ಡಿ.ಕೆ. ಶಿವಕುಮಾರ್ ವಿಚಾರಣೆ ತೀವ್ರಗೊಳಿಸಿದ ಇಡಿ

ಡಿ.ಕೆ. ಶಿವಕುಮಾರ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಆರೋಪಿಗಳಾದ ಸುನಿಲ್ ಕುಮಾರ್ ಶರ್ಮಾ, ಆಂಜನೇಯ, ಸಚಿನ್ ನಾರಾಯಣ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Yashaswini V Yashaswini V | Updated: Sep 11, 2019 , 07:27 AM IST
ಡಿ.ಕೆ. ಶಿವಕುಮಾರ್ ವಿಚಾರಣೆ ತೀವ್ರಗೊಳಿಸಿದ ಇಡಿ
File image

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಮಂಗಳವಾರ ಸುದೀರ್ಘ ವಿಚಾರಣೆ ನಡೆಸಿದರು.

ಜಾರಿ‌ ನಿರ್ದೇಶನಾಲಯದಲ್ಲಿ 7ನೇ ದಿನ ಕಳೆದ ಡಿ.ಕೆ. ಶಿವಕುಮಾರ್ ಅವರನ್ನು ಎಂದಿನಂತೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ತುಘಲಕ್ ರಸ್ತೆ ಪೊಲೀಸ್ ಠಾಣೆಯಿಂದ ಜಾರಿ ನಿರ್ದೇಶನಾಲಯದ ಕಚೇರಿಗೆ ಕರೆತರಲಾಯಿತು. ದಿನವಿಡೀ ವಿಚಾರಣೆ ನಡೆಸಿ ರಾತ್ರಿ ಮತ್ತೆ ಜಾರಿ‌‌ ನಿರ್ದೇಶನಾಲಯದ ಕಚೇರಿಯಿಂದ ತುಘಲಕ್ ರಸ್ತೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬಿಡಲಾಯಿತು.

ಈ ನಡುವಿನ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಮೇಲಿನ ಹಿಡಿತವನ್ನು  ಮತ್ತಷ್ಟು ಬಿಗಿಗೊಳಿಸಲು ದೆಹಲಿಯಲ್ಲಿರುವ ಅವರ ಆಪ್ತ ಆಂಜನೇಯ ಮನೆ ಮೇಲೆ ಜಾರಿ ಅಧಿಕಾರಿಗಳು ದಾಳಿ ಮಾಡಿ ಕೆಲವೊಂದು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಜನೇಯ ಅವರಿಂದ ಕೆಲವು ಮಾಹಿತಿ ಪಡೆದಿದ್ದಾರೆ. ಈ ದಾಖಲೆ ಮತ್ತು ಮಾಹಿತಿಗಳ ಆಧಾರದ ಮೇಲೆ ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಇದಲ್ಲದೆ ಡಿ.ಕೆ. ಶಿವಕುಮಾರ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಆರೋಪಿಗಳಾದ ಸುನಿಲ್ ಕುಮಾರ್ ಶರ್ಮಾ, ಆಂಜನೇಯ, ಸಚಿನ್ ನಾರಾಯಣ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇವರೆಲ್ಲರನ್ನೂ ಡಿ.ಕೆ. ಶಿವಕುಮಾರ್ ಜೊತೆಯಲ್ಲಿಯೇ ವಿಚಾರಣೆ ನಡೆಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿಕೆಗಳನ್ನು ದಾಖಲಾತಿಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎಂದಿನಂತೆ ಸಂಜೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಸಂಸದ ಡಿ.ಕೆ.‌ಸುರೇಶ್,  ಡಿ.ಕೆ. ಶಿವಕುಮಾರ್ ಜೊತೆ ಅವರ ಪುತ್ರಿ ಐಶ್ವರ್ಯಗೆ ಜಾರಿ‌ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಮತ್ತು ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ ವತಿಯಿಂದ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಡಿ.ಕೆ.‌ ಶಿವಕುಮಾರ್ ಅವರು ಶಾಂತಿಯುತವಾಗಿ ಪ್ರತಿಭಟನೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಅಭಿಮಾನ-ಪ್ರೀತಿಗೆ ಚಿರ ಋಣಿ ಎಂದು ಹೇಳಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ನಾವು ಯಾವುದೇ ಸಮನ್ಸ್ ಮತ್ತು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲಿದ್ದೇವೆ ಎಂದರು.