ ಇದ್ದಿರಾ, ಯಾವ ಸಲಹೆ ನೀಡುತ್ತಿದ್ದಿರಿ ಎಂದು ಕೇಳಿದಾಗ, “ನಾನು ಸಣ್ಣ ವಯಸ್ಸಿನಿಂದಲೇ ರಾಜಕೀಯದಲ್ಲಿ ತೊಡಗಿಕೊಂಡು ಬಂದಿದ್ದೇನೆ. ಆದ್ದರಿಂದ ನನ್ನ ಮಕ್ಕಳಿಗೆ ಸಮಯ ಕೊಡಲು ಆಗಿಲ್ಲ, ಆದರೂ ಅವರನ್ನು ತುಂಬಾ ಪ್ರೀತಿ ಹಾಗು ಕಾಳಜಿ ಮಾಡುತ್ತೇನೆ. ನನ್ನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದೇನೆ. ಆದರೆ, ರಾಜಕೀಯದಲ್ಲಿರುವ ಕಾರಣ ಹೆಚ್ಚು ಸಮಯ ನೀಡಲು ಸಾಧ್ಯವಾಗಿಲ್ಲ. ಮದುವೆಯಾಗುವ ಮುಂಚೆಯೇ ಮಂತ್ರಿಯಾಗಿದ್ದೆ. ಶಿಕ್ಷಣದ ಬಗ್ಗೆ ನನಗೆ ಹೆಚ್ಚು ಕಾಳಜಿಯಿದ್ದು, ನಗರದ ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಗಬೇಕೆಂಬ ನಿಟ್ಟಿನಲ್ಲಿ ಸಿಎಸ್‌ಆರ್ ಅಡಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ” ಎಂದು ತಿಳಿಸಿದರು.

ಜೋಗುಪಾಳ್ಯದ ಬಾಲಕರ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿ ರಿಚರ್ಡ್, ಪಾಲಿಕೆ ಶಾಲೆಯ ಗುಣಮಟ್ಟ ಶಿಕ್ಷಣ ಹಾಗೂ ವ್ಯವಸ್ಥೆ ಬಗ್ಗೆ ಬೇರೆಯವರಿಗೂ ಅರಿವು ಮೂಡಿಸಿ ಎಂದು , “ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ, ಉಚಿತ ಸೌಲಭ್ಯ ಸಿಗಲಿದೆ ಎಂಬುದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗವುದು” ಎಂದು ಡಿಸಿಎಂ ತಿಳಿಸಿದರು.

ಇದೇ ಪ್ರಶ್ನೆಗೆ ಉತ್ತರಿಸಿದ ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು, “ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ, ಎಲ್ಲಾ ಶಿಕ್ಷಕರು ಮೆರಿಟ್ ಮೇಲೆ ಬಂದಿರುತ್ತಾರೆ. ಸಾಧನೆ ಮಾಡುವವರೆಲ್ಲಾ ಸರ್ಕಾರಿ ಶಾಲೆಯ ಮಕ್ಕಳೇ ಆಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕೆಲ ಮೂಲಭೂತ ಸೌಕರ್ಯಗಳ ಅಭಾವಿರುವುದು ನಿಜ, ಅದನ್ನು ಹಂತ-ಹಂತವಾಗಿ ಬಗೆಹರಿಸಲಾಗುವುದು. ರಾಜ್ಯದ ಸರ್ಕಾರ ಶಾಲೆಗಳಲ್ಲಿ ಶಿಕ್ಷಕರ ಅಭಾವವಿದ್ದು, ಈ ಸಂಬಂಧ 13,000 ಶಿಕ್ಷಕರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದ್ದು, ಇನ್ನೂ 10,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದೇವೆ” ಎಂದು ಮಾಹಿತಿ ನೀಡಿದರು.

ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ನಿರ್ಭಿತಾ, ಖಾಸಗಿ ಶಾಲೆಗಳಲ್ಲಿ ವ್ಯಾನ್, ಬಸ್ ವ್ಯವಸ್ಥೆ ಇರುತ್ತದೆ, ಪಾಲಿಕೆ ಶಾಲೆಗಳಿಗೆ ವ್ಯಸಸ್ಥೆ ಕಲ್ಪಿಸಬಹುದೇ ಎಂದು ಕೇಳಿದಾಗ, “ಶಾಲೆಗಳಿಗೆ ಹತ್ತಿರವಿರುವ ಮಕ್ಕಳೇ ಬರುವುದರಿಂದ ವಾಹನಗಳ ವ್ಯವಸ್ಥೆ ಮಾಡಿರುವುದಿಲ್ಲ. ಈ ಸಂಬಂಧ ಸ್ಥಳೀಯ ಸಂಸ್ಥೆಗಳ ಜೊತೆ ಚರ್ಚಿಸಲಾಗುವುದು” ಎಂದು ತಿಳಿಸಿದರು.

ಇದೇ ಪ್ರಶ್ನೆಗೆ ಉತ್ತರಿಸಿದ ಪಾಲಿಕೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು, “ಶಾಲೆಗಳಿಗೆ ದಾಖಲಾತಿ ಆಗುವ ಸಮಯದಲ್ಲೇ ಹತ್ತಿರದ ಶಾಲೆಗಳಿಗೆ ಸೇರಲು ಅರಿವು ಮೂಡಿಸಲಾಗುತ್ತಿದೆ. ಕೆಲವು ಮಕ್ಕಳು ದೂರದಿಂದ ಬರಲು ಇಚ್ಛಿಸುತ್ತಿದ್ದಾರೆ. ಹೊರ ವಲಯಗಳಲ್ಲಿ ಪಾಲಿಕೆಯ ಹೆಚ್ಚು ಶಾಲೆಗಳಿಲ್ಲ, ಅಲ್ಲಿಯೂ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅದಾದ ಬಳಿಕ ಈ ಸಮಸ್ಯೆ ಕಡಿಮೆಯಾಗಲಿದೆ. ದಾಖಲಾತಿ ಆಗುವ ವೇಳೆ ಹತ್ತಿರದ ಶಾಲೆಗಳಿಗೆ ದಾಖಲಾತಿ ಮಾಡಲು ಪೋಷಕರಿಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.

ಕಸ್ತೂರ ಬಾ ನಗರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕುಮಾರ್ ಕ್ರೀಡಾಸಕ್ತಿ ಇರುವ ವಿದ್ಯಾರ್ಥಿಗಳಿಗೆ ತರಬೇತಿ ಕೊರತೆ ಇದ್ದು, ಸರ್ಕಾರದಿಂದ ಇದಕ್ಕೆ ಪರಿಹಾರವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು, “ಶಿಕ್ಷಣ ಇಲಾಖೆಯಿಂದ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬೇರೆಯವರ ಸಹಯೋಗದಲ್ಲಿ ಸಣ್ಣ-ಸಣ್ಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಸಂಬಂಧ ಕ್ರೀಡಾ ಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೋಬಳಿ ಮಟ್ಟದಲ್ಲಿ ಸುಮಾರು 300 ಕರ್ನಾಟಕ ಪಬ್ಲಿಕ್ ಶಾಲೆ ಮಾಡಲು ಮುಂದಾಗಿದ್ದೇವೆ. ಕ್ರೀಡೆ ಕುರಿತು ಮಕ್ಕಳಿಗೆ ನುರಿತ ತರಬೇತಿ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದರು. 

ಶ್ರೀರಾಂಪುರದ ಬಾಲಕಿಯರ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ರಾಜೇಶ್ವರಿ, ಪೋಷಕರು ಎಸ್ಎಸ್ಎಲ್ ಸಿ ಮಕ್ಕಳಿಗೆ ಕ್ರೀಡೆಗೆ ಆದ್ಯತೆ ನೀಡದೇ ಬೋರ್ಡ್ ಪರೀಕ್ಷೆಗೆ ಹೊಚ್ಚು ಗಮನಹರಿಸುವಂತೆ ಒತ್ತಡ ಹಾಕುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಶಿಕ್ಷಣ ಸಚಿವರು ಉತ್ತರಿಸಿ, “ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮಕ್ಕಳ  ಭವಿಷ್ಯ ಬದಲಾಯಿಸುವ ಪ್ರಮುಖ ಘಟ್ಟವಾಗಿರುವುದರಿಂದ, ನೀವು ಹೆಚ್ಚು ಜವಾಬ್ದಾರಿಯಿಂದ ಇರಬೇಕಾಗುತ್ತದೆ. ನೀವು ಆಯ್ಕೆ ಮಾಡುವ ವಿಷಯ ಸರಿಯಾಗಿರಬೇಕಾಗಿರುತ್ತದೆ. ಆದ ಕಾರಣ ಶಿಕ್ಷಕರು, ಪೋಷಕರು ಕೂಡಾ ಇದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಆಟ ಆಡುವ ಜೊತೆಗೆ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ಮಕ್ಕಳು ಶಾಲೆಯಿಂದ ಹೊರಗುಳಿಯಬಾರದೆಂದು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: ವಸೂಲಿ ಆರೋಪವನ್ನು ಮೋದಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ! ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ: ಸಿಎಂ ಸಿದ್ದರಾಮಯ್ಯ ಸವಾಲು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News