ಬೆಂಗಳೂರು : ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಅಮಾನತುಗೊಂಡಿರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಇಂಬು ನೀಡುವಂತೆ ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ 9 ತಿಂಗಳಲ್ಲಿ ಅಧಿಕ ಮಂದಿ ಸಸ್ಪೆಂಡ್ ಆಗಿದ್ದಾರೆ. 2022 ಸೆಪ್ಟೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 235 ಪೊಲೀಸರು ಅಮಾನತುಗೊಂಡಿದ್ದಾರೆ. 2019 ರಲ್ಲಿ 122, 2020ರಲ್ಲಿ 159, 2021ರಲ್ಲಿ 319 ಸಸ್ಪೆಂಡ್ ಆಗಿದ್ದರು.
ಎಲ್ಲಾ ಇಲಾಖೆಯಲ್ಲಿ ಇರುವಂತೆ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಸರ್ವೇ ಸಾಮಾನ್ಯವಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ಅಧಿಕಾರ ಪ್ರಭಾವ ಬಳಸಿ ಅಕ್ರಮ ಕೂಟದಲ್ಲಿ ಹೆಚ್ಚು ಪೊಲೀಸರು ಭಾಗಿಯಾಗುತ್ತಿರುವುದು ಕಳವಳಕಾರಿಯಾಗಿದೆ.
ಇದನ್ನೂ ಓದಿ : ಮುರುಘಾ ಮಠಕ್ಕೆ ಆಡಳಿತಾಧಿಕಾರಿ, ವರದಿಯ ನಂತರ ತೀರ್ಮಾನ: ಸಿಎಂ ಬೊಮ್ಮಾಯಿ
ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವ ಹಪಾಹಪಿ, ದುರಾಸೆಗೆ ಬಿದ್ದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯಲೋಪದಡಿ 1688 ಪೊಲೀಸ್ ಅಧಿಕಾರಿಗಳು ವಿಚಾರಣೆ ಎದುರಿಸಿದ್ದಾರೆ. ಇದರಲ್ಲಿ 835 ಸಸ್ಪೆಂಡ್ ಆದರೆ 68 ಮಂದಿ ವಜಾಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ವಿವಿಧ ಕಾರಣದಿಂದ ವರ್ಷದಿಂದ ವರ್ಷಕ್ಕೆ ಅಮಾನತುಗೊಳ್ಳುವವರ ಸಂಖ್ಯೆ ಜೊತೆಗೆ ಇಲಾಖಾ ವಿಚಾರಣೆ ಎದುರಿಸಿದ ಪೊಲೀಸರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡು ಬಂದಿದೆ. 2019 ರಲ್ಲಿ 371, 2020ರಲ್ಲಿ 408, 2021ರಲ್ಲಿ 441 ಹಾಗೂ 2022ರ ಸೆಪ್ಟೆಂಬರ್ 468 ಇಲಾಖಾ ವಿಚಾರಣೆ ಎದುರಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಹೋಲಿಸಿದರೆ 9 ತಿಂಗಳಲ್ಲಿ ಅತಿಹೆಚ್ಚು ಅಂದರೆ 25 ಇನ್ ಸ್ಪೆಕ್ಟರ್ ಗಳು ಅಮಾನತುಗೊಂಡಿದ್ದಾರೆ. 2021 ರಲ್ಲಿ 27 ಇನ್ ಸ್ಪೆಕ್ಟರ್ ಗಳು ಸಸ್ಪೆಂಡ್ ಆಗಿದ್ದರು.
ಇದನ್ನೂ ಓದಿ :ಭಾರತೀಯರ ಬದುಕು ಕಸಿದ ನೋಟ್ ಬ್ಯಾನ್‌ನಿಂದಾದ ಲಾಭವೇನು?: ಕಾಂಗ್ರೆಸ್ ಪ್ರಶ್ನೆ
ಅಮಾನತಾಗಲು ಕಾರಣ..?
ನೊಂದವರ ಪಾಲಿನ ಆಶಾಕಿರಣವಾಗಬೇಕಿದ್ದ ಆರಕ್ಷಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಪೊಲೀಸ್ ಇಲಾಖೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಪೋಸ್ಟಿಂಗ್ ಗಾಗಿ ಹಣ ನೀಡುವ ಸಂಪ್ರದಾಯಕ್ಕೆ ತಿಲಾಂಜಲಿ ಬಿಡಬೇಕಾದ ರಾಜಕಾರಣಿಗಳೇ ಹಣಕ್ಕಾಗಿ ಕೈ ಚಾಚುತ್ತಿರುವುದರಿಂದ ಪೊಲೀಸರು ಅನಿವಾರ್ಯವಾಗಿ ಭ್ರಷ್ಟಚಾರಕ್ಕೆ ಇಳಿಯುವಂತಾಗಿದೆ.
ಮತ್ತೊಂದು ಕಡೆ ತಾನು ಮಾಡಬೇಕಾದ ಕೆಲಸ ಮರೆತು ಅಧಿಕಾರದ ಪ್ರಭಾವ ಬಳಸಿ ಅಕ್ರಮ ಕೃತ್ಯಗಳಿಗೆ ಪೊಲೀಸರು ಸಾಥ್ ನೀಡುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್, ಕ್ಲಬ್ ಗಳಲ್ಲಿ ಇಸ್ಟೀಟ್ ಅನುಮತಿ ನೀಡಿ ದಂಧೆಕೋರರಿಂದ ಹಣ ಪಡೆದು ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಇತ್ತೀಚೆಗೆ ಸದಾಶಿವನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐವರು ಪೊಲೀಸರು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಳ್ಳಲು ಲಂಚ ಪಡೆದ ಅರೋಪದಡಿ ಸಸ್ಪೆಂಡ್ ಆಗಿದ್ದರು.
ಅಧಿಕಾರದಲ್ಲಿದ್ದಷ್ಟು ಕಾಲ ಬೇಗನೇ ಹಣ ಮಾಡುವ ದೃಷ್ಟಿಯಿಂದ ಪೊಲೀಸರು ಅವ್ಯವಹಾರಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಿಂದೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಕೃತ್ಯಗಳಲ್ಲಿ ಶಾಮೀಲಾಗುತ್ತಿರುವುದು ಹೆಚ್ಚಾಗುತ್ತಿದೆ. ಪೊಲೀಸರೇ ಭಕ್ಷಕರಾದರೆ ಜನರಿಗೆ ಇಲಾಖೆ ಮೇಲಿನ ನಂಬಿಕೆ ಹೋಗಲಿದೆ. ಹೀಗಾಗಿ ತಪ್ಪಿತಸ್ಥರ ಮೇಲೆ ವಿಚಾರಣೆ ನಡೆಸಿ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ : Bangalore Crime : ಮತ್ತೊಂದು ಸೌಹಾರ್ದ ಬ್ಯಾಂಕ್‌ನ ಕರ್ಮಕಾಂಡ ಬಯಲು, 78 ಕೋಟಿ ವಂಚನೆ
ರಾಜ್ಯಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ಅಕ್ರಮವೆಸಗಿದ್ದ ಆರೋಪದಡಿ ಐಪಿಎಸ್ ಅಧಿಕಾರಿ ಅಮ್ರಿತ್ ಪಾಲ್ ಸೇರಿದಂತೆ ಎಸಿಪಿ, ಇನ್ ಸ್ಪೆಕ್ಟರ್ ಹಾಗೂ ಪಿಎಸ್ಐ ಒಳಗೊಂಡಂತೆ 28 ಮಂದಿ ಪೊಲೀಸರು ಸಸ್ಪೆಂಡ್ ಆಗಿದ್ದರು. ಯುವತಿಯೊಂದಿಗೆ ಅನುಚಿತ ವರ್ತನೆ ಹಿನ್ನೆಲೆ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಅಮಾನತುಗೊಂಡಿದ್ದನ್ನು ಸಹ ನಾವು ಸ್ಮರಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.