ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ-ಸಿದ್ದರಾಮಯ್ಯ

 ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿರುವುದರಿಂದ ರೈತರು ಭೀಕರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ  ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.

Last Updated : Oct 14, 2020, 08:15 PM IST
ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ-ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿರುವುದರಿಂದ ರೈತರು ಭೀಕರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ  ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.

ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಕೊರೊನಾಕ್ಕಿಂತಲೂ ಅಪಾಯಕಾರಿ-ಸಿದ್ಧರಾಮಯ್ಯ

  • ಅತಿವೃಷ್ಟಿಯಿಂದಾಗಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ಬೆಳೆಗಳು ಘೋಷಿತ ಬೆಂಬಲ ಬೆಲೆಗಿಂತಲೂ ಕ್ವಿಂಟಲ್ ಗೆ ರೂ.300ರಿಂದ 1500 ವರೆಗೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ತಕ್ಷಣ ಖರೀದಿ ಕೇಂದ್ರಗಳನ್ನು ತೆರೆದು ಕನಿಷ್ಠ ಬೆಂಬಲ ಬೆಲೆಗೆ ಬೆಳೆ ಖರೀದಿಮಾಡಲು ಮುಖ್ಯಮಂತ್ರಿಗಳು ಆದೇಶ ನೀಡಬೇಕು. 
  • ಈ ವರ್ಷದ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಉದ್ದು ಮುಂತಾದ ಬೆಳೆಗಳ ಕುಯಿಲು ಸಂದರ್ಭದಲ್ಲಿ ವಿಪರೀತ ಮಳೆ ಸುರಿದು ಗಿಡದಲ್ಲೇ ಮೊಳಕೆ ಬಂದು ಕೊಳೆತು ಹೋದವು. ಈಗ ಈರುಳ್ಳಿ, ಶೇಂಗಾ, ಹತ್ತಿ, ಮೆಣಸಿನ ಕಾಯಿ, ರಾಗಿ, ಮುಸುಕಿನ ಜೋಳ, ಬಿಳಿ ಜೋಳ ಮುಂತಾದ ಬೆಳೆಗಳು ಸಹ ಕೊಳೆತು ಹೋಗುತ್ತಿವೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಧಾನವಾಗಿ ಬೆಳೆಯುವ ತೊಗರಿ ಹೂವು ಕಟ್ಟುವ ಸಮಯವಿದು. ಆಗಸ್ಟ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಗುಲ್ಬರ್ಗ ಜಿಲ್ಲೆ ಒಂದರಲ್ಲೇ ಸುಮಾರು 2 ಲಕ್ಷ ಹೆಕ್ಟೇರ್ ತೊಗರಿ ಹಾಳಾಗಿದೆ ಎಂದು ಸರ್ಕಾರವೇ ಅಂದಾಜು ಮಾಡಿದೆ.
  • ವಾಡಿಕೆಗಿಂತ ಸುಮಾರು 250 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಈ ವರ್ಷ ಕಲಬುರಗಿ ಒಂದರಲ್ಲೇ ಸುರಿದಿದೆ. ಇದೇ ಪರಿಸ್ಥಿತಿ ರಾಜ್ಯದ ಉಳಿದ ಜಿಲ್ಲೆಗಳಿಗೂ ಬಂದೊದಗಿದೆ. ದಕ್ಷಿಣ ಕರ್ನಾಟಕದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅವರೆ, ರಾಗಿ, ಅಲಸಂದೆ, ಜೋಳ, ಶೇಂಗಾ ಮುಂತಾದ ಬೆಳೆಗಳು ನೆಲಕಚ್ಚಿ ಕೊಳೆತು ಹೋಗ ತೊಡಗಿವೆ. ಕರಾವಳಿ ಮತ್ತು ಮಲೆನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಅಡಿಕೆ ಬೆಳೆಗೆ ಹಳದಿ ಎಲೆ ರೋಗದ ಸಮಸ್ಯೆ ಕಾಡುತ್ತಿದೆ. ಕೊಳೆ ರೋಗದಿಂದಾಗಿ ಅಡಿಕೆ, ಮೆಣಸು, ಕಾಫಿ ಮುಂತಾದ ಬೆಳೆಗಳು ಮರ ಗಿಡಗಳಲ್ಲಿರುವುದಕ್ಕಿಂತ ನೆಲಕ್ಕೆ ಉದುರಿ ಕೊಳೆತು ಹೋಗಿರುವ ಪ್ರಮಾಣವೆ ಹೆಚ್ಚಾಗಿದೆ.
  •  ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಭಾಗಗಳಲ್ಲಿ ಬೆಳೆ ಜತೆಗೆ ಸ್ಥಿರಾಸ್ತಿಗಳು ಕೂಡ ನಾಶವಾಗಿವೆ. ಮನೆಗಳು ಉದುರಿ ಬಿದ್ದಿರುವ, ಜನ-ಜಾನುವಾರುಗಳು ಮರಣ ಹೊಂದಿರುವ, ದವಸ-ಧಾನ್ಯ, ಹಸುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ದುರಂತದ ಪ್ರಮಾಣವನ್ನು ವಿವರಿಸುತ್ತಿವೆ. ತಗ್ಗಿನ ಪ್ರದೇಶಗಳಲ್ಲಿ ಬೆಳೆ ಜತೆಗೆ ಸ್ಥಿರಾಸ್ತಿಯನ್ನು ಕಳೆದುಕೊಂಡ ಬಡ ರೈತರು ಮತ್ತೆ ತಮ್ಮ ಕುಟುಂಬವನ್ನು ಕಟ್ಟಿ ನಿಲ್ಲಿಸಿಕೊಳ್ಳಲು ಐದಾರು ವರ್ಷಗಳೇ ಬೇಕಾಗಬಹುದು. ಪದೇ ಪದೇ ದುರಂತಗಳಿಗೆ ಬಲಿಯಾಗುತ್ತಿರುವ ರೈತರ ನೆರವಿಗೆ ಬಾರದ ಸರ್ಕಾರ ಅತ್ಯಂತ ಕ್ರೂರಿ ಸರ್ಕಾರವೆನ್ನಿಸಿಕೊಳ್ಳುತ್ತದೆ.
  •  ಕಳೆದ ವರ್ಷವೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಬಿದ್ದ ಮಹಾಮಳೆಯಿಂದ ಉಂಟಾದ ನಷ್ಟ ಸುಮಾರು ರೂ.1.00 ಲಕ್ಷ ಕೋಟಿಯಾಗಿದ್ದರೂ, ಕೇಂದ್ರ ರಾಜ್ಯ ಸರ್ಕಾರಗಳೆರಡೂ ಜನರಿಗೆ ಬಿಡಿಗಾಸನ್ನು ನೀಡಿ ಕೈತೊಳೆದುಕೊಂಡವು. ಕಳೆದ ವರ್ಷದ ಅತಿವೃಷ್ಟಿಯಿಂದಾಗಿ ಬಿದ್ದ ಅಸಂಖ್ಯಾತ ಮನೆಗಳಿಗೆ ಇನ್ನು ಸಹ ಪೂರ್ಣ ಪ್ರಮಾಣದ ಪರಿಹಾರ ನೀಡಿಲ್ಲ. ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು 9,000 ಮನೆಗಳಿಗೆ ಪರಿಹಾರ ನೀಡುವುದು ಬಾಕಿ ಇದೆ ಎಂದು ಸ್ವತ: ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ದಾರೆ.
  •  ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ತುದಿಗಾಲಲ್ಲಿ ನಿಂತಿರುವ ಸರ್ಕಾರಗಳು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಬೆಳೆಗಳನ್ನು ಖರೀದಿ ಮಾಡದಂತೆ ಸುಗ್ರೀವಾಜ್ಞೆ ಹೊರಡಿಸಿ, ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಏಕೆ ಹಿಂಜರಿಯುತ್ತಿವೆ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈಗಾಗಲೇ ಈ ವರ್ಷ ಯಾವುದೇ ಬೆಳೆಗೆ ಬೆಂಬಲ ಬೆಲೆ ನೀಡುವುದಿಲ್ಲ, ಖರೀದಿ ಕೇಂದ್ರಗಳನ್ನು ತೆರೆಯುವುದಿಲ್ಲ, ಸಂಪನ್ಮೂಲಗಳ ಸಮಸ್ಯೆ ಇದೆ ಎಂದು ಹೇಳಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಹಾಗೆ ಹೇಳಲು ಕೇಂದ್ರ ಸರ್ಕಾರದ ನಿರ್ದೇಶನವಿದೆಯೇ ಎಂದು ಅವರು ನಾಡಿನ ಜನತೆಗೆ ಸ್ಪಷ್ಟಪಡಿಸಬೇಕು.
  •  ಒಂದು ಕಡೆ ಹೊಲದಲ್ಲಿ ಬೆಳೆ ಕೊಳೆಯುತ್ತಿದೆ. ಮತ್ತೊಂದು ಕಡೆ ಕುಯಿಲು ಮಾಡಿದ ಫಸಲು ಮಾರುಕಟ್ಟೆಯಲ್ಲಿ ಬಿಡಿಗಾಸಿಗೆ ಮಾರಾಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿರುವುದರಿಂದ ರೈತರು ಭೀಕರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೊರೋನಾ ಕಾರಣದಿಂದಾಗಿ ನಗರಗಳನ್ನು ಬಿಟ್ಟು ಹಳ್ಳಿಗಳಿಗೆ ವಲಸೆ ಹೋದ ಜನ ವ್ಯಾಪಕ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅಂದಾಜಿನ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.20 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ.
  • ಆರಂಭದಿಂದಲೂ ಸಮರ್ಪಕವಾಗಿ ಮಳೆ ಬಂದ ಕಾರಣದಿಂದ ಫಸಲು ಸಹ ಚೆನ್ನಾಗಿ ಬಂದಿದೆ. ಆದರೆ ಬೆಲೆಗಳು ಕುಸಿಯುತ್ತಿವೆ ಜೊತೆಗೆ ಅತಿವೃಷ್ಟಿ ಹಾನಿ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಂತೂ ತಮಗೆ ನಿಗಧಿಯಾಗಿರುವ ಜಿಲ್ಲೆಗಳ ಕಡೆಗೆ ತಲೆ ಹಾಕುತ್ತಿಲ್ಲ. ಹೀಗಾಗಿ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. 

More Stories

Trending News