ದೇವೇಗೌಡರ ಕುಟುಂಬದಿಂದ ನಾಲ್ವರ ಸ್ಪರ್ಧೆ

ಚುನಾವಣೆಯಲ್ಲಿ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಮಾಡುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.

Last Updated : Jan 10, 2018, 11:02 AM IST
  • ಮುಂಬರುವ ಚುನಾವಣೆಯಲ್ಲಿ ಕುಟುಂಬದಿಂದ ಇಬ್ಬರೇ ಸ್ಪರ್ಧೆ- ಎಚ್ಡಿಕೆ
  • ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಸಾಧ್ಯತೆ.
  • ಬೇಲೂರಿನಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಸಾಧ್ಯತೆ.
ದೇವೇಗೌಡರ ಕುಟುಂಬದಿಂದ ನಾಲ್ವರ ಸ್ಪರ್ಧೆ title=

ಬೆಂಗಳೂರು: ಅಪ್ಪ-ಮಕ್ಕಳ ಪಕ್ಷ ಎಂದೇ ಬಿಂಬಿತವಾಗಿರುವ ಜೆಡಿಎಸ್ ಪಕ್ಷದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಮಾಡುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಕುಮಾರಣ್ಣ ಈಗಲೂ ಅದನ್ನೇ ಹೇಳುತ್ತಾರೆ. ಆದರೆ, ಚನ್ನಪಟ್ಟಣ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಮತ್ತು ಬೇಲೂರಿನಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿಗಳಾಗಿ ಸ್ಥಳೀಯ ಮುಖಂಡರು ಘೋಷಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಿಂದ ನಾಲ್ವರ ಸ್ಪರ್ಧೆ ಬಹುತೇಕ ಖಚಿತವಾಗುವ ಸಾಧ್ಯತೆ ಇದೆ.

ಕುಟುಂಬದಿಂದ ಮೂರನೆ ಅಭ್ಯರ್ಥಿಯ ಹೆಸರು ಇಂದೇ ಘೋಷಣೆ ಆಗುವ ಸಾಧ್ಯತೆ ಇದೆ. ಜೆಡಿಎಸ್  ಕಾರ್ಯಕರ್ತರು, ಕ್ಷೇತ್ರದ ಮುಖಂಡರ ಮೂಲಕ ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ ಎಂದು ಇಂದೇ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೇಟ್ ನೀಡಿ ಪ್ರಜ್ವಲ್ ಅವರಿಗೆ ಅವಕಾಶ ನೀಡದಿದ್ದರೆ ಗೌಡರ ಕುಟುಂಬದಲ್ಲಿ ಪ್ರಜ್ವಲ್'ಗೆ ಅವಕಾಶ ಯಾಕಿಲ್ಲ ಎಂಬ ಪ್ರಶ್ನೆ ಉದ್ಭವಿಸಲಿದೆ. ಹೀಗಾಗಿ ಒಂದುವೇಳೆ ಕಾರ್ಯಕರ್ತರ ಆಗ್ರಹಕ್ಕೆ ಮಣಿದು ಅನಿತಾ ಕುಮಾರಸ್ವಾಮಿ ಟಿಕೇಟ್ ನೀಡಲು ಮುಂದಾದರೆ, ಕುಟುಂಬದವರಿಗೆ ಮಣಿದು ಪ್ರಜ್ವಲ್ಗೆ ಟಿಕೇಟ್ ನೀಡಬೇಕಾಗುತ್ತದೆ. ಒಟ್ಟಿನಲ್ಲಿ ಇಲ್ಲ ಇಲ್ಲ ಎನ್ನುತ್ತಲೇ ದೇವೇಗೌಡರ ಕುಟುಂಬದಿಂದ ನಾಲ್ವರು ಚುನಾವಣಾ ಸ್ಪರ್ಧೆಯಲ್ಲಿ ಅಖಾಡಕ್ಕೆ ಇಳಿಯಲು ಸಿದ್ಧರಾಗುತ್ತಿದ್ದಾರೆ.

Trending News