ಬೆಂಗಳೂರು: ಇಂದು 73ನೇ ಸ್ವಾತಂತ್ರ್ಯ ದಿನಾಚರಣೆ. ಈ ಸಂದರ್ಭದಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಆ ಜನರ ರಕ್ಷಣೆಗೆ ನಾವೆಲ್ಲರೂ ಕಂಕಣಬದ್ಧರಾಗುವ ಮೂಲಕ ಸ್ವಾತಂತ್ರ್ಯ ಆಚರಿಸೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, "73ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಪ್ರಕೃತಿಯ ವೈಪರೀತ್ಯದಿಂದಾಗಿ ನಮ್ಮ ರಾಜ್ಯದ ಹಲವು ಜಿಲ್ಲೆಗಳ ಜನತೆ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಬರಗಾಲವೂ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ನಮ್ಮ ಜನತೆಯ ರಕ್ಷಣೆಗೆ ಕಂಕಣ ಬದ್ಧರಾಗುವ ಮೂಲಕ ಸ್ವಾತಂತ್ರ್ಯ ಆಚರಿಸೋಣ" ಎಂದಿದ್ದಾರೆ.
73ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
ಪ್ರಕೃತಿಯ ವೈಪರೀತ್ಯದಿಂದಾಗಿ ನಮ್ಮ ರಾಜ್ಯದ ಹಲವು ಜಿಲ್ಲೆಗಳ ಜನತೆ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಬರಗಾಲವೂ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ನಮ್ಮ ಜನತೆಯ ರಕ್ಷಣೆಗೆ ಕಂಕಣ ಬದ್ಧರಾಗುವ ಮೂಲಕ ಸ್ವಾತಂತ್ರ್ಯ ಆಚರಿಸೋಣ.#IndependenceDayIndia— H D Kumaraswamy (@hd_kumaraswamy) August 15, 2019
ರಾಜ್ಯದ ಉತ್ತರಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಮಲೆನಾಡಿನಲ್ಲಿಯೂ ಸಹ ನದಿಗಳ ನೀರಿನ ಮತ್ತ ಹೆಚ್ಚುತ್ತಲೇ ಇದೆ. ಒಟ್ಟು 80 ತಾಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದೆ. ಇದುವರೆಗೆ ಪ್ರವಾಹದಲ್ಲಿ ಸಿಲುಕಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 7 ಲಕ್ಷಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.
ಉತ್ತರಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಹೆಚ್ಚಿದ್ದು, ಸೇನಾಪಡೆ, ನೌಕಾ ಪಡೆ ಮತ್ತು ವಾಯು ಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.