ಬೆಂಗಳೂರು: ತೋಟಗಾರಿಕೆ ಇಲಾಖೆಯಿಂದ ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಮತ್ತು ನೈಸರ್ಗಿಕವಾಗಿ ಮಾವು ಮಾಗಿಸುವ ವಿಧಾನದ ಬಗ್ಗೆ ಸಲಹೆಗಳನ್ನು ನೀಡಲಾಗಿದೆ.
ಸಾಮಾನ್ಯವಾಗಿ ಮಾವಿನಲ್ಲಿ ಹೂ ಕಚ್ಚಿದ ನಂತರ ತಳಿಗಳನ್ನಾಧರಿಸಿ 5 ತಿಂಗಳಿಗೆ ಕಟಾವಿಗೆ ಸಿದ್ಧವಾಗುತ್ತವೆ.ಕೆಲವು ಬೇಗ ಪಕ್ವವಾಗುವ ಹಣ್ಣುಗಳು ಮಾರ್ಚ್ನಲ್ಲಿ ಕಟಾವಿಗೆ ಬರುತ್ತವೆ.ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬೆನೆಶಾನ್,ರಸಪುರಿ, ಕೇಸರ್ ಇವುಗಳು ಏಪ್ರಿಲ್, ಮೇ ಸುಮಾರಿಗೆ ಕಟಾವಿಗೆ ಬರುತ್ತವೆ. ತೋತಾಪೂರಿ, ಮಲ್ಲಿಕಾ ಮೇ, ಜೂನ್ ನಂತರ ಕಟಾವಿಗೆ ಬರುತ್ತವೆ.
ತಳಿಗಳನ್ನಾಧರಿಸಿ ಮಾವು ಕಟಾವಿಗೆ ಬಂದಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಭುಜಗಳು ಹಳದಿಯಾಗಿ ಕಾಣುತ್ತವೆ.ಸೋನೆ ಕಡಿಮೆಯಾಗುತ್ತದೆ. 5-6 ಪಕ್ವಗೊಂಡ ಹಣ್ಣುಗಳು ಉದುರಿ ಕೆಳಗೆ ಬೀಳುತ್ತವೆ. ಪಕ್ವಗೊಂಡ ಕಾಯಿಗಳು ನೀರಿನಲ್ಲಿ ಮುಳುಗಿಸಿದಾಗ ಮುಳುಗುತ್ತವೆ.
ಹಣ್ಣು ಮಾಗಿಸುವ ವಿಧಾನ:
ಚೆನ್ನಾಗಿ ಬಲಿತ ಕಾಯಿಗಳು ಕಟಾವಿನ ನಂತರ 4-5 ದಿನಗಳಲ್ಲಿಯೇ ಹಣ್ಣಾಗುತ್ತವೆ. ಮಾವಿನಲ್ಲಿ ಸಹಜವಾಗಿ ಹಣ್ಣಾಗಲು ಸಮಯ ತಗಲುತ್ತದೆ.ಆದ್ದರಿಂದ ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಮತ್ತು ನೈಸರ್ಗಿಕವಾಗಿ ಹಣ್ಣು ಮಾಗಿಸುವ ಮೂಲಕ ಉತ್ತಮ ಗುಣಮಟ್ಟ ಹಾಗೂ ಮಾರುಕಟ್ಟೆ ದೊರೆಯುತ್ತದೆ. ಹಣ್ಣು ಮಾಗುವಾಗ ತೊಟ್ಟಿನ ಬುಡದಲ್ಲಿ ಇಥಲೀನ್ ಎಂಬ ರಾಸಾಯನಿಕ ಉತ್ಪತ್ತಿಯಾಗಿ ಆಮ್ಲಗಳು ವಿಭಜನೆಯಾಗಿ ಸಕ್ಕರೆಯಾಗಿ ರೂಪಾಂತರಗೊಳ್ಳುತ್ತವೆ. ಇದರಿಂದ ಹಣ್ಣಿನಲ್ಲಿ ತಳಿ ಆಧರಿಸಿ ಮಧುರವಾದ ಸುವಾಸನೆ ಬರುತ್ತದೆ.
ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಸೌರವ್ ಗಂಗೂಲಿ...? ಗಂಗೂಲಿ ಮನೆಯಲ್ಲಿ ಔತಣಕೂಟದಲ್ಲಿ ಭಾಗಿಯಾಗಲಿರುವ ಅಮಿತ್ ಶಾ..!
ಕಾಯಿಗಳನ್ನು ಕಟಾವಿನ ನಂತರ ಒಂದೆರೆಡು ಗಂಟೆಗಳ ಕಾಲ ನೆರಳಿನಲ್ಲಿಡಬೇಕು.ಸೋನೆ ಅಂಟಿಕೊಂಡಿದ್ದನ್ನು ಚೆನ್ನಾಗಿ ತೊಳೆದು ನಂತರ ಬಟ್ಟೆಯಿಂದ ಒರೆಸಿ ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿ ಸಂಗ್ರಹಿಸಬೇಕು. ಅನಂತರ 55 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯ ಬಿಸಿ ನೀರಿನಲ್ಲಿ ಐದು ನಿಮಿಷಗಳ ಕಾಲ ಮುಳುಗಿಸಬೇಕು. ಅನಂತರ ಬಟ್ಟೆಯಿಂದ ಒರೆಸಬೇಕು.ಇದರಿಂದಾಗಿ ತೊಟ್ಟಿನ ಬುಡ ಕೊಳೆಯುವ ರೋಗ ನಿಯಂತ್ರಿಸಬಹುದು. ಸಿಪ್ಪೆಯ ಅಡಿಯಲ್ಲಿ ಹಣ್ಣಿನ ನೊಣ ಮೊಟ್ಟೆ ಇಟ್ಟಿದ್ದರೂ ನಾಶವಾಗುತ್ತದೆ. ಒಣಗಿದ ಕಾಯಿಗಳನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ತಲೆ ಕೆಳಗಾಗಿ ಇಟ್ಟು ಮೇಲೆ ಭತ್ತದ ಹುಲ್ಲು ಅಥವಾ ಪೇಪರ್ ಚೂರುಗಳನ್ನು ಹರಡಬೇಕು. ಹೀಗೆ ಶೇಖರಿಸಿದ ಕಾಯಿಗಳು 4-5 ದಿನಗಳಲ್ಲಿ ಹಣ್ಣಾಗುತ್ತದೆ.
ಮಾವಿನ ಕಾಯಿಗಳ ಜೊತೆಗೆ 4-5 ಬಾಳೆ ಹಣ್ಣುಗಳನ್ನು ಇಟ್ಟರೆ ಬೇಗ ಹಣ್ಣಾಗುವುದು. ಸ್ವಲ್ಪ ಎಳೆ ಕಾಯಿಗಳನ್ನು ಕೊಯ್ದಿದ್ದರೆ ಬುಟ್ಟಿಯಲ್ಲಿ ಸಂಗ್ರಹಿಸುವ ಮೊದಲು 10 ಲೀಟರ್ ನೀರಿಗೆ 1-2 ಮಿ.ಲೀ. ಇಥಲೀನ್ ದ್ರಾವಣ ಬೆರೆಸಿಕೊಂಡು ಕಾಯಿಗಳನ್ನು 5-10 ಸೆಕೆಂಡು ಮುಳುಗಿಸಿ ತೆಗೆಯಿರಿ. ಅನಂತರ ಬುಟ್ಟಿಯಲ್ಲಿ ಹರಡಿಕೊಳ್ಳಿ. ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿ ಸಂಗ್ರಹಿಸಿದ ಹಣ್ಣುಗಳನ್ನು ಶುದ್ಧ ಇಥಲೀನ್ ಅನಿಲ ಹಾಯಿಸಿ ಹಣ್ಣಾಗಿಸುವ ಕೊಠಡಿಗಳಲ್ಲಿ ಗಾಳಿಯಾಡದಂತೆ ಇಡಬೇಕು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಮಾವಿನ ಹಣ್ಣನ್ನು ಮಾಗಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.1 ಟನ್ ಅಥವಾ ಹೆಚ್ಚಿನ ಪ್ರಮಾಣದ ಹಣ್ಣುಗಳನ್ನು ಮಾಗಿಸಲು ಪಾಲಿಥೀನ್ ಕೊಠಡಿಗಳು ಲಭ್ಯವಿದ್ದು ಇವುಗಳಲ್ಲಿ ಹಣ್ಣುಗಳನ್ನು ಶೇಖರಿಸಿ ಇಥಲೀನ ದ್ರಾವಣ ಹಾಯಿಸುವುದರ ಮೂಲಕ ಹಣ್ಣುಗಳನ್ನು ಬೇಗನೆ ಮತ್ತು ಒಂದೇ ಸಮನಾಗಿ ಮಾಗಿಸಬಹುದು.ಗ್ರಾಮೀಣ ಭಾಗದಲ್ಲಿ ರೈತರು ಇಂತಹ ಯಾವುದೇ ಸೌಲಭ್ಯಗಳಿಲ್ಲದಿದ್ದಲ್ಲಿ ಪೂರ್ಣವಾಗಿ ಪಕ್ವಗೊಂಡ ಹಣ್ಣುಗಳನ್ನು ಗಾಳಿಯಾಡದ ಕೋಣೆಯಲ್ಲಿ ಒಂದೇ ಪದರಿನಲ್ಲಿ ಹರಡಿ ನೆಲ್ಲು ಹುಲ್ಲು ಹಾಕಿ ಮಾಗಲು ಬಿಟ್ಟರೆ ಒಂದೇ ವಾರದಲ್ಲಿ ಹಣ್ಣುಗಳು ಮಾಗುತ್ತವೆ.
ಇದನ್ನೂ ಓದಿ: ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!
ಯಾವುದೇ ಕಾರಣಕ್ಕೂ ಕ್ಯಾಲ್ಸಿಯಂ ಕಾಬ್ರೆಂಡ್ ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಮಾಗಿಸಬಾರದು.ಇದು ಕಾನೂನು ಬಾಹಿರವಾಗಿದ್ದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.