ಮಂಗಳೂರು: ರಾಜ್ಯಾದ್ಯಂತ ಮಳೆಯಿಲ್ಲದೆ, ಎಲ್ಲೆಡೆ ನೀರಿನ ಅಭಾವ ಎದುರಾಗಿರುವ ಬೆನ್ನಲ್ಲೇ ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಕೊರತೆ ಹೆಚ್ಚಾಗುತ್ತಿದ್ದು, ಪ್ರವಾಸಿಗರು ಶ್ರೀ ಕ್ಷೇತ್ರ ಧರ್ಮಸ್ಥಳ ದರ್ಶನವನ್ನು ಮುಂದೂಡುವಂತೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮಘಟ್ಟದ ಭಾಗದಿಂದ ನೀರು ಹರಿದು ಬರುವುದರಿಂದ ನೇತ್ರಾವತಿಯಲ್ಲಿ ನೀರು ಹೆಚ್ಚಿರುತ್ತದೆ. ಆದರೆ, ಅಲ್ಲಿಯೂ ಮಳೆಯಾಗದ ಕಾರಣ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಸಂಪೂರ್ಣ ಬರಿದಾಗಿದ್ದು, ನೀರಿನ ಸಮಸ್ಯೆ ಹೆಚ್ಚಾಗಿದೆ. ಅಲ್ಲದೆ, ಹವಾಮಾನ ಇಲಾಖೆ ಸಹ ಇನ್ನೂ 10 ದಿನಗಳ ಕಾಲ ಮಳೆ ಬರುವುದಿಲ್ಲ ಎಂದು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನೀರಿನ ಸಮಸ್ಯೆ ಎದುರಾಗಲಿದೆ . ಹಾಗಾಗಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ವೀರೇಂದ್ರ ಹೆಗಡೆ ಕರೆ ನೀಡಿದ್ದಾರೆ.
ನಗರ ಪ್ರದೇಶದಲ್ಲಿಯೂ ನೀರಿನ ಕೊರತೆ ಹೆಚ್ಚಾಗಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಹೀಗಾಗಿ ವಾರದಲ್ಲಿ ಕೇವಲ 3 ರಿಂದ 4 ದಿನಗಳಿಗೊಮ್ಮೆ ನೀರು ದೊರೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಯಾತ್ರಾರ್ಥಿಗಳೂ ಸಹ ಸಮಸ್ಯೆ ಅರಿತು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.