ಡಿಸಿಎಂ ಡಿಕೆಶಿ ಸವಾಲ್ ಸ್ವೀಕರಿಸಿದ ಹೆಚ್.ಡಿ. ಕುಮಾರಸ್ವಾಮಿ : ಚರ್ಚೆಗೆ ವಿಧಾನಸಭೆಯೇ ಅಖಾಡ..!

ಹೆಚ್ಚು ಟಿಆರ್‌ಪಿ ಇರುವ ಚಾನೆಲ್ ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನಗೆ ಬಹಿರಂಗ ಸವಾಲು ಹಾಕಿದ್ದಾರೆ. ಅದು ಹಾಗಿರಲಿ,  ವಿಧಾನಸಭೆಯಲ್ಲಿಯೇ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಡಿಕೆಶಿ ಸವಾಲ್‌ ಅನ್ನು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಸ್ವೀಕರಿಸಿದ್ದಾರೆ.

Written by - Krishna N K | Last Updated : Oct 26, 2023, 06:44 PM IST
  • ನೈಸ್ ನೋಟಿಫೈ ಆಗಿದ್ದ 8 ಎಕರೆ ಭೂಮಿ ಕಬಳಿಸಿದ ಡಿ.ಕೆ.ಬ್ರದರ್ಸ್; ಮಾಜಿ ಸಿಎಂ ಗಂಭೀರ ಆರೋಪ
  • ತಾವರೆಕೆರೆಯ ಒಂದೇ ಕಂಪೊಂಡಿನ 900 ಎಕರೆ ಭೂಮಿಯಲ್ಲಿ 350 ಎಕರೆ ಯಾರದು?
  • ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಯಾರಿಗೆ ದಕ್ಷಣಿ ಕೊಡುತ್ತೀರಿ ಎಂದು ಟಾಂಗ್
ಡಿಸಿಎಂ ಡಿಕೆಶಿ ಸವಾಲ್ ಸ್ವೀಕರಿಸಿದ ಹೆಚ್.ಡಿ. ಕುಮಾರಸ್ವಾಮಿ : ಚರ್ಚೆಗೆ ವಿಧಾನಸಭೆಯೇ ಅಖಾಡ..! title=

ಬೆಂಗಳೂರು: ಬಹಿರಂಗ ಚರ್ಚೆಗೆ ಬರುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಕಿರುವ ಸವಾಲನ್ನು ಸ್ವೀಕರಿಸಿದ್ದೇನೆ. ವಿಧಾನಸಭೆಯಲ್ಲಿಯೇ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು ಅವರು. ಹೆಚ್ಚು ಟಿಆರ್ ಪಿ ಇರುವ ಚಾನೆಲ್ ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನಗೆ ಬಹಿರಂಗ ಸವಾಲು ಹಾಕಿದ್ದಾರೆ. ಅದು ಹಾಗಿರಲಿ, ರಾಮನಗರ ಜಿಲ್ಲೆಯ ಅಭಿವೃದ್ಧಿಯನ್ನು ಯಾರು ಮಾಡಿದರು ಎಂಬ ವಿಷಯವೂ ಸೇರಿದಂತೆ; ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರು ಸುತ್ತ ಇರುವ ಭೂಮಿಗಳನ್ನು ಯಾರು ಕೊಳ್ಳೆ ಹೊಡೆಯಲು ಹೊರಟಿದ್ದಾರೆ ಎಂಬ ಬಗ್ಗೆಯೂ ಬಹಿರಂಗ ಚರ್ಚೆ ಸದನದಲ್ಲಿಯೇ ನಡೆಯಲಿ. ದಾಖಲೆ ಸಮೇತ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಘೋಷಿಸಿದರು ಮಾಜಿ ಮುಖ್ಯಮಂತ್ರಿಗಳು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕಾಲದಲ್ಲಿ ಸತೀಶ್ ಅವರಿಗೆ ಹಿಂಸೆ ಆಗುತ್ತಿದೆ: ರಮೇಶ್ ಜಾರಕಿಹೊಳಿ

ಕನಕಪುರ ಸೇರಿ ರಾಮನಗರ ಜಿಲ್ಲೆಯ ಭೂಮಿಯನ್ನು ಲೂಟಿ ಮಾಡಲು ಬೆಂಗಳೂರು ದಕ್ಷಿಣ ಜಿಲ್ಲೆ ಎನ್ನುತ್ತಿದ್ದಾರೆ. ಯಾರಿಗೆ ದಕ್ಷಣಿಯಾಗಿ ಕೊಡಲು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುತ್ತಿದ್ದಿರಿ? ಎಂದು ಅವರು ನೇರ ಪ್ರಶ್ನೆ ಕೇಳಿದ್ದಾರೆ.

ನೈಸ್ ಭೂಮಿ ಕಬಳಿಸಿದ ಡಿಕೆ ಬ್ರದರ್ಸ್: ನೈಸ್ ಜಮೀನನ್ನು ಅಕ್ರಮವಾಗಿ ಡಿ.ಕೆ.ಸುರೇಶ್ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಹೊಸಕೆರೆ‌ಹಳ್ಳಿ ಬಳಿ 8 ಎಕರೆ ನೈಸ್ ಗೆ ಅಂತ ನೋಟಿಫಿಕೇಶನ್ ಆಗಿತ್ತು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಇದನ್ನೂ ಓದಿ:"ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಡಿ.ಕೆ.ಶಿವಕುಮಾರ್ ನಡೆಸಿದ್ದಾರೆ "-ಎಚ್.ಡಿ.ಕುಮಾರಸ್ವಾಮಿ 

ಈ ಜಮೀನು ಡಿ.ಕೆ.ಸುರೇಶ್ ಖರೀದಿ ಮಾಡಿದ್ದಾರೆ. ಭಾಗ್ಯಲಕ್ಷಿ, ಅಮಾಸೆಗೌಡ ಎಂಬುವವರ ಹೆಸರಲ್ಲಿ ಈ ಭೂಮಿ ಇತ್ತು. ಇದನ್ನು ನೈಸ್ ಯೋಜನೆಗೆ ನೋಟಿಫೈ ಮಾಡಲಾಗಿತ್ತು. ಇದನ್ನು ಡಿ.ಕೆ.ಸುರೇಶ್ ಯಾವ ಆಧಾರದಲ್ಲಿ ಖರೀದಿ ಮಾಡುತ್ತಾರೆ ಎನ್ನುವುದು ನನ್ನ ಪ್ರಶ್ನೆ. ಅಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿ ಡಿ.ಕೆ.ಸುರೇಶ್ ಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ 8 ಎಕರೆ ಜಾಗವನ್ನು ಶೋಭಾ ಡೆವಲಪರ್ ಗೆ ಕೊಡಲಾಗಿದೆ. ಅಲ್ಲಿ ಈಗಾಗಲೇ ಅಪಾರ್ಟ್ ಮೆಂಟ್ ಬಂದಿದೆ. ಇದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾತ್ರವೂ ಇದೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಈ ಎಂಟು ಎಕರೆ ಕರ್ಮಕಾಂಡದ ಬಗ್ಗೆ ನನ್ನ ಬಳಿ ದಾಖಲೆ ಇದೆ. ಈ ಬಗ್ಗೆಯೂ ಬಹಿರಂಗವಾಗಿ ಚರ್ಚೆ ಮಾಡೋಣ. ಅಧಿವೇಶನ ಕರೆಯಲಿ. ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಅವರು ಸವಾಲು ಹಾಕಿದರು. 

ತಾವರೆಕೆರೆ ಬಳಿ ಒಂದೇ ಕಂಪೊಂಡಿನಲ್ಲಿ 900 ಎಕರೆಯಷ್ಟು ಭೂಮಿ ಇದೆ. ಅದರಲ್ಲಿ 350 ಎಕರೆ ಯಾರದ್ದು? ಆ ಭೂಮಿಗೆ ಅಪ್ಪ ಅಮ್ಮ ಯಾರು? ಅಂತಹ ಪಾಪದ ಭೂಮಿಗಳ ಬೆಲೆ ಹೆಚ್ಚಿಸಿಕೊಂಡು ದುಡ್ಡು ಮಾಡುವುದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ರಚನೆ ಮಾಡಬೇಕಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ಕರ್ನಾಟಕದವರು ಬೆಂಗಳೂರಿನಲ್ಲಿ ಇದ್ದಾರೆ. ಬೆಂಗಳೂರು ನಗರವು ಕರ್ನಾಟಕದ ಒಂದು ಭಾಗ. ನಮ್ಮ ಬ್ರ್ಯಾಂಡ್ ಬೆಂಗಳೂರು ಎನ್ನುವರಿಗೆ ಈ ನಗರವೇನು ಪಿತ್ರಾರ್ಜಿತ ಆಸ್ತಿಯೇ? ನಮ್ಮನ್ನು ವಲಸಿಗರು ಎನ್ನುವ ಇವರಿಗೆ ಅದು ಅರ್ಥ ಆಗಬೇಕು. ಡಿಕೆಶಿ ಬೆಂಗಳೂರಿನವರು ಅಲ್ಲ. ಅವರ ಮೂಲ ಬೆಂಗಳೂರು ಅಲ್ಲವೇ ಅಲ್ಲ ಎಂದು ಅವರು ಕಿಡಿಕಾರಿದರು.

ನನ್ನ ಬಳಿಯೂ ಸಾಕಷ್ಟು ಸರಕಿದೆ, ಉತ್ತರಿಸುತ್ತೇನೆ: ವಿಜಯದಶಮಿ ಆಸುಪಾಸಿನಲ್ಲಿ ಸಿಎಂ ಮತ್ತೆ ಡಿಸಿಎಂ ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ದಾಖಲೆ ಸಮೇತ ಮಾತಾಡಲು ಬಂದಿದ್ದೇನೆ. ಟಿಆರ್ ಪಿ ಹೆಚ್ಚು ಇರುವ ಚಾನಲ್ ನಲ್ಲಿ ನಾನು ಚರ್ಚೆಗೆ ಸಿದ್ದ ಅಂದಿದ್ದಾರೆ ಡಿಸಿಎಂ. ಟಿಆರ್ ಪಿ ಇರುವ ಚಾನೆಲ್ ಇರಲಿ, ವಿಧಾನಸಭೆಯಲ್ಲಿಯೇ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅವರು ಚರ್ಚೆಗೆ ಬರಲಿ. ನಾನು ಕೂಡ ಸವಾಲನ್ನು ಸ್ವೀಕಾರ ಮಾಡ್ತೀನಿ. ನನ್ನ ಬಳಿಯೂ ಸಾಕಷ್ಟು ಸರಕು ಇದೆ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದರು.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯಗೆ ನಯವಾಗಿ ಟಾಂಗ್ ಕೊಟ್ಟ ರಮೇಶ್ ಜಾರಕಿಹೊಳಿ

ನಾನು ಬಿಡದಿಯಲ್ಲಿ ಖರೀದಿ‌ ಮಾಡಿರುವ 44 ಎಕರೆ ಜಾಗ ರಾಜಕೀಯಕ್ಕೆ ಬರುವ ಮುನ್ನ ತೆಗೆದುಕೊಂಡಿದ್ದು. ಸಿನಿಮಾದಿಂದ ಬಂದ ಹಣದಲ್ಲಿ 4 ಸಾವಿರದಿಂದ 12 ಸಾವಿರ ಹಣ ಕೊಟ್ಟು ಖರೀದಿ ಮಾಡಿದ್ದ ಭೂಮಿ ಅದು. ಮಾಲ್ ಆರಂಭ ಮಾಡಿ ಬಿಸಿನೆಸ್ ಪ್ಯಾಶನ್ ಅಂತ ನಾನು ಹಣ‌ ಸಂಪಾದನೆ ಮಾಡಿಲ್ಲ ಎಂದು ಅವರು ಹೇಳಿದರು.

1,400 ಕೋಟಿ ರೂ. ಹೇಗೆ ಸಂಪಾದನೆ ಮಾಡಿದಿರಿ? : ಡಿ.ಕೆ.ಶಿವಕುಮಾರ್ ಅವರೇ 1,400 ಕೋಟಿ ರೂಪಾಯಿ ಹೇಗೆ ಸಂಪಾದನೆ ಮಾಡಿದಿರಿ ಎಂದು ಹೇಳಿ. ನನಗೆ ನೀವು ಹೇಳುವುದು ಬೇಡ, ಕನಕಪುರದ ಜನತೆಗಾದರೂ ಹೇಳಿ,  1,400 ಕೋಟಿ ರೂಪಾಯಿ ‌ಖರೀದಿ ಹೇಗೆ ಮಾಡಿದ್ದು ಅಂತ ತಿಳಿಸಿ. ನಿಮ್ಮ ಮತದಾರರಿಗಾದರೂ ಸತ್ಯ ಹೇಳಿ.

ದೊಡ್ಡ ಆಲದಹಳ್ಳಿಯಲ್ಲಿ ಹೇಗೆ ಆಸ್ತಿ ಸಂಪಾದನೆ ಮಾಡಿದ್ದೀರಾ ಎಂಬುದು ನನಗೆ ಗೊತ್ತಿದೆ. 8 ಬಾರಿ ಶಾಸಕರಾಗಿ 1,400 ಕೋಟಿ ರೂಪಾಯಿ ಹೇಗೆ ಸಂಪಾದನೆ ‌ಮಾಡಿದಿರಿ ಎಂಬುದನ್ನು ದಯಮಾಡಿ ಹೇಳಿ. ಕೇಳಿ ತಿಳಿದುಕೊಳ್ಳುವ ಹಂಬಲ ನನ್ನದು ಎಂದು ಡಿಕೆಶಿ ಅವರಿಗೆ ಟಾಂಗ್ ಕೊಟ್ಟರು ಮಾಜಿ ಮುಖ್ಯಮಂತ್ರಿಗಳು.

ಸಮಯ, ಸ್ಥಳ, ದಿನಾಂಕ ನಿಗದಿ ಮಾಡಿ: ಕನಕಪುರ ಯಾರಿಂದ ಹೇಗೆ ಅಭಿವೃದ್ಧಿ ಹೊಂದಿದೆ ಎಂಬ ಚರ್ಚೆಗೂ ನಾನು ಸಿದ್ಧನಿದ್ದೇನೆ. ಅವರ ಯಾವುದೇ ಸವಾಲಿಗೂ ನಾನು ರೆಡಿ. ವಿಧಾನಸೌಧದಲ್ಲಿ ಚರ್ಚೆ ಮಾಡೋಕೆ‌ ನಾನು ಸಿದ್ದ. ಸಮಯ, ಸ್ಥಳ‌‌ ಎಲ್ಲಾ ಡಿ.ಕೆ.ಶಿವಕುಮಾರ್ ಫಿಕ್ಸ್ ಮಾಡಲಿ, ನಾನು ಚರ್ಚೆಗೆ ಬರುತ್ತೇನೆ. 

ನಾವು ಅವರಂತೆ ತಲೆ ಒಡೆಯುವ ಕೆಲಸ ಮಾಡಿಲ್ಲ. ಬೇರೆ ಜಮೀನಿಗೆ ಫೆನ್ಸಿಂಗ್ ಹಾಕಿಲ್ಲ. ಅದೆಲ್ಲ ಹೆಂಗೆ ಅಂತ ಡಿ.ಕೆ ಶಿವಕುಮಾರ್ ಅಣ್ಣನ್ನೇ ಕೇಳಿ ಎಂದು ಕಾಲೆಳೆದ ಅವರು; ಶಾಂತಿನಗರ ಹೌಸಿಂಗ್ ಸೊಸೈಟಿ ಅಸಲಿ ನಕಲಿ ಮಾಡಿದ್ದು ಯಾರು?‌ ಡಿಕೆಶಿ ಯಾರನ್ನು ಬೇಕಾದರೂ  ಕೊಂಡುಕೊಳ್ತಾರೆ ಎಂದರು ಅವರು.

ಬ್ರ್ಯಾಂಡ್ ಬೆಂಗಳೂರು ಎನ್ನುತ್ತಾರೆ. ಕೆರೆ-ಕಟ್ಟೆ ನುಂಗಿ ಹಾಕಿದ್ದಾರೆ. ಯಾವ ಯಾವ ಕೆರೆ ನುಂಗಿದ್ದೀರಾ ಎನ್ನುವ ಬಗ್ಗೆ ಪಟ್ಟಿ ಬೇಕಾ? ಯಾವ ಮುಖ ಇಟ್ಟುಕೊಂಡು ಕೆಂಪೇಗೌಡರ ಹೆಸರು ಹೇಳ್ತೀರಾ. ಈಗ ಕನಕಪುರ, ರಾಮನಗರ ಕೆರೆಗಳನ್ನು ಮುಗಿಸಲು ಹೊರಟಿದ್ದೀರಾ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಜಗದೀಶ್ ಶೆಟ್ಟರ್ ಭೇಟಿ ವಿಚಾರಕ್ಕೆ ರಮೇಶ್ ಜಾರಕಿಹೊಳಿ ಹೇಳಿದ್ದೇನು?

ರಾಮನಗರ ಹೆಸರು ಬದಲಿಸಿದರೆ ಆಮರಣಾಂತ ಉಪವಾಸ : ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೂರುತ್ತೇನೆ. ನನ್ನ ಆರೋಗ್ಯ ಚೆನ್ನಾಗಿಲ್ಲ. ನನ್ನ ಜೀವ ಹೋದರೂ ಪರವಾಗಿಲ್ಲ, ಜಿಲ್ಲೆಯ ಹೆಸರು ಬದಲಾವಣೆಗೆ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ನಾನು ಹುಟ್ಟಿದ್ದು ಹಾಸನ ಜಿಲ್ಲೆ ಇರಬಹುದು. ಆದರೆ ನನ್ನ ಜೀವನ ಅಂತ್ಯ ಆಗುವುದು ರಾಮನಗರದಲ್ಲೇ.‌ ನನ್ನ ಹೋರಾಟಕ್ಕೆ ರಾಮನಗರದ ಜನರ ಸಹಕಾರ ಕೇಳ್ತೀನಿ. ಈ ಹೋರಾಟದಲ್ಲಿ ಅವರು ಭಾಗಿ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ಮನವಿ ಮಾಡಿದರು.

ನಾನು ರಾಮನಗರ ಜಿಲ್ಲೆ ಮಾಡಿದಾಗ ಇವರು ವಿರೋಧ‌ ಮಾಡಿರಲಿಲ್ಲ. 17 ವರ್ಷದಿಂದ ವಿರೋಧ ಮಾಡಿರಲಿಲ್ಲ. ಯಾಕೆ ವಿರೋಧ ಮಾಡಿರಲಿಲ್ಲ? ಇದ್ದಕಿದ್ದ ಹಾಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಲ್ಲಿಂದ ಹುಟ್ಟಿ ಬಂತು? ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ ಎಂದು ಎಂದು ಅವರು ತಿಳಿಸಿದರು.

ರಾಜೀವ್ ಗಾಂಧಿ ವಿವಿ ರಾಮನಗರಕ್ಕೆ ಹೋಗಿದ್ದಕ್ಕೆ ಇವರು ಬಹಳ ವಿರೋಧ ಮಾಡಿದರು. ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಬೇಕು ಎಂದರು. ಮೊದಲು ಕೊಡಲಾಗಿದ್ದ ಮೆಡಿಕಲ್ ಕಾಲೇಜ್ ಚಿಕ್ಕಬಳ್ಳಾಪುರಕ್ಕೆ ಹೋಯಿತು. ಮತ್ತೆ 450 ಕೋಟಿ‌ ರೂಪಾಯಿ ಹಣ ಇಟ್ಟು ಹೊಸ ಮೆಡಿಕಲ್ ಕಾಲೇಜ್ ಗೆ 100 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೆ ಎಂದ ಅವರು, ನಾನು ‌ಫ್ರೀ ಇದ್ದೀನಿ. ಡಿ.ಕೆ.ಶಿವಕುಮಾರ್ ಯಾವಾಗ ಬೇಕಾದರೂ ಸಮಯ ನಿಗದಿ ಮಾಡಲಿ. ಅವರು ಹೇಳಿದ ಸಮಯಕ್ಕೆ ಚರ್ಚೆಗೆ ನಾನು ಸಿದ್ದ ಎಂದು ಅವರು ಸವಾಲು ಹಾಕಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News