ಮಳೆಯಿಂದಾಗಿ ಹೇರೂರು ಗ್ರಾಮ ವಾಸ್ತವ್ಯ ಮುಂದೂಡಿಕೆ: ಜುಲೈನಲ್ಲಿ ಕಾರ್ಯಕ್ರಮ ನಿಗದಿ

ನಿನ್ನೆ ಮಧ್ಯರಾತ್ರಿಯವರೆಗೂ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಿ ಅಂತಿಮವಾಗಿ ಮುಂದೂಡುವ ನಿರ್ಣಯ ಕೈಗೊಳ್ಳಬೇಕಾಯಿತು, ಇದು ಒಂದೆಡೆ ತೀವ್ರ ನಿರಾಶೆ ಉಂಟು ಮಾಡಿದೆ- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

Last Updated : Jun 22, 2019, 09:10 AM IST
ಮಳೆಯಿಂದಾಗಿ ಹೇರೂರು ಗ್ರಾಮ ವಾಸ್ತವ್ಯ ಮುಂದೂಡಿಕೆ: ಜುಲೈನಲ್ಲಿ ಕಾರ್ಯಕ್ರಮ ನಿಗದಿ title=

ಯಾದಗಿರಿ: ನಿನ್ನೆ ಜೂನ್ 21 ರ ಸಂಜೆ ಮತ್ತು ರಾತ್ರಿ ಸುರಿದ ಮಳೆಯಿಂದಾಗಿ ಕಲಬುರ್ಗಿ ತಾಲೂಕಿನ ಹೇರೂರು ( ಬಿ) ಗ್ರಾಮದಲ್ಲಿ ಇಂದು ಜೂನ್ 22 ರಂದು ನಡೆಯಬೇಕಿದ್ದ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿದೆ. 

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಹಾಗೂ ಅಲ್ಲಿನ ಜಿಲ್ಲಾಧಿಕಾರಿ ವೆಂಕಟೇಶ ಅವರೊಂದಿಗೆ ನಿನ್ನೆ ಮಧ್ಯರಾತ್ರಿಯವರೆಗೂ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಿ ಅಂತಿಮವಾಗಿ ಮುಂದೂಡುವ ನಿರ್ಣಯ ಕೈಗೊಳ್ಳಬೇಕಾಯಿತು, ಇದು ಒಂದೆಡೆ ತೀವ್ರ ನಿರಾಶೆ ಉಂಟು ಮಾಡಿದೆ. ಆದರೆ ಇದೇ ಸಂದರ್ಭದಲ್ಲಿ ಮಳೆಯಾಗಿರುವದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂಬ ಸಮಾಧಾನವಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುಮಠಕಲ್ ತಾಲೂಕಿನ ಚಂಡ್ರಿಕಿಯಲ್ಲಿಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಜುಲೈ ತಿಂಗಳಲ್ಲಿ ವಿಧಾನಮಂಡಲದ ಅಧಿವೇಶನದ ದಿನಾಂಕಗಳನ್ನು ನೋಡಿಕೊಂಡು ಗ್ರಾಮವಾಸ್ತವ್ಯ ಹಾಗೂ ಜನತಾದರ್ಶನ ಕಾರ್ಯಕ್ರಮದ ದಿನಾಂಕ ಪ್ರಕಟಿಸಲಾಗುವುದು. ಯಾದಗಿರಿ ಜಿಲ್ಲೆಯ ಚಂಡ್ರಕಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ ಎಂದರು.
 

Trending News