ನಾನೇನೂ ತಪ್ಪು ಮಾಡಿಲ್ಲ, ಜನರಿದ್ದಾರೆ, ದೇವರಿದ್ದಾನೆ..! 

DK Shivakumar : ನಾನೇನು ತಪ್ಪು ಮಾಡಿಲ್ಲ. ಎಲ್ಲಾ ಬೆಳವಣಿಗೆಗಳನ್ನು ನೀವು (ಮಾಧ್ಯಮದವರು) ಜನರು ನೋಡಿದ್ದಾರೆ. ನಾನು ಕೇವಲ ಪಕ್ಷದ ಕೆಲಸ ಮಾತ್ರ ಮಾಡಿದ್ದೇನೆ. ಪಕ್ಷದ ಕೆಲಸ ಮಾಡಿದ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಮುಂದಕ್ಕೂ ತೊಂದರೆ ಕೊಟ್ಟರೆ ಕಾಪಾಡಲು ಆ ಭಗವಂತನಿದ್ದಾನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

Written by - Prashobh Devanahalli | Edited by - Krishna N K | Last Updated : Nov 29, 2023, 02:34 PM IST
  • ಹೈಕೋರ್ಟ್ ತೀರ್ಪಿನ ಬಗ್ಗೆ ನನಗೆ ಮಾಹಿತಿ ಇಲ್ಲ.
  • ಸದ್ಯಕ್ಕೆ ನಾನು ಟೆಕ್ ಸಮಿಟ್ ನಲ್ಲಿ ಭಾಗವಹಿಸಲು ಬಂದಿದ್ದೇನೆ.
  • ಹೈಕೋರ್ಟ್‌ ತೀರ್ಪು ವಿಚಾರವಾಗಿ ಡಿಸಿಎಂ ಪ್ರತಿಕ್ರಿಯೆ.
ನಾನೇನೂ ತಪ್ಪು ಮಾಡಿಲ್ಲ, ಜನರಿದ್ದಾರೆ, ದೇವರಿದ್ದಾನೆ..!  title=

ಬೆಂಗಳೂರು : ಟೆಕ್ ಸಮ್ಮೇಳನದಲ್ಲಿ ಭಾಗವಹಿಸಿರುವ ಕಾರಣ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಬಗ್ಗೆ ನನಗೆ ಮಾಹಿತಿ ಇಲ್ಲ. ನ್ಯಾಯಾಲಯದ ವಿಚಾರದಲ್ಲಿ ವಕೀಲರಿಂದ ಸರಿಯಾದ ಮಾಹಿತಿ ಇಲ್ಲದೆ ಈ ವಿಚಾರವಾಗಿ ಮಾತನಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಅರಮನೆ ಮೈದಾನದಲ್ಲಿ ನಡೆದ ಟೆಕ್ ಸಮಿಟ್ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು. ನಿಮ್ಮ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ರಿಲೀಫ್ ನೀಡುವ ಆದೇಶ ನೀಡಿದೆ ಎಂದು ಮಾಧ್ಯಮಗಳು ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು. 

ಇದನ್ನೂ ಓದಿ: ಆಪರೇಷನ್‌ ಸುರಂಗ ಸಕ್ಸಸ್..‌ ಎಲ್ಲಾಕಾರ್ಮಿಕರು ಸೇಫ್‌

“ಈ ವಿಚಾರವಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸದ್ಯಕ್ಕೆ ನಾನು ಟೆಕ್ ಸಮಿಟ್ ನಲ್ಲಿ ಭಾಗವಹಿಸಲು ಬಂದಿದ್ದೇನೆ. ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ  ಹಾಗೂ ಎಂ.ಬಿ ಪಾಟೀಲ್ ಅವರು ರಾಜ್ಯದಲ್ಲಿ ಬಂಡವಾಳ ಆಕರ್ಷಿಸಿ ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಟಿಸಲು, ರಾಜ್ಯವನ್ನು ಸಮೃದ್ಧಿಗೊಳಿಸಲು ಈ ಪ್ರಯತ್ನಕ್ಕೆ ಮುಂದಾಗಿದ್ದು, ಅವರಿಗೆ ಬೆಂಬಲವಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ನಮ್ಮ ಸರ್ಕಾರ ನೂತನ ಬಿಟಿ ನೀತಿ ಹಾಗೂ ಅನ್ವೇಷಣಾ ನೀತಿಗಳನ್ನು ಇಂದು ಪರಿಚಯಿಸಿದೆ. ಇಂದು ಸಾವಿರಾರು ಮಂದಿ ವಿದೇಶಿ ಬಂಡವಾಳ ಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನ್ಯಾಯಾಲಯದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ. ವಕೀಲರು ನಮಗೆ ಮಾಹಿತಿ ನೀಡದ ಹೊರತಾಗಿ ನಾನು ಮಾತನಾಡುವುದಿಲ್ಲ. 

ನಾನೇನು ತಪ್ಪು ಮಾಡಿಲ್ಲ. ಎಲ್ಲಾ ಬೆಳವಣಿಗೆಗಳನ್ನು ನೀವು (ಮಾಧ್ಯಮದವರು) ಜನರು ನೋಡಿದ್ದಾರೆ. ನಾನು ಕೇವಲ ಪಕ್ಷದ ಕೆಲಸ ಮಾತ್ರ ಮಾಡಿದ್ದೇನೆ. ಪಕ್ಷದ ಕೆಲಸ ಮಾಡಿದ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಮುಂದಕ್ಕೂ ತೊಂದರೆ ಕೊಟ್ಟರೆ ಕಾಪಾಡಲು ಆ ಭಗವಂತನಿದ್ದಾನೆ, ಈ ನಾಡಿನ ಜನರಿದ್ದಾರೆ. ನನಗೆ ತೊಂದರೆ ಕೊಟ್ಟ ಕಾರಣಕ್ಕೆ ಈ ರಾಜ್ಯದಲ್ಲಿ ಏನಾಯಿತು ಎಂದು ತಿಳಿದಿದೆ. ನನ್ನ ಪರವಾಗಿ ನಿಂತವರು ಹಾಗೂ ಪ್ರಾರ್ಥನೆ ಮಾಡಿದ ಜನರಿಗೆ ಕೋಟಿ ನಮಸ್ಕಾರ” ಎಂದು ಹೇಳಿದರು.

ಇದನ್ನೂ ಓದಿ:ಶೀಘ್ರದಲ್ಲಿ ಬೆಳೆ ಹಾನಿ ಪರಿಹಾರ ರೈತರಿಗೆ ಸಿಗಲಿದೆ: ಸಚಿವ ಚಲುವರಾಯಸ್ವಾಮಿ

ಯತ್ನಾಳ್ ಅವರು ನಿಮ್ಮ ವಿರುದ್ದ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಕೇಳಿದಾಗ “ ಎಲ್ಲರ ಆಚಾರ ವಿಚಾರ, ಭಾವನೆ ಮತ್ತು ಅವರುಗಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬಹಳ ನಮ್ರತೆಯಿಂದ ಗಮನಿಸಿದ್ದೇನೆ. ಸೂಕ್ತ ಕಾಲದಲ್ಲಿ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ” ಎಂದರು. 

ನಿಗಮ ಮಂಡಳಿ ಮೊದಲ ಪಟ್ಟಿಯಲ್ಲಿ ನೂತನ ಶಾಸಕರಿಗೆ ಅವಕಾಶವಿಲ್ಲ, ಮುಂದಿನ ಪಟ್ಟಿಯಲ್ಲಿ ಕಾರ್ಯಕರ್ತರಿಗೆ ಅವಕಾಶ: ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಮಾಧ್ಯಮಗಳು ಕೇಳಿದಾಗ, “ಈ ಪಟ್ಟಿಯಲ್ಲಿ ಮೊದಲ ಪಟ್ಟಿಯಲ್ಲಿ ಮೊದಲ ಬಾರಿಗೆ ಶಾಸಕರಾದವರಿಗೆ ಅವಕಾಶ ನೀಡಿಲ್ಲ. ಮುಂದಿನ ಪಟ್ಟಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲು ತೀರ್ಮಾನವಾಗಿದೆ.

ನಿಗಮ ಮಂಡಳಿ ನೇಮಕಾತಿ ವಿಚಾರವಾಗಿ ನಾನು ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರು ಮಾತನಾಡಿದ್ದೇವೆ. ನಾವು ಪಟ್ಟಿಯನ್ನು ರಂದೀಪ್ ಸುರ್ಜೇವಾಲ ಅವರಿಗೆ ನೀಡಿದ್ದು ಅವರು ಅದನ್ನು ದೆಹಲಿಗೆ ತೆಗದುಕೊಂಡು ಹೋಗಿದ್ದಾರೆ. ತೆಲಂಗಾಣದಲ್ಲಿ ಇಂದು ನಾಳೆ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದ್ದು, ನಂತರ ಹೈಕಮಾಂಡ್ ನಾಯಕರು ನಮ್ಮ ಪಟ್ಟಿಯನ್ನು ಪರಿಶೀಲಿಸಿ ಎರಡು- ಮೂರು ದಿನಗಳಲ್ಲಿ ಅಂತಿಮ ಪಟ್ಟಿಯನ್ನು ರವಾನಿಸುತ್ತಾರೆ. ನಾವು ನೀಡಿದ ಪಟ್ಟಿಯನ್ನು ಪಕ್ಷದ ಹೈಕಮಾಂಡ್ ಪರಿಶೀಲಿಸಬೇಕು. ಏಕೆಂದರೆ ಚುನಾವಣೆ ಹೊತ್ತಿನಲ್ಲಿ ಒಂದಷ್ಟು ಮಾತುಗಳನ್ನು ಕೊಟ್ಟಿರುತ್ತಾರೆ. ಹೈಕಮಾಂಡ್ ಯಾರಿಗೆ ಏನು ಸೂಚನೆ ನೀಡಿತ್ತೊ ಅದರ ಪ್ರಕಾರ ಅಂತಿಮ ಪಟ್ಟಿ ಸಿದ್ಧವಾಗಲಿದೆ.” ಎಂದು ಹೇಳಿದರು.

ಇದನ್ನೂ ಓದಿ:ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ

ಬಿ.ಆರ್.ಪಾಟೀಲ್ ಅವರ ಅಸಮಾಧಾನದ ಬಗ್ಗೆ ಕೇಳಿದಾಗ “ಅವರು ಪತ್ರ ಬರೆದಿರುವ ವಿಚಾರ ತಿಳಿದಿಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಮಾಹಿತಿ ಗೊತ್ತಿಲ್ಲದೇ ಮಾತನಾಡಲು ನನಗೆ ಇಷ್ಟವಿಲ್ಲ. ಯಾವುದೇ ಶಾಸಕರಾಗಲಿ ಮಾತನಾಡಲು, ದನಿ ಎತ್ತಲು ಅವಕಾಶವಿದೆ. ಸದನದಲ್ಲಿ ಮಾತನಾಡುವಾಗ ತನಿಖೆಯಾಗಲಿ ಎಂದು ಹೇಳಿರಬಹುದು. ಕಂದಾಯ ಸಚಿವ ಕೃಷ್ಣಬೈರೇಗೌಡರು ಈಗಾಗಲೇ ತನಿಖೆ ಮಾಡಲು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ, ತನಿಖೆಗಳು ನಡೆಯುತ್ತಿರುವ ವಿಚಾರ ನನಗೂ ಗೊತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ” ಎಂದು ಹೇಳಿದರು.

ಬಿ.ಆರ್.ಪಾಟೀಲ್ ಅವರನ್ನು ಕರೆದು ಮಾತನಾಡುತ್ತೀರ ಎಂದಾಗ “ಖಂಡಿತಾ ಮಾತನಾಡಬೇಕು. ವಿಚಾರ ತಿಳಿದುಕೊಂಡು, ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News