ವಿಜಯಪುರ: ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು 5 ಕೆಜಿಗೆ ಇಳಿಸಿ ಬಡವರ ಅನ್ನ ಕಸಿದಿದೆ. 2023ರಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬಂದಮೇಲೆ ಬಡವರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂಧಗಿ(Sindagi ByElection)ಯಲ್ಲಿ ಇಂದು ಆಯೋಜಿಸಿದ್ದ ಬಂಜಾರ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಪರ ಮತಯಾಚಿಸಿದ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಬಂಜಾರ ಸಮುದಾಯವರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತವರು. ಆದರೆ ಇತ್ತೀಚೆಗೆ ಬಿಜೆಪಿಯವರು ಈ ಸಮಾಜದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ನೀಡುವ ಆಶ್ವಾಸನೆಗಳನ್ನು ನಂಬಬೇಡಿ’ ಅಂತಾ ಸಲಹೆ ನೀಡಿದರು.
‘ದೇವರಾಜ ಅರಸು(Devaraj Urs) ಸರ್ಕಾರದಲ್ಲಿ ಕೆ.ಪಿ.ರಾಥೋಡ್ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಬಂಜಾರ ಸಮುದಾಯ ಮೀಸಲಾತಿ ಪಟ್ಟಿಯಲ್ಲಿ ಸಾಮಾನ್ಯ ವರ್ಗದಲ್ಲಿತ್ತು. ಇವರನ್ನು ಹಿಂದುಳಿದ ಜಾತಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅರಸು ಮತ್ತು ರಾಥೋಡ್ ಶಿಫಾರಸು ಮಾಡಿದರು. SC ಮೀಸಲಾತಿ ದೊರೆತ ಕಾರಣ ಇಂದು ಬಂಜಾರ ಸಮುದಾಯ ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆಬರಲು ಸಾಧ್ಯವಾಗಿದೆ’ ಅಂತಾ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಅಫ್ಘಾನಿಸ್ಥಾನಕ್ಕೆ ಕಳುಹಿಸಬೇಕು: ವಿ.ಶ್ರೀನಿವಾಸ್ ಪ್ರಸಾದ್ ಕಿಡಿಕಿಡಿ
‘2013ರಲ್ಲಿ ಬಸವಜಯಂತಿಯಂದು ನಾನು ಅಧಿಕಾರ ಸ್ವೀಕಾರ ಮಾಡಿದೆ. ಬಸವಣ್ಣನವರ ಸಾಮಾಜಿಕ ಸಮಾನತೆಯ ಕನಸನ್ನು ನನಸು ಮಾಡಬೇಕೆಂದು ನನ್ನ 5 ವರ್ಷಗಳ ಆಡಳಿತದುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಅಧಿಕಾರ ವಹಿಸಿಕೊಂಡ ಮರು ಘಳಿಗೆಯಲ್ಲೇ ಸಂಪುಟ ಸಭೆ ಕರೆದು ಎಲ್ಲಾ ಜಾತಿ ಧರ್ಮಗಳ ಬಡವರಿಗೆ ಉಚಿತವಾಗಿ ಅಕ್ಕಿ ನೀಡುವ ಅನ್ನಭಾಗ್ಯ ಕಾರ್ಯಕ್ರಮವನ್ನು ಘೋಷಣೆ ಮಾಡಿದೆ. ಇದರಿಂದ ಉದ್ಯೋಗ ಅರಸಿ ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿದ್ದ ಬಂಜಾರ ಸಮಾಜದ ಜನರು ತಮ್ಮ ಊರುಗಳಲ್ಲೇ ನೆಲೆ ಕಂಡುಕೊಳ್ಳಲು ಸಾಧ್ಯವಾಯಿತು. ಆದರೆ ಈಗಿನ ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು 5 ಕೆಜಿಗೆ ಇಳಿಸಿ ನೀವು ತಿನ್ನುವ ಅನ್ನ ಕಸಿದಿದೆ. ಮುಂಬರುವ ವಿಧಾನಸಭಾ ಚುನಾವಣೆ(Vidhan Sabha Election)ಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದಮೇಲೆ ಪ್ರತಿ ಬಡವರಿಗೂ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ’ ಅಂತಾ ಸಿದ್ದರಾಮಯ್ಯ ಹೇಳಿದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿದ್ದ ಬಡವರ ಸಾಲವನ್ನು ಮನ್ನಾ ಮಾಡಿದ್ದೆ, ಕ್ಷೀರಧಾರೆ ಯೋಜನೆಯಡಿ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಿದ್ದೆ. ಬಿಜೆಪಿ ಸರ್ಕಾರ ಬಾಕಿ ಹಣ ಪಾವತಿಸದ ಕಾರಣಕ್ಕೆ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿತ್ತು, 2013ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಈ ಬಾಕಿ ಹಣವನ್ನು ಮನ್ನಾ ಮಾಡಿ, ಕತ್ತಲೆಯಾಗಿದ್ದ ಮನೆಗಳಿಗೆ ಬೆಳಕು ನೀಡುವ ಕೆಲಸ ಮಾಡಿದ್ದೇವು’ ಅಂತಾ ಹೇಳಿದರು.
ಇದನ್ನೂ ಓದಿ: ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ಪಿಎಚ್‌ಡಿ ನೀಡಬಹುದು: ಬಿಜೆಪಿ ಟೀಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ