ಮಂಡ್ಯ: ಕೆ.ಆರ್.ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ(Narayana Gowda) ಅವರ ಪರ ಗುರುವಾರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ(Dr. CN Ashwattanarayana) ಈ ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆ.ಆರ್.ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರ ಪರ ಗುರುವಾರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ಸಚಿವರು ನಂತರ ಮಾಧ್ಯಮದವರ ಜತೆ ಮಾತುಕತೆ ನಡೆಸಿದರು. "ಕಾಂಗ್ರೆಸ್‌ನಲ್ಲೇ ಒಗ್ಗಟ್ಟಿಲ್ಲ. ಅವರ ಪಕ್ಷ ಅತಂತ್ರ ಸ್ಥಿತಿಯಲ್ಲಿದೆ. ಅಭ್ಯರ್ಥಿಗಳ ಆಯ್ಕೆಯಲ್ಲೂ ಗೊಂದಲ ಎದುರಿಸಿದರು. ಎಣ್ಣೆ ಸೀಗೆಕಾಯಿಯಂತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಯಾವುದೇ ಒಳ ಒಪ್ಪಂದ ಇಲ್ಲ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ, ಹದಿನೈದಕ್ಕೆ ಹದಿನೈದೂ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ," ಎಂದು ಅವರು ಭರವಸೆ ವ್ಯಕ್ತಪಡಿಸಿದರು.
"2018ರ ಚುನಾವಣೆಯಲ್ಲಿ 105 ಸ್ಥಾನಗಳ ಬಹುಮತ ಇದ್ದರೂ ನಾವು ಅಧಿಕಾರದಿಂದ ದೂರ ಉಳಿಯುವಂತಾಯಿತು. ಜನರಿಂದ ತಿರಸ್ಕೃತಗೊಂಡ ಕಾಂಗ್ರೆಸ್, ಜೆಡಿಎಸ್ ಜತೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸಿತು. ಆರಂಭದಿಂದಲೂ ಪರಸ್ಪರ ಅಪನಂಬಿಕೆ ಇದ್ದ ಕಾರಣ ಉಭಯ ಪಕ್ಷಗಳು ಕಿತ್ತಾಟದಲ್ಲೇ ಕಾಲ ಕಳೆದರು. ಜನ ಪರ ಚಿಂತನೆ ಬಿಟ್ಟು, ಸ್ವಾರ್ಥಕ್ಕೆ ಒತ್ತು ನೀಡಿದರು. ಅವರೇ ಗೊಂದಲಕ್ಕೆ ಸಿಲುಕಿ ಜನರನ್ನು ಕಷ್ಟಕ್ಕೆ ಸಿಲುಕಿಸಿದರು. ಅಂಥ ಪರಿಸ್ಥಿತಿಯಲ್ಲಿ ಕೆಲ ಶಾಸಕರು ಚಿಂತಿತರಾದರು. ಅವರ ಕ್ಷೇತ್ರದ ಹಿತದೃಷ್ಟಿಯಿಂದ ಬಹಳ ಸಮಯ ಈ ಅನ್ಯಾಯ, ಅವಮಾನ ಸಹಿಸಿಕೊಂಡು ಸಹಕಾರ ಕೊಟ್ಟರು. ಆದರೆ, ಪರಿಸ್ಥಿತಿ ಸುಧಾರಿಸಲಿಲ್ಲ. ಆಗ ಪ್ರಬುದ್ಧ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅಂಥವರಲ್ಲಿ ನಾರಾಯಣ ಗೌಡರು ಒಬ್ಬರು. ಸ್ವಾರ್ಥ ಮರೆತು ಕ್ಷೇತ್ರದ ಹಿತಕ್ಕಾಗಿ ದೃಢ ನಿರ್ಧಾರ ಕೈಗೊಂಡರು. ಆಗ ಅವರ ಪಕ್ಷ ಅಧಿಕಾರದಲ್ಲಿತ್ತು. ಅವರು ಶಾಸಕರಾಗಿ ಮುಂದುವರಿಯಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಅವರ ತ್ಯಾಗಕ್ಕೆ ಬೆಲೆ ಕೊಡುವ ಸಮಯ ಬಂದಿದೆ. ಕ್ಷೇತ್ರದ ಜನರು ಅವರ ಕೈ ಹಿಡಿಯಬೇಕು,"ಎಂದು ನಾರಾಯಣ ಗೌಡರ ಪರ ಮತ ಯಾಚಿಸಿದರು.
"ಎಲ್ಲ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಲು ಸಿದ್ಧ. ಕೆ.ಆರ್. ಪೇಟೆಯಲ್ಲಿ ನಾರಾಯಣ ಗೌಡರ ಜತೆ ಇದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವೆ. ಕೆ.ಆರ್. ಪೇಟೆ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿ ಬೆಳೆಯಲು ಕೆಲಸ ಮಾಡಲು ಬದ್ಧ," ಎಂದರು.
ಕೆ.ಆರ್.ಪೇಟೆಯ ನಾಯಕ ಬಿಎಸ್‌ವೈ:
ಕೆ.ಆರ್. ಪೇಟೆಯ ರೈತ ನಾಯಕ, ಭಗೀರಥ ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ, ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯ ಕೈಗೊಂಡರು. ಕೆ.ಆರ್. ಪೇಟೆಗೆ 2008- 2013ರ ಅವಧಿಯಲ್ಲಿ 800 ಕೋಟಿ ರೂ.ಗೂ ಹೆಚ್ಚು ಹಣ ನೀಡಿದ್ದರು. ಇಲ್ಲಿ ನಮ್ಮ ಪಕ್ಷದ ಪ್ರತಿನಿಧಿ ಇಲ್ಲದ ಕಾಲದಲ್ಲೂ ತವರೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ಅವರಿಗೆ ವಿಶೇಷ ಅಭಿಮಾನ ಇದೆ. ಅವರು ಮಾಡಿದ ಸತ್ಕಾರ್ಯವನ್ನು ಜನ ಸ್ಮರಿಸಬೇಕು. ಶಿಕ್ಷಣ, ಆರೋಗ್ಯ, ನೀರಾವರಿ, ಮೂಲಸೌಕರ್ಯ, ಕೃಷಿ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಪಕ್ಷ, ಸರ್ಕಾರ ಬದ್ಧ. ಏತ ನೀರಾವರಿಗೆ 212 ಕೋಟಿ ಮಂಜೂರು ಮಾಡಿದ್ದೇವೆ. ಇದಲ್ಲದೇ ಬೇರೆ ಯಾವುದೇ ಅಭಿವೃದ್ಧಿ ಯೋಜನೆ ಕೈಗೊಳ್ಳಲು ನಮ್ಮ ಸರ್ಕಾರ ಸಿದ್ಧವಾಗಿದೆ,''ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಭರವಸೆ ನೀಡಿದರು.