ಕಾವೇರಿ ತೀರ್ಪಿನ ಬಗ್ಗೆ ಮೌನ ಮುರಿದ ಎಚ್.ಡಿ. ದೇವೇಗೌಡ

ಎರಡು ರಾಷ್ಟ್ರೀಯ ಪಕ್ಷಗಳಿಗೆ ನೀರಾವರಿ ಹೆಚ್ಚಿಸೋ ಆಸಕ್ತಿ ಇಲ್ಲ- ಎಚ್.ಡಿ. ದೇವೇಗೌಡ

Last Updated : Feb 26, 2018, 04:11 PM IST
ಕಾವೇರಿ ತೀರ್ಪಿನ ಬಗ್ಗೆ ಮೌನ ಮುರಿದ ಎಚ್.ಡಿ. ದೇವೇಗೌಡ title=

ಬೆಂಗಳೂರು: ಕಾವೇರಿ ಅಂತಿಮ ತೀರ್ಪು ಬಂದಾಗ ನಾನು ತಕ್ಷಣ ಪ್ರತಿಕ್ರಿಯೆ ನೀಡಲ್ಲ ತೀರ್ಪನ್ನು ಪೂರ್ತಿ ಓದಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ  ಕಡೆಗೂ ಮೌನ ಮುರಿದಿದ್ದಾರೆ. ಕಾವೇರಿ ಅಂತಿಮ ತೀರ್ಪಿನ ಬಗ್ಗೆ ಮಾತನಾಡಿರುವ ಎಚ್.ಡಿ. ದೇವೇಗೌಡ ಕಾವೇರಿ ಅಂತಿಮ ತೀರ್ಪು ಬಂದಾಗ ವಿಧಾನಸಭಾ ಅಧಿವೇಶನ ನಡೆಯುತ್ತಿತ್ತು. ಪಕ್ಷ ಭೇದ ಮರೆತು ಎಲ್ಲರೂ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಸುಧೀರ್ಘ ಹೋರಾಟಕ್ಕೆ ಫಲ ಸಿಕ್ಕಿದೆ ಅನ್ನೋ ಭಾವನೆ ಎಲ್ಲರಲ್ಲಿದೆ. ವಾಸ್ತವ ಅರಿಯದೆ ಜನ ಸಹ ಖುಷಿ ಪಡುತ್ತಿದ್ದಾರೆ. 14 ಟಿಎಂಸಿ ನೀರು ಸಿಕ್ತು ಅಂತಾ ಖುಷಿಪಡೋದಲ್ಲ, ನಮಗೆ 40 ಟಿಎಂಸಿ ಸಿಗಬೇಕಿತ್ತು ಎಂದು ಎಚ್ಡಿಡಿ ತಿಳಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನೆ ಮಾಡಿದ್ವಿ
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನ್ಯಾಯಾಧಿಕರಣದ ತೀರ್ಪು ಪ್ರಶ್ನೆ ಮಾಡಿದ್ವಿ. ಹಿರಿಯ ವಕೀಲರನ್ನ ನಾನೇ ಭೇಟಿ ಮಾಡಿ ಅವರ ಬಳಿ ಚರ್ಚೆ ನಡೆಸಿದ್ದೆ. ಆಗ ಫಾಲಿ ಎಸ್ ನಾರಿಮನ್ ಕೋಪ ಮಾಡಿಕೊಂಡಿದ್ದರು. ಆದರೂ, ರಾಜ್ಯಕ್ಕೆ ಆಗಿರೋ ಅನ್ಯಾಯದ ಬಗ್ಗೆ ಸುಪ್ರೀಂಕೋರ್ಟಿನಲ್ಲಿ ಐತೀರ್ಪಿನ ವಿರುದ್ಧ ಪ್ರಶ್ನೆ ಮಾಡೋದಕ್ಕೆ ಒಪ್ಪಿಸಿದೆ. ಆ ಸಮಯದಲ್ಲಿ ಐತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಕಾಂಗ್ರೇಸ್ ನಾಯಕರು ಒಪ್ಪಿರಲಿಲ್ಲ. ನಂಜೇಗೌಡರು ಮಾತ್ರ ಸಹಕರಿಸಿದ್ದರು ಎಂದು ದೇವೇಗೌಡರು ತಿಳಿಸಿದರು.

ರಾಷ್ಟ್ರೀಯ ಪಕ್ಷಗಳ ನಿಲುವಿನ ವಿರುದ್ಧ ಗರಂ ಆದ ಗೌಡರು
ನನಗೆ ಅಧಿಕಾರದ ಆಸೆ ಇಲ್ಲ, ಜೊತೆಗೆ ವಯಸ್ಸು ಆಗಿದೆ. ಆದರೆ ನನ್ನ ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದ ದೇವೇಗೌಡರು, ತೀರ್ಪಿನ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೇವಲ ಆರು ವಾರ ಮಾತ್ರ ಕಾಲಾವಕಾಶವಿದೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ನಂಬಿ ಜನ ಸಂಕಷ್ಟದಲ್ಲಿದ್ದಾರೆ.  ಮೊನ್ನೆ ದೇಶದ ಪ್ರಧಾನಮಂತ್ರಿಗಳು ಜಯಲಲಿತಾ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ತಮಿಳುನಾಡಿನ ಎಲ್ಲಾ ಪಕ್ಷಗಳು ಸುಪ್ರೀಂಕೋರ್ಟ್ ತೀರ್ಪು ಪ್ರಶ್ನೆ ಮಾಡೋದಕ್ಕೆ ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರ ಜೊತೆ ಕಾವೇರಿ ನೀರು ನಿರ್ವಾಹಣ ಮಂಡಳಿ ರಚನೆಗೂ ಕೂಡ ತಮಿಳುನಾಡು ಒತ್ತಾಯಿಸುತ್ತಿದೆ. ಆದರೆ ನಮ್ಮ ರಾಜ್ಯದ ಕಡೆಯಿಂದ ಮಂಡಳಿ ರಚನೆಯಾದರೆ ಏನಾಗಬಹುದು ಎಂಬ ಸಾಧಕ ಬಾಧಕಗಳ ಬಗ್ಗೆ ತಿಳಿಸೋ ಕೆಲಸ ಮಾಡುತ್ತಿಲ್ಲ ಎಂದು ರಾಷ್ಟ್ರೀಯ ಪಕ್ಷಗಳ ನಿಲುವಿನ ವಿರುದ್ಧ ಗೌಡರು ಗರಂ ಆದರು.

ಅನಂತ್ ಕುಮಾರ್ ಅವರನ್ನೂ ಸಹಕರಿಸುವಂತೆ ಕೇಳಿದ್ದ ಗೌಡರು
ತೀರ್ಪಿನ ವಿರುದ್ಧ ಸಂಸತ್ತಿನಲ್ಲಿ ಹೋರಾಟ ಮಾಡೋಣ ಅದಕ್ಕಾಗಿ ನಿಮ್ಮ ಸಹಕಾರ ನೀಡಿ ಎಂದು ನಾನು ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನೂ ಕೂಡ ಕೇಳಿದ್ದೆ, ಅವರು ಪಕ್ಷದವರ ಜೊತೆ ಮಾತನಾಡಿ ನಾಳೆ ಹೇಳುತ್ತೇನೆ ಎಂದು ಹೇಳಿದ್ದರು.  ಆದರೆ ಆ ನಾಳೆ ಬರಲೇ ಇಲ್ಲ ಎಂದು ಎಚ್ಡಿಡಿ ಬೇಸರ ವ್ಯಕ್ತಪಡಿಸಿದರು. 

ನೀರು ನಿಂತಾಗ ಬೆಂಗಳೂರಿನ ಜನತೆಗೆ ಅರಿವಾಗುತ್ತೆ
ತೀರ್ಪಿನಲ್ಲಿ ನದಿ ತಿರುವು ಮಾಡುವಂತಿಲ್ಲ ಅಂತ ಹೇಳಿದೆ. ಹಾಗಿರುವಾಗ ನೀರು ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಗೌಡರು, ನೀರು ನಿಂತಾಗ ಬೆಂಗಳೂರಿನ ಜನತೆಗೆ ದೇವೇಗೌಡರ ಹೋರಾಟದ ಬಗ್ಗೆ ತಿಳಿಯುತ್ತೆ, ನಾನು ಮಾತಾಡಿದ್ರೆ ನಾನು ವಿರೋಧಿ ಅಂತಾರೆ ಎಂದು ತಿಳಿಸಿದರು. 

ಎರಡು ರಾಷ್ಟ್ರೀಯ ಪಕ್ಷಗಳಿಗೆ ನೀರಾವರಿ ಹೆಚ್ಚಿಸೋ ಆಸಕ್ತಿ ಇಲ್ಲ
ನ್ಯಾಯಾಧೀಕರಣದಲ್ಲಿ ಆಗಿದ್ದ ಅನ್ಯಾಯದ ಬಗ್ಗೆ ಮಾತನಾಡೋದಕ್ಕೆ ಹೋದ್ರೆ ಒಪ್ಪುತ್ತಿರಲಿಲ್ಲ. ಮೊದಲು ತಮಿಳುನಾಡು, ನಮ್ಮ ಬೆಳೆಗಳಿಗೆ ನೀರಿಲ್ಲ ನೀರು ಬಿಡಿಸಿ ಅಂತ ಕೇಳಿದ್ದರು. ಅದಕ್ಕೆ ನಾರಮನ್ ನಮಗೆ ಕುಡಿಯೋದಕ್ಕೆ ನೀರಿಲ್ಲ ನೀರು ಬಿಡಿ ಅಂದ್ರೆ ಹೇಗೆ ಅಂತ ಪ್ರಶ್ನೆ ಮಾಡಿದ್ದರು. 
ನಾನು ಜಡ್ಜ್ ಗಳ ಬಗ್ಗೆ ಮಾತನಾಡಲ್ಲ, ನಾನು ಮಾಜಿ ಪ್ರಧಾನಿಯಾಗಿ ಮಾತನಾಡುತ್ತಿದ್ದೇನೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನೀರಾವರಿ ಹೆಚ್ಚಿಸೋ ಆಸಕ್ತಿ ಇಲ್ಲ ಎಂದು ಎಚ್ಡಿಡಿ ದೂರಿದರು.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಆದರೆ ಅಪಾಯ ತಪ್ಪಿದ್ದಲ್ಲ
ಕನಾ೯ಟಕಕ್ಕೆ ಸಿಗಬೇಕಾಗಿರುವ ನೀರು ಸಿಕ್ಕಿಲ್ಲ. ಸಿದ್ದರಾಮಯ್ಯ ಅವರು ಅದೇ ಕಾವೇರಿ ಕಣಿವೆಯಿಂದ ಬಂದವರು.. ನವಕನಾ೯ಟಕ, ಹಸಿವು ಮುಕ್ತ ಕನಾ೯ಟಕ ಅನ್ನೋರು ಆ ಕಡೆ ಗಮನ ಹರಿಸಬೇಕು. ಕೇಂದ್ರ ಸರ್ಕಾರಕ್ಕೆ ಅಧಿಕಾರ ಕೊಟ್ಟಿದ್ದಾರೆ. ಒಂದುವೇಳೆ ಬೋರ್ಡ್ ರಚನೆಯಾದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಡಿಡಿ ಆತಂಕ ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡಿದ ಅವರು ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಸರ್ಕಾರದ ಸಿದ್ಧತೆ ಏನು ಎಂದು ಪ್ರಶ್ನಿಸಿದ ಅವರು, ಸದ್ಯದ ತೀರ್ಪಿನ ಬಗ್ಗೆ ಸಂಭ್ರಮಿಸಿದರೆ ಆಗದು, ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿರ್ವಹಣಾ ಮಂಡಳಿ ಆಗಬಾರದು
ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ಆಗಬಾರದು ಎಂದು ತಿಳಿಸಿದ ಗೌಡರು ಈ ಬಗ್ಗೆ  ಕೇಂದ್ರ ಸಚಿವ ಅನಂತಕುಮಾರ್ ಜೊತೆ ಮಾತಾಡಿದ್ರೂ ಉತ್ತರ ಬಂದಿಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವೇನು ಎಂಬುದೂ ತಿಳಿದಿಲ್ಲ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಬೇಕು. ನಿರ್ವಹಣಾ ಮಂಡಳಿ ರಚನೆ ಆಗೋದೇ ಆದ್ರೆ ರಾಜ್ಯಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾವೇರಿ ವಿಚಾರದ ವಾಸ್ತವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

Trending News