ಇದೇ ಕೊನೆ ಚುನಾವಣೆ ಎಂದು ಎಷ್ಟು ಬಾರಿ ನುಡಿದಿರಿ, ಎಷ್ಟು ಬಾರಿ ತಪ್ಪಿದಿರಿ?: ಸಿದ್ದುಗೆ ಸುನೀಲ್ ಕುಮಾರ್ ಪ್ರಶ್ನೆ

ಸಮಕಾಲೀನ ರಾಜಕಾರಣದ “ಉತ್ತರಪುರುಷ” ಎಂದು ಬಿರುದಾಂಕಿತರಾದ ನಿಮ್ಮಿಂದ ಸುಳ್ಳು ಬಡಾಯಿಗಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ಸಿದ್ದರಾಮಯ್ಯಗೆ ವಿ.ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

Written by - Puttaraj K Alur | Last Updated : Jan 16, 2023, 03:17 PM IST
  • ಸಾಲ ಮಾಡಿಯಾದ್ರೂ ತುಪ್ಪ ತಿನ್ನಬೇಕೆಂಬ “ವಿತ್ಥನೀತಿ”ಯನ್ನು ರಾಜ್ಯದ ಮೇಲೆ ಹೇರಿದ ಸಿದ್ದರಾಮಯ್ಯ
  • ದಿವಾಳಿ ಹೊಂದುವುದನ್ನೇ ಪ್ರಧಾನ ಗುರಿಯಾಗಿಸಿಕೊಂಡ ಅರ್ಥವ್ಯವಸ್ಥೆಗೆ ಸಿದ್ದರಾಮಯ್ಯರ ನೀತಿ ಆದರ್ಶ
  • ಸಿದ್ದರಾಮಯ್ಯರ ಮಾತು, ಕೃತಿ ಒಂದು ರೀತಿ “ಹಸ್ತಿ ದಂತ” ಇದ್ದಂತೆ ಎಂದು ಟೀಕಿಸಿದ ವಿ.ಸುನೀಲ್ ಕುಮಾರ್
ಇದೇ ಕೊನೆ ಚುನಾವಣೆ ಎಂದು ಎಷ್ಟು ಬಾರಿ ನುಡಿದಿರಿ, ಎಷ್ಟು ಬಾರಿ ತಪ್ಪಿದಿರಿ?: ಸಿದ್ದುಗೆ ಸುನೀಲ್ ಕುಮಾರ್ ಪ್ರಶ್ನೆ title=
ಸಿದ್ದರಾಮಯ್ಯ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ

ಬೆಂಗಳೂರು: ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ “ವಿತ್ಥನೀತಿ”ಯನ್ನು ಸಿದ್ದರಾಮಯ್ಯನವರು ರಾಜ್ಯದ ಮೇಲೆ ಹೇರಿ ಹೋಗಿದ್ದಾರೆ ಎಂದು ಸಚಿವ ವಿ.ಸುನೀಲ್ ಕುಮಾರ್ ಕಿಡಿಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಸಾಲ ಎತ್ತುವಳಿಯನ್ನೇ ಬಂಡವಾಳ ಹೂಡಿಕೆ ಎಂದು ವ್ಯಾಖ್ಯಾನಿಸುವ ಅವರ ಭಂಡತನ ಅರ್ಥಶಾಸ್ತ್ರದ ಹೊಸ ವ್ಯಾಖ್ಯಾನವೇ ಸರಿ. ದಿವಾಳಿ ಹೊಂದುವುದನ್ನೇ ಪ್ರಧಾನ ಗುರಿಯಾಗಿಸಿಕೊಂಡ ಅರ್ಥವ್ಯವಸ್ಥೆಗೆ ನಿಮ್ಮ ನೀತಿ ಆದರ್ಶ’ವೆಂದು ಟೀಕಿಸಿದ್ದಾರೆ.

‘ಕುತ್ತಿಗೆವರೆಗೆ ಮುಳುಗಿದ್ದ ಎಸ್ಕಾಂಗಳನ್ನು ಸಾಲದ ಹೊರೆಯಿಂದ ಮೇಲೆತ್ತಿದ್ದೇವೆಂದು ಬೆನ್ನು ಚಪ್ಪರಿಸಿಕೊಂಡಿದ್ದೀರಿ, ಸಂತೋಷ. ಸಮಕಾಲೀನ ರಾಜಕಾರಣದ “ಉತ್ತರಪುರುಷ” ಎಂದು ಬಿರುದಾಂಕಿತರಾದ ನಿಮ್ಮಿಂದ ಇಂಥ ಸುಳ್ಳು ಬಡಾಯಿಗಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವೇ? ನೀವು ಎಸ್ಕಾಂಗಳ ಮೇಲೆ ಹೊರಿಸಿ ಹೋದ ಸಾಲದ ಗಂಟನ್ನು ಇಳಿಸಿದ್ದು ನಾವು’ ಎಂದು ಸುನೀಲ್ ಕುಮಾರ್ ಕುಟುಕಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ; ಸಂಪೂರ್ಣ ತನಿಖೆ: ಸಿಎಂ ಬೊಮ್ಮಾಯಿ

‘ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಎಲ್‌ ಮೇಲಿನ 10,203 ಕೋಟಿ ರೂ. ಸಾಲವೂ ಸೇರಿದಂತೆ 2013 ರಿಂದ 2018ರ ಅವಧಿಯಲ್ಲಿ  33,404.20 ಕೋಟಿ ರೂ. ಸಾಲದ ಗಂಟನ್ನು ಎಸ್ಕಾಂಗಳ ಮೇಲೆ ಹೊರಿಸಿದ್ದಿರಿ. ನೀವೇ ಸ್ಟೇರಿಂಗ್‌ ಹಿಡಿದು “ಸಮನ್ವಯ” ಸಾಧಿಸಿದ ಮೈತ್ರಿ ಸರ್ಕಾರದ ಕಾಲದಲ್ಲಿ 27,178 ಕೋಟಿ ರೂ. ಸಾಲದ ಹೊರೆ ಎಸ್ಕಾಂಗಳ ಮೇಲೆ ಬಿತ್ತು. ಆದರೆ ವಾಸ್ತವ ಮರೆ ಮಾಚುವುದಕ್ಕಾಗಿ ನೀವು ಸಾಲವನ್ನು ಬಂಡವಾಳ ಹೂಡಿಕೆ ಎಂದು ವ್ಯಾಖ್ಯಾನಿಸಿದ್ದೀರಿ. ಇಷ್ಟೊಂದು ಸಾಲ ಮಾಡಿದ ಮೇಲೆ ಹೊರೆ ಇಳಿಸಿದ್ದೇನೆಂದು ಬೆನ್ನು ತಟ್ಟಿಕೊಳ್ಳುವ ನಿಮ್ಮ ಜ್ಞಾನನಿಧಿಯ ಬಗ್ಗೆ ಸಾಮಾನ್ಯ ಪ್ರಜೆಯೂ ಸರ್ವಾಂಗಗಳಿಂದಲೂ ಕನಿಕರ ವ್ಯಕ್ತಪಡಿಸಬಹುದು’ ಎಂದು ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

‘ಈ ಕಾರಣಕ್ಕಾಗಿಯೇ ನೀವು ಕತ್ತಲೆಯಲ್ಲಿ ಬಜೆಟ್‌ ಓದಿದ ಸಂಗತಿಯನ್ನು ನಾನು ನೆನಪು ಮಾಡಿಕೊಂಡಿದ್ದೇನೆ. ನುಡಿದಂತೆ ನಡೆಯುವವರು ನಾವು ಎಂದು ಅತಿಯಾಗಿ ಬೆನ್ನುತಟ್ಟಿಕೊಳ್ಳಬೇಡಿ. ನಿಮ್ಮ ನಡೆ-ನುಡಿಯೊಳಗಿನ ಕಾಪಟ್ಯ ಎಲ್ಲರಿಗೂ ಗೊತ್ತು. ಇದೇ ನನ್ನ ಕೊನೆ ಚುನಾವಣೆ ಎಂದು ಎಷ್ಟು ಬಾರಿ ನುಡಿದಿರಿ, ಎಷ್ಟು ಬಾರಿ ತಪ್ಪಿದಿರಿ ? ರಾಜಕೀಯವಾಗಿ ಮರುಜನ್ಮ ನೀಡಿದ ಬಾದಾಮಿಯನ್ನು ತ್ಯಜಿಸಿ ಕೋಲಾರಕ್ಕೆ ವಲಸೆ ಹೊರಟಿದ್ದೀರಿ. ಇದು ನುಡಿದಂತೆ ನಡೆಯುವ ಪರಿಯಾ ? ನಿಮ್ಮ ಮಾತು, ಕೃತಿ ಒಂದು ರೀತಿ “ಹಸ್ತಿ ದಂತ” ಇದ್ದಂತೆ. ಆನೆಗೆ ಇರುವುದು ಎರಡೇ ದಂತವೆಂದು ಭಾವಿಸುವುದು ಎಷ್ಟು ಮೂರ್ಖತನವೋ, ಸಿದ್ದರಾಮಯ್ಯನವರ ನುಡಿಯಂತೆ ನಡೆ ಎಂಬುದು ಅಷ್ಟೇ ಅಪಾಯಕಾರಿ’ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕಾರ್ಯಕ್ರಮ ‘ನಾ ನಾಯಕಿ’ ಅಲ್ಲ, ನಾ ನಾಲಾಯಕಿ: ಅಶ್ವತ್ಥ ನಾರಾಯಣ ವ್ಯಂಗ್ಯ

‘ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ನೀಡಬೇಕಿದ್ದ ವಿದ್ಯುತ್‌ ಸಬ್ಸಿಡಿಯನ್ನೇ ಬಾಕಿಯಿಟ್ಟು ಹೋದ ಘನ ಸರ್ಕಾರ ತಮ್ಮದ್ದಾಗಿತ್ತು ಎಂಬುದನ್ನು ಮರೆಯದಿರಿ. ಎಲ್ಲಾ ಆಯಾಮಗಳನ್ನು ಪರಿಶೀಲಿಸಿದಾಗ ನೀವು ಕೊಟ್ಟ ಉಚಿತ ವಿದ್ಯುತ್‌ ಭರವಸೆ ಈಡೇರಿಸುವುದಕ್ಕೆ ವಾರ್ಷಿಕ 9000 ಕೋಟಿ ರೂ. ಬೇಕಾಗುತ್ತದೆ. ಅಂದರೆ ವಾರ್ಷಿಕವಾಗಿ ಮತ್ತೆ 9000 ಕೋಟಿ ಸಾಲದ “ಹೂಡಿಕೆ” ಮಾಡುವ ಯೋಚನೆ ನಿಮ್ಮದಾಗಿದೆ. “ಭರವಸೆ ಉಚಿತ, ಸಾಲ ಖಚಿತ” ಎಂಬ ಅರ್ಥನೀತಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ’ ಎಂದು ಸುನೀಲ್ ಕುಮಾರ್ ಟೀಕಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News