ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿದ್ದರಾಮಯ್ಯ ಒಬ್ಬ ಹುಚ್ಚ ಎಂದು ಏಕವಚನದಲ್ಲಿ ತೀವ್ರ ವಾಗ್ಧಾಳಿ ನಡೆಸುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಉಪಚುನಾವಣೆ ಬಳಿಕ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ(Siddaramaiah) ಅವರ ಹೇಳಿಕೆಯನ್ನು ಭ್ರಮೆ ಅನ್ನಬೇಕೋ ಅಥವಾ ಕನಸು ಅನ್ನಬೇಕೋ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದ ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa), ಈ ಉಪಚುನಾವಣೆಯಲ್ಲಿ ನಾವು ಎಂಟು ಸ್ಥಾನ ಗೆಲ್ಲದಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಿಮ್ಮ ಪಕ್ಷ ಎಂಟು ಸ್ಥಾನ ಗೆಲ್ಲದಿದ್ದರೆ ವಿಪಕ್ಷ ಸ್ಥಾನಕ್ಕೆ ನೀವೂ ರಾಜೀನಾಮೆ ನೀಡುತ್ತೀರಾ? ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯಗೆ CM ಸ್ಥಾನದ ಹುಚ್ಚಿನಿಂದ ಹೊರಬರಲು ಆಗುತ್ತಿಲ್ಲ!
ಉಪಚುನಾವಣೆ ಬಳಿಕ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಕಿಡಿಕಾರಿರುವ ಈಶ್ವರಪ್ಪ, ಸಿದ್ದರಾಮಯ್ಯ ಒಬ್ಬ ಹುಚ್ಚ, ಮುಖ್ಯಮಂತ್ರಿ ಸ್ಥಾನದ ಹುಚ್ಚಿನಿಂದ ಹೊರಬರಲು ಆಗುತ್ತಿಲ್ಲ. ಜೊತೆಗೆ ಅವರಿಗೆ ಭ್ರಮೆಯಿಂದ ಹೊರ ಬರಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಒಬ್ಬಂಟಿ ಎಂದು ತಿಳಿಸಿದ ಈಶ್ವರಪ್ಪ, ಅವರೊಬ್ಬ ಸ್ವಾರ್ಥಿ, ರಾಜ್ಯದಲ್ಲಿ ಯಾರನ್ನೂ ಬೆಳೆಯಲು ಬಿಡಲಿಲ್ಲ. ವಿಶ್ವನಾಥ್ ಅವರನ್ನು ಮುಗಿಸಲು ಹೆಜ್ಜೆ ಹೆಜ್ಜೆಗೂ ಪ್ರಯತ್ನಿಸಿದ ಸಿದ್ದು ಅವರೊಂದಿಗೆ ಇಂದು ಯಾವುದೇ ಕಾಂಗ್ರೆಸ್ ನಾಯಕರೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಷ್ಟ ನಿದರ್ಶನ ದೊರೆತಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧವೂ ವಾಗ್ಧಾಳಿ ನಡೆಸಿದ ಸಚಿವ ಕೆ.ಎಸ್. ಈಶ್ವರಪ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಮಗನನ್ನೇ ಗೆಲ್ಲಿಸಲು ಆಗಲಿಲ್ಲ. ಇನ್ನು ಬಿಜೆಪಿಯನ್ನ ಸೋಲಿಸುತ್ತಾರಾ ಎಂದು ವ್ಯಂಗ್ಯವಾಡಿದ್ದಾರೆ.
ಬಯಲು ಶೌಚಮುಕ್ತ ಗ್ರಾಮ ಘೋಷಣೆಯೇ ಸುಳ್ಳು:
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ವೇಳೆ ಬಯಲು ಶೌಚಮುಕ್ತ ಘೋಷಣೆಯೇ ಸುಳ್ಳು ಎಂದು ತಿಳಿದ ಕೆ.ಎಸ್. ಈಶ್ವರಪ್ಪ, ಈ ಬಗ್ಗೆ ತಪ್ಪು ಅಂಕಿ-ಅಂಶಗಳನ್ನು ನೀಡಿ ದಾರಿ ತಪ್ಪಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಎರಡು ಪ್ರಮುಖ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹ ಹಾಗೂ ಸೋಲಾರ್ ಅಳವಡಿಕೆ ಯೋಜನೆಗೆ ಒಟ್ಟು ನೀಡಲಾಗಿದೆ ಎಂದು ಮಾಹಿತಿ ನೀಡಿದರು.