ಬೆಂಗಳೂರು: ಮಧ್ಯಂತರ ಚುನಾವಣೆಯ ಬಗ್ಗೆ ಮಾತನಾಡಿರುವ ದೇವೇಗೌಡರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದ್ದಾರೆ. ವಿಧಾನಸಭೆ ವಿಸರ್ಜನೆ ಕುರಿತಾಗಿ ದೇವೇಗೌಡ ಹೇಳಿಕೆ ಹುಚ್ಚರ ಹೇಳಿಕೆಯಾಗಿದ್ದು, ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬೆದರಿಸುವ ತಂತ್ರಗಾರಿಕೆಗೆ ಮುಂದಾಗಿದ್ದಾರೆ ಎಂದು ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ " ಇದು ರಾಜಕೀಯ ಕುತಂತ್ರವಾಗಿದೆ. ಇಂತಹ ತಂತ್ರ ಹಾಗೂ ಕುತಂತ್ರಗಳನ್ನು ದೇವೇಗೌಡರು ಬಿಡಬೇಕು ಎಂದು ಹೇಳಿದ್ದಾರೆ. ಇನ್ನು ಮುಂದುವರೆದು ಮಾತನಾಡಿದ ಶಾಸಕ ಯತ್ನಾಳ "ವಿಧಾನಸಭೆ ವಿಸರ್ಜನೆ ಮಾಡಲು ರಾಜ್ಯಪಾಲರು ರಬ್ಬರ್ ಸ್ಟಾಂಪ್ ಆಗಿಲ್ಲ ದೇವೇಗೌಡರು ಮಧ್ಯಂತರ ಚುನಾವಣೆ ಎಂದಾಕ್ಷಣ ಅವರು ಅಂಗಿಕಾರ ಮಾಡಲ್ಲ" ಎಂದರು. ಒಂದು ವೇಳೆ ಹಾಗೆ ಮಾಡಿದ್ದೆ ಆದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಶಾಸಕರು ಬಿಜೆಪಿ ಪಕ್ಷಕ್ಕೆ ವಲಸೆ ಬರಲಿದ್ದಾರೆ ಎಂದರು. ಸಿದ್ದರಾಮಯ್ಯ ಹಾಗೂ ದೇವೇಗೌಡರ ಸಂಬಂಧ ಮುಗಿದಿದೆ. ಆದ್ದರಿಂದ ಸಿದ್ಧರಾಮಯ್ಯ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುಂದುವರೆಯಬಾರದು ಎನ್ನುತ್ತಿದ್ದಾರೆ ಎಂದು ಯತ್ನಾಳ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ನಿರೀಕ್ಷಿತ ಪ್ರಮಾಣದಲ್ಲಿ ಪ್ರದರ್ಶನ ನೀಡದ ಹಿನ್ನಲೆಯಲ್ಲಿ ಈಗ ದೇವೇಗೌಡ ರ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ. ಪ್ರತಿ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ದೇವೇಗೌಡರು ಈ ಬಾರಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಕ್ಷೇತ್ರ ಬಿಟ್ಟು ಕೊಡುವ ಹಿನ್ನಲೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು.