ಕರುನಾಡ ಸಿಂಗಂ ನಿಧನ; ಡಿಸಿಪಿ ಅಣ್ಣಾಮಲೈ ಹೇಳಿದ್ದೇನು?

ಮಧುಕರ್ ಶೆಟ್ಟಿ ಅವರೊಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದು ಡಿಸಿಪಿ ಅಣ್ಣಾಮಲೈ ಹೇಳಿದ್ದಾರೆ.

Last Updated : Dec 29, 2018, 04:05 PM IST
ಕರುನಾಡ ಸಿಂಗಂ ನಿಧನ; ಡಿಸಿಪಿ ಅಣ್ಣಾಮಲೈ ಹೇಳಿದ್ದೇನು? title=

ಬೆಂಗಳೂರು: ಕರ್ನಾಟಕ ಲೋಕಾಯುಕ್ತದಲ್ಲಿ ಖಡಕ್ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದ ಮಧುಕರ್ ಶೆಟ್ಟಿ ಅವರ ನಿಧನಕ್ಕೆ ಡಿಸಿಪಿ ಅಣ್ಣಾಮಲೈ ಕಂಬನಿ ಮಿಡಿದಿದ್ದಾರೆ. 

ಮಧುಕರ್ ಶೆಟ್ಟಿ ಅವರೊಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿ. ಅವರು ಚಿಕ್ಕಮಗಳೂರಿನಲ್ಲಿದ್ದಾಗ ನೀಡಿದ ಸೇವೆ ನಿಜಕ್ಕೂ ಸ್ಮರಣೀಯ. ಚಿಕ್ಕಮಗಳೂರಿನಲ್ಲಿ ಭೂ ಒತ್ತುವರಿಯಾದಾಗ ಮಧುಕರ್ ಶೆಟ್ಟಿ ಅವರು ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದರು. ಅವರ ಬಗ್ಗೆ ಎಷ್ಟೇ ಹೇಳಿದರೂ ಸಾಲದು ಎಂದಿದ್ದಾರೆ. 

ಎಚ್1 ಎನ್1  ಸೋಂಕಿನಿಂದ ಬಳಲುತ್ತಿದ್ದು ಹೈದರಾಬಾದ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರ್ನಾಟಕದ ಸಿಂಗಂ ಎಂದೇ ಹೆಸರಾಗಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ (47) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಹೈದರಾಬಾದ್ ನ ರಾಷ್ಟ್ರೀಯ ಪೋಲೀಸ್ ಅಕಾಡಮಿಯಲ್ಲಿ ಉಪನಿರ್ದೇಶಕರಾಗಿದ್ದ ಮಧುಕರ್ ಶೆಟ್ಟಿ ಇತ್ತೀಚೆಗೆ ತೀವ್ರ ಅಸ್ವಸ್ಥರಾಗಿ ಹೈದರಾಬಾದ್ ಕಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು.

ಖ್ಯಾತ ಪತ್ರಕರ್ತ ದಿ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರರಾಗಿದ್ದ ಮಧುಕರ್ 1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು.ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂಎ ಹಾಗೂ ನ್ಯೂಯಾರ್ಕ್ ವಿವಿನಲ್ಲಿ ಪಿಎಚ್ ಡಿ ಪದವಿ ಗಳಿಸಿದ್ದರು. ಚಿಕ್ಕಮಗಳೂರು ಎಸ್ಪಿ ಹಾಗೂ ಲೋಕಾಯುಕ್ತ ಎಸ್ಪಿಯಾಗಿ ಖಡಕ್ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ಮಧುಕರ್ ಶೆಟ್ಟಿ ಜನಾನುರಾಗಿಯಾಗಿದ್ದರು.

ರಾತ್ರಿ 8 ಗಂಟೆವೆರೆಗೆ ಅಂತಿಮ ದರ್ಶನಕ್ಕೆ ಅವಕಾಶ
ಸದ್ಯ ಮಧುಕರ್ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಯಲಹಂಕ ಪೋಲಿಸ್ ತರಬೇತಿ ಕೇಂದ್ರದ ಮೈದಾನದಲ್ಲಿ ರಾತ್ರಿ 8 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿದೆ. ಬಳಿಕ ಮಂಗಳೂರಿಗೆ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

Trending News