ಬೆಂಗಳೂರು : ಚುನಾವಣೆ ನಡೆಸುವುದು ಹೇಗೆ ಎನ್ನುವುದು ನನಗೂ ಗೊತ್ತಿದೆ ಮಿಸ್ಟರ್ ಡಿ.ಕೆ.ಶಿವಕುಮಾರ್. 2002ರ ಚುನಾವಣೆಯನ್ನು ನಿಮಗೆ ನೆನಪು ಮಾಡಿಕೊಡುತ್ತೇನೆ. ಮೈಸೂರು, ಶಿಡ್ಲಘಟ್ಟ, ದೇವನಹಳ್ಳಿ ಕಡೆಯಿಂದ ನೀವು ಜನರನ್ನು ಕರೆದುಕೊಂಡು ಬಂದು ಕಳ್ಳ ವೋಟು ಹಾಕಿಸಿದ್ದು ಮರೆತಿದ್ದೀರಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಂಗಳವಾರ ತುರ್ತು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ, ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯದ್ದ ಮಾಜಿ ಸಿಎಂ, ಕಳ್ಳ ಮತ ಹಾಕಿಸಲು ಕರೆದುಕೊಂಡು ಬಂದಾಗ ರಾಜರಾಜೇಶ್ವರಿ ನಗರದ ಹೆಬ್ಬಾಗಿಲಲ್ಲಿ ನಾನು ನಿಮ್ಮವರನ್ನು ಚಡ್ಡಿಯಲ್ಲಿ ಕೂರಿಸಿದ್ದನ್ನು ಮರೆಯಬೇಡಿ. ನನಗೆ ಚುನಾವಣೆ ಮಾಡುವುದು ಬರುವುದಿಲ್ಲ ಎಂದುಕೊಳ್ಳಬೇಡಿ. ಫೀಲ್ಡಿಗೆ ಇಳಿದರೆ ನಿಮಗಿಂತ ಚೆನ್ನಾಗಿ ಚುನಾವಣೆ ಮಾಡಬಲ್ಲೆ. ಆಗ ನೀವು ಅಧಿಕಾರದಲ್ಲಿ ಇದ್ದಿರಿ. ದೇವೇಗೌಡರನ್ನು ಸೋಲಿಸಲು ಪ್ತಯತ್ನ ಮಾಡಿದಿರಿ. ಆಸ್ಪತ್ರೆಯಿಂದ ನಾನು ವಾಪಸ್ ಬರ್ತಿನಿ, ಅದುವರೆಗೂ ನಿಮ್ಮ ಆಟ ನಡೆಯಲಿ ನೋಡೋಣ ಎಂದ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೇರವಾಗಿಯೇ ಟಾಂಗ್ ಕೊಟ್ಟರು.
ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿಯಿಂದ ಕ್ಷೇತ್ರದಲ್ಲಿ ಕುಕ್ಕರ್, ಹಣ ಹಂಚಿಕೆ : ದಾಖಲೆ ಬಿಡುಗಡೆ ಮಾಡಿದ ಹೆಚ್‌ಡಿಕೆ
ನಿಮಗೆ ನಾಚಿಕೆ ಆಗಬೇಕು. ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ದಿನವೂ ಹೇಳಿದ್ದೇ ಹೇಳಿದ್ದು. ಮಿಸ್ಟರ್ ಸಿದ್ದರಾಮಯ್ಯ.. ನಿಮ್ಮ ಎರಡು ಸಾವಿರ ರೂಪಾಯಿ ಸಾಮಾನ್ಯ ಜನರ ಜೀವ ಉಳಿಸುತ್ತಿದೆ ಎಂದಾದರೆ ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಕ್ಕರ್ʼಗಳನ್ನು ಯಾಕೆ ಹಂಚಿಕೆ ಮಾಡುತ್ತಿದ್ದೀರಿ? ನಿಮ್ಮ ಪಕ್ಷಕ್ಕೆ, ನಿಮಗೆ ನಾಚಿಕೆ ಎನ್ನುವುದು ಏನಾದರೂ ಇದೆಯಾ? ಎಂದು ಮಾಜಿ ಮುಖ್ಯಮಂತ್ರಿಗಳು ತೀವ್ರ ಪ್ರಹಾರ ನಡೆಸಿದರು.
ಒಣ ಅನುಕಂಪ ತೋರಿದ ಡಿಕೆಶಿಗೆ ತಿರುಗೇಟು : ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ಸೋಮವಾರ ನಮ್ಮ ಪಕ್ಷದ ಕೋರ್ ಕಮಿಟಿ ಸದಸ್ಯರು ವ್ಯಕ್ತಪಡಿಸಿದ ಭಾವನೆಗಳನ್ನಷ್ಟೇ ನಾನು ಹೇಳಿದ್ದೇನೆ. ನಮ್ಮ ಪಕ್ಷದಿಂದ 28 ಲೋಕಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಹೋಗಬೇಕು ಎಂದು ಹೇಳಿದ್ದೆವು. ಆ ಸಭೆಯಲ್ಲಿ ಪ್ರಮುಖವಾಗಿ ಏನೇನು ಚರ್ಚೆ ಆಗಿತ್ತು ಎಂಬುದನ್ನು ಮಾಧ್ಯಮಗಳ ಮೂಲಕ ಹೇಳಿದ್ದೇನೆ. ಅಂದ ಮಾತ್ರಕ್ಕೆ ನಮಗೆ ಬಿಜೆಪಿ ಮೇಲೆ ವಿಶ್ವಾಸ ಹೋಗಿದೆ ಅಂತ ಅಲ್ಲ. ಆರಂಭದಿಂದಲೂ ನಾವು 3 ಕ್ಷೇತ್ರಗಳನ್ನು ಕೇಳಿದ್ದೇವೆ. ಅದನ್ನು ಹೊರತುಪಡಿಸಿದರೆ ಬಿಜೆಪಿಯವರು ನಮ್ಮನ್ನು ಗೌರವಯುತವಾಗಿ ಕಂಡಿದ್ದಾರೆ. ಇದನ್ನೇ ಕಾಂಗ್ರೆಸ್‌ಪಕ್ಷದ ಸೋಕಾಲ್ಡ್ ಟ್ರಬಲ್ ಶೂಟರ್, ಹಿಂದೆ ನಮ್ಮ ಮೈತ್ರಿ ಸರಕಾರವನ್ನು ತೆಗೆದಿದ್ದವರು ನಮ್ಮ ಕಾರ್ಯಕರ್ತರ ಬಗ್ಗೆ ಅನುಕಂಪದ ಮಾತನ್ನಾಡಿದ್ದಾರೆ. ಯಾವನಿಗೆ ಬೇಕು ಇವರ ಅನುಕಂಪ? ನಮ್ಮ ಕಾರ್ಯಕರ್ತರಿಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದು ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ- ಪಿಎಂ ಮೋದಿಗೆ ಸಿಎಂ ಸಿದ್ದು ವ್ಯಂಗ್ಯ
ಜೆಡಿಎಸ್-ಬಿಜೆಪಿ ಮೈತ್ರಿಗೆ ನೀವೇ ಕಾರಣ : ಮಿಸ್ಟರ್ ಡಿ.ಕೆ.ಶಿವಕುಮಾರ್, ಇವತ್ತು ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ನೀವು. ನಿಮ್ಮಿಂದಲೇ ಈ ಮೈತ್ರಿ ಆಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಹೊಂದಾಣಿಕೆ ಮಾಡಿಕೊಳ್ಳೊದಕ್ಕೆ ಮೂಲ ಕಾರಣವೂ ನೀವೇ. ಹಿಂದೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಆದಾಗ ಈ ಸರಕಾರ ಐದು ವರ್ಷ ಇರಬೇಕು ಎಂದು ಹೇಳಿದ್ದಿರಿ. ಆದರೆ ಪಕ್ಕದಲ್ಲೇ ಕೂತು ಬಿಲ ಕೊರೆದಿರಿ. ಅಧಿಕಾರವನ್ನೂ, ಆ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಪಕ್ಷವನ್ನೇ ರಾಮನಗರದಲ್ಲಿ ಮುಗಿಸಲು ಷಡ್ಯಂತ್ರ ರೂಪಿಸಿದಿರಿ. ಆಗ ಮಂಡ್ಯದಲ್ಲಿ ದೋಖಾ ಮಾಡಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲುವಂತೆ ಮಾಡಿದಿರಿ. ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಮ ಸಹೋದರನಿಗೆ ನಮ್ಮ ಕಾರ್ಯಕರ್ತರು ಇದನ್ನೇ ಮಾಡಿದ್ದಿದ್ದರೆ ಆತನೂ ಮನೆಯಲ್ಲಿ ಕೂರಬೇಕಿತ್ತು. ಮೈತ್ರಿಗೆ ನಾವು ಮೋಸ ಮಾಡಲಿಲ್ಲ. ಬಿಜೆಪಿ ಜತೆ 20 ತಿಂಗಳು ಸರಕಾರ ಮಾಡಿದ್ದರಿಂದ ನಾನು ಪಕ್ಷವನ್ನು ಉಳಿಸಿಕೊಂಡಿದ್ದೇನೆ. ಆದರೆ ನಿಮ್ಮ ಜತೆ 14 ತಿಂಗಳ ಮೈತ್ರಿಯಲ್ಲಿ ನಾವು ಸಾಕಷ್ಟು ಕಳೆದುಕೊಂಡಿದ್ದೇನೆ. ರಾಜಕೀಯವಾಗಿ ನೀವು ವಿಷ ಹಾಕಿ ನಮ್ಮನ್ನು ಕೊಂದಿದ್ದೀರಾ. ಹಂತ ಹಂತವಾಗಿ ನಮ್ಮನ್ನು ಕುಗ್ಗಿಸಿದ್ದೀರಾ. 14 ತಿಂಗಳು ನಿಮ್ಮ ಜತೆ ಸರಕಾರ ಮಾಡಿದ್ದು ನಾನು ತೆಗೆದುಕೊಂಡ ಅತ್ಯಂತ ಕೆಟ್ಟ ನಿರ್ಧಾರ. ದೇವೇಗೌಡರ 60 ವರ್ಷಗಳ ಸುಧೀರ್ಘ ರಾಜಕಾರಣಕ್ಕೆ ಕೊಳ್ಳಿ ಇಟ್ಟಿದ್ದೀರಾ. ನನ್ನ ಜತೆ ಇದ್ದವರನ್ನು ಖರೀದಿ ಮಾಡುತ್ತಿದ್ದೀರಾ ಎಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್‌ವಿರುದ್ಧ ಕಿಡಿಕಾರಿದರು.
ಬಿಜೆಪಿಯಲ್ಲಿ ನನಗೆ ಗೌರವ ಕೊಟ್ಟಿದ್ದಾರೆ. ಅವರು ನಿಮ್ಮ ಹಾಗೆ ನನ್ನ ಕುತ್ತಿಗೆ ಕೋಯ್ದಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ತೋಳ್ಬಲ, ಧನಬಲ, ಅಧಿಕಾರ ಬಲದಿಂದ ಮೆರೆಯಿತ್ತಿದ್ದೀರಿ. ನನ್ನ ಪಕ್ಷದ ಶಾಸಕರನ್ನು ಸೆಳೆಯೋದಕ್ಕೆ ನೀವು ಏನೆಲ್ಲ ಮಾಡಿದ್ದಿರಿ ಎನ್ನುವುದು ಗೊತ್ತಿದೆ ನನಗೆ. ಇವತ್ತಿಗೂ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದೀರಿ. ನೀವು ನಮ್ಮನ್ನು ಮುಗಿಸಲು ಹಂತ ಹಂತವಾಗಿ ಏನೆಲ್ಲಾ ಮಾಡುತ್ತಿದ್ದೀರಾ ಎನ್ನುವ ಮಾಹಿತಿ ನನಗೆ ಇದೆ. ಜನರೇ ನಿಮಗೆ ತಕ್ಕ ಶಾಸ್ತಿ ಮಾಡುವ ದಿನಗಳು ಹತ್ತಿರಕ್ಕೆ ಬಂದಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚುನಾವಣಾ ಕರಪತ್ರ, ಪೋಸ್ಟರ್ ಮುದ್ರಣ ಮೇಲೆ ನಿರ್ಬಂಧ..! ನಿಬಂಧನೆಗಳನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ
ಮಂಡ್ಯ ಕ್ಷೇತ್ರದಲ್ಲಿ ಕೂಡ ಒಂದು ಕೋಟಿ ರೂಪಾಯಿ ಸೀಜ್ ಆಗಿದೆ. ಈ ಹಣ ಅಡಿಕೆ ವ್ಯಾಪಾರದ್ದು ಎಂದು ಹೇಳಿಕೊಂಡಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಅಷ್ಟು ಹಣ ದುಡಿಯುವ ಅಡಿಕೆ ವ್ಯಾಪಾರಿಗಳಿದ್ದಾರಾ? ಎಂದು ನನಗೆ ಅಚ್ಚರಿ ಉಂಟಾಯಿತು. ಇದು ಕೂಡ ಕಾಂಗ್ರೆಸ್‌ಅಭ್ಯರ್ಥಿ ಹಣವೇ ಆಗಿದೆ. ಅಲ್ಲಿಯೂ ಕಾಂಗ್ರೆಸ್‌ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್‌ಕುಮಾರಸ್ವಾಮಿ, ಹಿರಿಯ ಮುಖಂಡರಾದ ಗೊಟ್ಟಿಗೆರೆ ಮಂಜುನಾಥ್, ಎ.ಪಿ.ರಂಗನಾಥ್‌ಸೇರಿದಂತೆ ಪಕ್ಷದ ಹಲವಾರು ನಾಯಕರು ಹಾಜರಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.