ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಿಟ್ ಲಿಸ್ಟ್'ನಲ್ಲಿ ಗಿರೀಶ್ ಕಾರ್ನಾಡ್ ಮೊದಲ ಟಾರ್ಗೆಟ್

ಗೌರಿ ಲಂಕೇಶ್ ಅಲ್ಲದೆ 33 ಮಂದಿಯ ಹತ್ಯೆಗೆ ಹಂತಕರು ಪಟ್ಟಿ ಸಿದ್ಧಮಾಡಿಕೊಂಡಿದ್ದರು ಎನ್ನಲಾಗಿದೆ.

Last Updated : Jul 25, 2018, 08:35 PM IST
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಿಟ್ ಲಿಸ್ಟ್'ನಲ್ಲಿ ಗಿರೀಶ್ ಕಾರ್ನಾಡ್ ಮೊದಲ ಟಾರ್ಗೆಟ್ title=

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಮೊದಲು ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಸುದ್ದಿಯೊಂದು ಬಹಿರಂಗವಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯಿಂದ ಪೊಲೀಸರು ವಶಪಡಿಸಿಕೊಂಡಿರುವ ಡೈರಿಯಲ್ಲಿ ಹಂತಕರ ಹಿಟ್ ಲಿಸ್ಟ್ ನಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಹೆಸರು ಮೊದಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಚಾರವಾದಿಗಳನ್ನು ಹತ್ಯೆ ಮಾಡಲು ದೊಡ್ಡ ಪಟ್ಟಿಯನ್ನೇ ತಯಾರಿಸಿದ್ದ ಹಂತಕರು, ಗಿರೀಶ್ ಕಾರ್ನಾಡ್ ಅವರನ್ನು ಮೊದಲು ಕೊಲ್ಲಲು ಸಾಕಷ್ಟು ಸಂಚು ರೂಪಿಸಿದ್ದರು. ಆದರೆ ಅದು ಸಾಧ್ಯವಾಗದೇ ಇದ್ದಾಗ ಪಟ್ಟಿಯ ಎರಡನೇ ಸ್ಥಾನದಲ್ಲಿದ್ದ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಗೌರಿ ಲಂಕೇಶ್ ಅಲ್ಲದೆ 33 ಮಂದಿಯ ಹತ್ಯೆಗೆ ಹಂತಕರು ಪಟ್ಟಿ ಸಿದ್ಧಮಾಡಿಕೊಂಡಿದ್ದರು ಎನ್ನಲಾಗಿದೆ. ಪೊಲೀಸರು ವಶಪಡಿಸಿಕೊಂಡಿರುವ ಡೈರಿಯಲ್ಲಿ ವಿಚಾರವಾದಿಗಳ ಹೆಸರನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದ್ದು, ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್, ಸಾಹಿತಿ ಹಾಗೂ ರಾಜಕಾರಣಿ ಬಿ.ಟಿ.ಲಲಿತಾ ನಾಯಕ್, ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಪ್ರಗತಿಪರ ಚಿಂತಕ ಸಿ.ಎಸ್.ದ್ವಾರಕನಾಥ್ ಅವರು ಹಿಟ್ ಲಿಸ್ಟ್ ನಲ್ಲಿದ್ದರು ಎಂದು ಎಸ್ಐಟಿ ಪೊಲೀಸರು ತಿಳಿಸಿದ್ದಾರೆ.

2017ರ ಸೆಪ್ಟೆಂಬರ್ 5 ರಂದು ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ (55) ಅವರ ಮೇಲೆ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ರಾಜರಾಜೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಮನೆಯ ಬಳಿಯೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ಗೆ ಆದೇಶಿಸಿತ್ತು. ಅದರಂತೆ ಕಳೆದ 9 ತಿಂಗಳಿನಿಂದ ತನಿಖೆ ನಡೆಸುತ್ತಿರುವ ಪೊಲೀಸರು 7ಕ್ಕೂ ಹೆಚ್ಚ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Trending News