ಗದಗ: ಅದು ಜಗತ್ತು ನೋಡುವ ಮುನ್ನವೇ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದ ಕೂಸು... ಉಸಿರಾಡಲು ಶ್ವಾಸಕೋಶವೇ ಬೆಳೆದಿರಲಿಲ್ಲ... ಜಗತ್ತು ನೋಡಲು ಕಣ್ಣು ತೆರೆದಿರಲಿಲ್ಲ... ಅಮ್ಮನ ಜೋಗುಳ ಕೇಳಲು ಕಿವಿಗಳಿಗೆ ಶಕ್ತಿ ಇರಲಿಲ್ಲ... ದೇಹದ ಯಾವೊಂದು ಭಾಗಗಳೂ ಸಹ ಬೆಳವಣಿಗೆಯಾಗದೇ ಅವಧಿಗೂ ಮುನ್ನ ಹೆರಿಗೆಯಾಗಿ ಪ್ರಾಣಸಂಕಟಕ್ಕೆ ಸಿಲುಕಿತ್ತು. ಇನ್ನೇನು ಲೋಕದ ಹಂಗು ನನಗ್ಯಾಕೇ ಅನ್ನೋವಷ್ಟರಲ್ಲೇ ಜಿಮ್ಸ್ ವೈದ್ಯರು ದೇವರಾಗಿ ಪ್ರತ್ಯಕ್ಷರಾಗಿದ್ದರು. ಸತತ ಮೂರು ತಿಂಗಳ ಕಾಲ ವೈದ್ಯರ ಶ್ರಮ ಪವಾಡದಂತೆ ಬದಲಾಗಿ ಮಗುವಿಗೊಂದು ಮರುಜನ್ಮ ನೀಡಿದ್ದಾರೆ. ಅಮ್ಮನ ಒಡಲಲ್ಲಿ ಕಂದನ ಅಳು ಕೇಳುವಂತೆ ಮಾಡಿದ್ದಾರೆ.
ಹೌದು, ಗದಗ ಜಿಮ್ಸ್ ಆಸ್ಪತ್ರೆ ಅಂದ್ರೆ ಕೇವಲ ಯಡವಟ್ಟು ನಡೆದಿರೋ ಆರೋಪಗಳನ್ನೇ ಕೇಳಿರ್ತೀರಾ... ಆದ್ರೆ ಜಿಮ್ಸ್ ನಲ್ಲಿಯೂ ಸಹ ಅಸಾಧ್ಯವಾದುದನ್ನ ಸಾಧ್ಯ ಮಾಡಿ ಸಾಧಿಸ್ತಾರೆ ಅನ್ನೋದಕ್ಕೆ ಇಲ್ಲಿ ನಡೆದಿರೋ ಘಟನೆಯೊಂದು ಸಾಕ್ಷಿ ಆಗಿದೆ. ಆ ಮೂಲಕ ನಿಜಕ್ಕೂ ಪೋಷಕರ ಕಣ್ಣಲ್ಲಿ ದೇವರಂತೆ ಕಾಣಿಸಿದ್ದಾರೆ ಇಲ್ಲಿನ ವೈದ್ಯರು.
ಅಂದಹಾಗೆ ಗದಗ ತಾಲೂಕಿನ ದುಂದೂರು ಗ್ರಾಮದ ರಾಜೇಶ್ವರಿ ಚಿಕ್ಕನಗೌಡ ಎಂಬ ಮಹಿಳೆಗೆ ಗದಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಧಿ ಪೂರ್ಣ ಹೆರಿಗೆಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಕೇವಲ 24 ವಾರಗಳು ಮಾತ್ರ ದಿನಗಳು ಕಳೆದಿದ್ದರಿಂದ ಕೂಸುಗಳು ಬೆಳವಣಿಗೆಯಾಗಿರಲಿಲ್ಲ. ಹೀಗಾಗಿ ಹುಟ್ಟಿದ ಎರಡನೇ ದಿನಕ್ಕೆ ಹೆಣ್ಣು ಮಗುವೊಂದು ತೀರಿಹೋಗುತ್ತೆ. ಆದ್ರೆ ಒಂದು ಗಂಡು ಮಗು ಸಹ ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಯಾಕೆಂದರೆ ಆ ಮಗುವಿನ ತೂಕ ಕೇವಲ700 ಗ್ರಾಮ ಇತ್ತು. ಶ್ವಾಸಕೋಶ ಬೆಳವಣಿಗೆಯಾಗದೇ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಕಣ್ಣು, ಕಿವಿ, ರಕ್ತದೊತ್ತಡ ಹೀಗೆ ನಾನಾ ಭಾಗಗಳು ಬೆಳೆಯದೇ ಇದ್ದುದ್ದರಿಂದ ಮಗುವಿನ ಮೇಲಿನ ಆಸೆಯನ್ನ ಪೋಷಕರು ಕೈ ಚೆಲ್ಲಿದ್ದರು. ಜೊತೆಗೆ ಖಾಸಗಿ ಆಸ್ಪತ್ರಯಲ್ಲಿನ ಚಿಕಿತ್ಸೆ ವೆಚ್ಚವೂ ಸಹ ದುಬಾರಿಯಾಗಿತ್ತು. ಲಕ್ಷಾಂತರ ರೂ. ಮೊದಲೇ ಕಳೆದುಕೊಂಡಿದ್ದ ಪೋಷಕರು ಕೊನೆಗೆ ನಿರಾಸೆ ಭಾವನೆಯಿಂದ ಗದಗ ಜಿಮ್ಸ್ ಗೆ ತಂದು ಮಗುವಿಗೆ ಚಿಕಿತ್ಸೆ ಕೊಡಿಸಲು ಮುಂದಾದರು. ಆದ್ರೆ ಗದಗ ಜಿಮ್ಸ್ ವೈದ್ಯರ ಚಮತ್ಕಾರ ಮಾತ್ರ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಇದನ್ನೂ ಓದಿ- Video: ಯುನಿಫಾರ್ಮ್ ಹಾಕಿಕೊಂಡು ಮಕ್ಕಳಿಗೆ ಪಾಠ ಮಾಡುವ ರೋಬೊ ಟೀಚರ್
ಮಗುವಿನ ದೇಹ ಗುಬ್ಬಿ ಮರಿ ರೀತಿಯಲ್ಲಿ ಇದ್ದು ಮಗುವಿನ ಕೈಕಾಲುಗಳು ಬಹಳಷ್ಟು ಚಿಕ್ಕದಾಗಿದ್ದರಿಂದ ಮಗುವನ್ನ ಎತ್ತಾಡಲು ಸಹ ಹಿಂಜರಿದಿದ್ದರು. ಕೃತಕ ಗರ್ಭಧಾರಣೆಯ ವಾತಾವರಣ ಸೃಷ್ಟಿ ಮಾಡಿ ಗರ್ಭದಲ್ಲಿ ಯಾವ ರೀತಿ ಮಗು ಬೆಳೆಯುತ್ತೋ ಅದೇ ರೀತಿ ವಾತಾವರಣ ಸೃಷ್ಟಿ ಮಾಡಿ ಮಗುವಿಗೆ ಚಿಕಿತ್ಸೆ ನೀಡ್ತಾರೆ. ಸತತ ಮೂರು ತಿಂಗಳ ಕಾಲ ಜಿಮ್ಸ್ ಕಾಂಗರೂ ಮದರ್ ಕೇರ್ ಘಟಕದಲ್ಲಿ ವಿಶೇಷ ಚಿಕಿತ್ಸೆ ಕೊಡ್ತಾರೆ.
ಆರಂಭದಲ್ಲಿ ಶ್ವಾಸಕೋಶ ಬೆಳವಣಿಗೆಯಾಗೋವರೆಗೂ ವೆಂಟಿಲೇಟರ್ ಮೇಲೆ ಶ್ವಾಸಕೋಶದ ಜಾಗದವರೆಗೆ ಪೈಪ್ ಗಳನ್ನ ಹಾಕಿ ಆಕ್ಸಿಜನ್ ಪೂರೈಕೆ ಮಾಡ್ತಾರೆ. 1)Ventilator 2) Cpap, 3)hfnc 4) oxygen ನಂತಹ ವಿವಿಧ ರೀತಿಯ ಆಯಾಮಗಳಲ್ಲಿ ಮಗುವಿಗೆ ಸತತವಾಗಿ ಹಗಲು ರಾತ್ರಿ ಇಡೀ ಒಂದು ದೊಡ್ಡ ಟೀಮ್ ಚಿಕಿತ್ಸೆ ನೀಡಿ ಮಗುವಿನ ತೂಕ ಹೆಚ್ಚಿಸಿದ್ದಾರೆ. ಈಗ ಅಮ್ಮನ ಮಡಿಲಲ್ಲಿ ಮಗು ಜೋಗುಳದ ಹಾಡು ಕೇಳುವಂತೆ ಮಾಡಿ ದೇವರ ಸ್ವರೂಪಿ ಸ್ಥಾನದಲ್ಲಿ ಕೂತಿದ್ದಾರೆ. ಯಾಕೆಂದರೆ ಈ ರಾಜೇಶ್ವರಿ ಎಂಬ ಮಹಿಳೆಗೆ ಮದುವೆಯಾಗಿ ನಾಲ್ಕು ವರ್ಷಗಳ ಕಾಲ ಮಕ್ಕಳೇ ಆಗಿರಲಿಲ್ಲ. ನಾಲ್ಕು ವರ್ಷಗಳ ಬಳಿಕ ಗರ್ಭ ಧರಿಸಿದ್ದ ಈ ತಾಯಿಗೆ ಚೊಚ್ಚಲ ಬಸಿರಿನಲ್ಲಿಯೇ ಅವಳಿ ಮಕ್ಕಳು ಆಗಿದ್ದವು. ಆದ್ರೆ ಇನ್ನೂ ಮೂರು ತಿಂಗಳು ಬಾಕಿ ಇರಿವಾಗಲೇ ಅಕಾಲಿಕ ಹೆರಿಗೆಯಾಗಿ ಇಷ್ಟೆಲ್ಲ ತೊಂದರೆ ಅನುಭವಿಸಬೇಕಾಯಿತು ಅಂತಾರೆ ತಾಯಿ.
ಇದನ್ನೂ ಓದಿ- Hassan : ಮುಖಕ್ಕೆ ಮಾರಕವಾದ ಮೇಕಪ್ : ಮುಂದೂಡಿದ ಮದುವೆ!
ಇನ್ನು ಈ ರೀತಿಯ ಮಗುವಿನ ಚಿಕಿತ್ಸೆ ಜಿಮ್ಸ್ ನಲ್ಲಿ ಇದೇ ಮೊದಲಬಾರಿಯೇನಲ್ಲ. ನಾಲ್ಕು ವರ್ಷಗಳ ಹಿಂದೆಯೂ ಸಹ 560 ಗ್ರಾಂ ತೂಕದ ಮಗುವನ್ನೂ ಸಹ ಚಿಕಿತ್ಸೆ ನೀಡಿ ಆರೋಗ್ಯವನ್ನಾಗಿ ಮಾಡಿದ್ದರು. ಅದೇ ಮಗು ಈಗ ಎಲ್.ಕೆ.ಜಿ ಶಾಲೆಗೆ ಹೋಗ್ತಿದೆ. ಇದೇ ನೂರಾರು ರೀತಿ ಕಡಿಮೆ ತೂಕದ ಮಕ್ಕಳಿಗೂ ಸಹ ಚಿಕಿತ್ಸೆ ನೀಡಿ ಮರುಜನ್ಮ ನೀಡಿದ್ದಾರೆ. ಹೀಗಾಗಿ ಹಲವಾರು ಪೋಷಕರು ಜಿಮ್ಸ್ ವೈದ್ಯರ ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ವೈದ್ಯರ ಈ ಕಾರ್ಯ ಎಲ್ಲರೂ ಪ್ರಶಂಸೆಗೆ ಪಾತ್ರವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.