ಬೆಂಗಳೂರು: ಮಾಧ್ಯಮಗಳು ಬೆಳಗ್ಗೆಯಿಂದ ಸಂಜೆವರೆಗೂ ಪ್ರಯಾಣಿಕರ ಪರದಾಟವನ್ನು ತೋರಿಸುತ್ತಿದ್ದರೂ ರಾಜ್ಯ ಸರ್ಕಾರ ಇತ್ತಕಡೆ ಮುಖ ಮಾಡಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ ಏನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಕಿಡಿ ಕಾರಿದ್ದಾರೆ.
ತಮ್ಮ ಊರುಗಳಿಗೆ ಹೋಗಲು ಸಾಧ್ಯವಾಗದೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರ ನಿವಾಸದಲ್ಲಿ ಸಮಾಲೋಚನೆ ನಡೆಸಿದ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಕೊರೋನಾ ಪರಿಹಾರ ನಿಧಿಯಿಂದ ಪ್ರಯಾಣಿಕರ ಉಚಿತ ಸಾರಿಗೆ ವ್ಯವಸ್ಥೆಗಾಗಿ 1 ಕೋಟಿ ರೂಪಾಯಿ ಚೆಕ್ ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಲು ತೀರ್ಮಾನಿಸಿದರು. ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರ ಜತೆಗೂಡಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೇ ಕಂಗಾಲಾಗಿದ್ದ ಪ್ರಯಾಣಿಕರಿಗೆ ಧೈರ್ಯ ತುಂಬಿದರು. ಅವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿದರು.
ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಕೆಪಿಸಿಸಿ.
ಕೆಪಿಸಿಸಿ ಅಧ್ಯಕ್ಷರಾದ @DKShivakumar
ಅವರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ತಮ್ಮ ಊರುಗಳಿಗೆ ತೆರಳಲು ಬಂದಿದ್ದ ಜನರ ಸಂಕಷ್ಟ ಆಲಿಸಿ,ತಾವೇ ಪ್ರಯಾಣದ ವೆಚ್ಚ ಭರಿಸುವುದಾಗಿ ನೀಡಿದ್ದ ವಾಗ್ದಾನದಂತೆಯೇ ₹ 1 ಕೋಟಿ ಚೆಕ್ ನೀಡಿದ ಕೆಪಿಸಿಸಿ.#ಕಾಂಗ್ರೆಸ್_ಸಹಾಯ_ಹಸ್ತ pic.twitter.com/qa6E1iJ4BG
— Karnataka Congress (@INCKarnataka) May 3, 2020
ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್, ನಾವು ನಿನ್ನೆ ಕೊಟ್ಟ ಮಾತಿನಂತೆ ಪ್ರಯಾಣಿಕರ ಉಚಿತ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗಲು ಕೆಪಿಸಿಸಿ ವತಿಯಿಂದ 1 ಕೋಟಿ ರೂಪಾಯಿ ಚೆಕ್ ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಗೆ ನೀಡುತ್ತಿದ್ದೇವೆ. ಚೆಕ್ ಕೊಡ್ತೀವಿ ಅಂದ್ರೂ ಅವರು ಅದನ್ನು ತೆಗೆದುಕೊಳ್ಳಲು ತಯಾರಿಲ್ಲ. ಆದರೂ ಅವರಿಗೆ ಈ ಚೆಕ್ ಕಳುಹಿಸಿ ಕೊಡುತ್ತೇವೆ ಎಂದರು.
Giving ₹1 crore cheque to KSRTC from the KPCC for ensuring Free Transport to our working class & labour people who are suffering to reach home because of the rates being charged by the Karnataka Govt.
Govt should let us know if they need more, the KPCC will fulfill that as well pic.twitter.com/rMIofvMLRY
— DK Shivakumar (@DKShivakumar) May 3, 2020
ಕಾಂಗ್ರೆಸ್ ಕಿವಿ ಹಿಂಡಿದ ನಂತರ ಇದೀಗ ರಾಜ್ಯ ಸರಕಾರ ಮೂರು ದಿನಗಳ ಕಾಲ ಉಚಿತ ಸಾರಿಗೆ ವ್ಯವಸ್ಥೆ ಮಾಡುವುದಾಗಿ ಪ್ರಕಟಿಸಿದೆ. ಇದನ್ನು ಕನಿಷ್ಟ ಆರು ದಿನಗಳಿಗೆ ವಿಸ್ತರಿಸಬೇಕು. ಕಾರ್ಮಿಕರು, ಶ್ರಮಿಕರು ಈ ನಾಡನ್ನು ಕಟ್ಟುತ್ತಿದ್ದಾರೆ. ನೀವು ಒಂದು ವಾರ ನಿಮ್ಮ ಕುಟುಂಬಸ್ಥರ ಜತೆ ಇದ್ದು, ನಂತರ ವಾಪಸ್ ಬಂದು ನಿಮ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಏನೇ ಕಷ್ಟ ಬಂದರೂ ನಾವು ನಿಮ್ಮನ್ನು ರಕ್ಷಿಸುತ್ತೇವೆ. ನಮ್ಮ ಪ್ರಾಣ ಕೊಟ್ಟಾದರೂ ಸರಿ ನಿಮ್ಮನ್ನು ಕಾಪಾಡುತ್ತೇವೆ ಎಂದರು.
ಈ ರಾಜ್ಯದಿಂದ ಲೋಕಸಭೆಗೆ 26 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದರೂ ಅವರು ಈ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಒಂದೇ ಒಂದು ಉಚಿತ ರೈಲು ವ್ಯವಸ್ಥೆ ಮಾಡದಿರುವುದು ನಾಚಿಕೆಗೇಡಿನ ವಿಚಾರ. ಈ 26 ಜನ ಬಿಜೆಪಿ ಎಂಪಿಗಳು ಆ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು. ಜನರ ಕಷ್ಟ ಆಲಿಸದ ಸರ್ಕಾರ, ಸಚಿವರು ಹಾಗೂ ಬಿಜೆಪಿ ಶಾಸಕರು ಮಲಗಿದ್ದಾರೆ ಎಂದರೆ ಅಪಾರ್ಥ ಮಾಡಿಕೊಂಡು ನಮ್ಮನ್ನೇ ಪ್ರಶ್ನಿಸುತ್ತಾರೆ ಎಂದರು.
ಕಾರ್ಮಿಕರು ಗಂಟು ಮೂಟೆ ಕಟ್ಟಿಕೊಂಡು ತಮ್ಮ ಊರಿಗೆ ಹೋಗಲು ಪರದಾಡುತ್ತಿರುವುದನ್ನು ನಮ್ಮ ಕೈಯಲ್ಲಿ ನೋಡಲು ಆಗಲಿಲ್ಲ. ಹೀಗಾಗಿ ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ನಾನು ನನ್ನ ಕೈಯಿಂದ ಈ ದುಡ್ಡು ಕೊಡುತ್ತಿಲ್ಲ. ನಮ್ಮ ಶಾಸಕರು, ಮಾಜಿ ಶಾಸಕರು, ನಾಯಕರು, ಕಾರ್ಯಕರ್ತರು ದೇಣಿಗೆ ನೀಡಿದ್ದಾರೆ. ಅದನ್ನು ನಾನು ನೀಡುತ್ತಿದ್ದೇನೆ. ಇವತ್ತು ಬೆಳಗ್ಗೆಯಿಂದ ಈ ಕ್ಷೇತ್ರದ ಶಾಸಕರಾದ ದಿನೇಶ್ ಗುಂಡುರಾಯರು ಹಾಗೂ ಇತರೆ ಸಂಘ ಸಂಸ್ಥೆಗಳು ಈ ಪ್ರಯಾಣಿಕರಿಗೆ ಆಹಾರ ಪ್ಯಾಕೆಟ್ ನೀಡಿ, ಅವರನ್ನು ಕಳುಹಿಸಿ ಕೊಡುತ್ತಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮುಖ್ಯಮಂತ್ರಿಗಳೇ ಈ ಸಮಸ್ಯೆಗಳನ್ನು ಬಗೆಹರಿಸಲು ವಿದ್ಯೆ, ಬುದ್ಧಿವಂತಿಕೆ ಇಲ್ಲದಿದ್ರೂ ಪ್ರಾಜ್ಞಾವಂತಿಕೆ ಇದ್ದರೂ ಸಾಕು. ಮುಂದಿನ ಮೂರು ದಿನಗಳಲ್ಲ ಒಂದು ವಾರ ಸಮಯ ನಿಗದಿ ಪಡಿಸಿ ತಮ್ಮ ಊರಿಗೆ ಹೋಗಲು ಬಯಸುವ ಕಾರ್ಮಿಕರನ್ನು ಕಳುಹಿಸಿಕೊಡಬೇಕು ಎಂದು ಒತ್ತಾಯ ಮಾಡುತ್ತೇನೆ. ಇದನ್ನು ವ್ಯವಸ್ಥಿತವಾಗಿ ಮಾಡಿ. ಒಂದು ವೇಳೆ ನಿಮಗೆ ಸಾಧ್ಯವಾಗದಿದ್ದರೆ ಹೇಳಿ, ನಾವೇ ನಮ್ಮ ಕಾರ್ಯಕರ್ತರನ್ನು ಬಳಸಿಕೊಂಡು, ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ನಾವೇ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದರು.