ಸಿಎಂ ಯಡಿಯೂರಪ್ಪ ಸೇರಿ ಅವರ ಮನೆಯಲ್ಲೇ 11 ಮಂದಿಗೆ COVID-19 ಪಾಸಿಟಿವ್

ಭಾನುವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ COVID-19 ಪಾಸಿಟಿವ್ ದೃಢಪಟ್ಟಿತ್ತು. 

Updated: Aug 3, 2020 , 05:10 PM IST
ಸಿಎಂ ಯಡಿಯೂರಪ್ಪ ಸೇರಿ ಅವರ ಮನೆಯಲ್ಲೇ 11 ಮಂದಿಗೆ COVID-19 ಪಾಸಿಟಿವ್

ಬೆಂಗಳೂರು: ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪಗೆ (BS Yediyurappa)  ಅವರಿಗೆ COVID-19 ಪಾಸಿಟಿವ್ ದೃಢಪಡುತ್ತಿದ್ದಂತೆ ಅವರ ಕುಟುಂಬ ವರ್ಗದವರು ಮತ್ತು ಮನೆಯಲ್ಲಿದ್ದವರನ್ನೆಲ್ಲಾ COVID-19 ಪರೀಕ್ಷೆಗೆ ಒಳಪಡಿಸಲಾಗಿದ್ದು ಯಡಿಯೂರಪ್ಪ ಸೇರಿದಂತೆ ಒಟ್ಟು 11 ಮಂದಿಗೆ ಪಾಸಿಟಿವ್ ಬಂದಿದೆ ಎಂದು ಗೊತ್ತಾಗಿದೆ.

ಯಡಿಯೂರಪ್ಪ ಅಲ್ಲದೆ ಅವರ ಮನೆಯಲ್ಲಿ COVID-19 ಪಾಸಿಟಿವ್ ಬಂದಿರುವವರ ವಿವರ ಈ ರೀತಿಯಾಗಿದೆ. ಯಡಿಯೂರಪ್ಪ ಪುತ್ರಿ ಪದ್ಮಾವತಿ, ಓರ್ವ ಗನ್ ಮ್ಯಾನ್, ಇಬ್ಬರು ಅಡುಗೆ ಭಟ್ಟರು, ಮೂವರು ಮನೆ ಕೆಲಸದವರು,  ಇಬ್ಬರು ಸಿಬ್ಬಂದಿ ಹಾಗೂ ಯಡಿಯೂರಪ್ಪ ಅವರ ವಿಶೇಷಾಧಿಕಾರಿಯ ಕಾರು ಚಾಲಕ ಎಂದು‌ ತಿಳಿದುಬಂದಿದೆ.

ಭಾನುವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ  ಕೋವಿಡ್-19 (COVID-19) ಪಾಸಿಟಿವ್ ದೃಢಪಟ್ಟಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಸೋಮವಾರ ಅವರ ಕುಟುಂಬ ವರ್ಗದವರು ಮತ್ತು ಮನೆಯಲ್ಲಿದ್ದವರನ್ನೆಲ್ಲಾ COVID-19 ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಸಂಪರ್ಕದಲ್ಲಿದ್ದ ಉಳಿದ 10 ಮಂದಿಗೆ COVID-19 ಪಾಸಿಟಿವ್ ಇರುವುದಾಗಿ ತಿಳಿದುಬಂದಿದೆ.

ಯಡಿಯೂರಪ್ಪ ಪುತ್ರಿಗೂ COVID-19 ಪಾಸಿಟಿವ್, ವಿಜಯೇಂದ್ರಗೆ ನೆಗೆಟಿವ್

ಯಡಿಯೂರಪ್ಪ ಪುತ್ರಿ ಪದ್ಮಾವತಿ ಕೂಡ ತಮ್ಮ ತಂದೆ ಚಿಕಿತ್ಸೆ ಪಡೆಯುತ್ತಿರುವ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ರ ಬಿ.ವೈ ವಿಜಯೇಂದ್ರನಿಗೆ ನೆಗೆಟಿವ್ ಬಂದಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಅವರು‌ ಹೋಂ ಕ್ವಾರಂಟೈನ್ (Home Quarantine) ನಲ್ಲಿದ್ದಾರೆ. ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಸ್ವತಃ ಯಡಿಯೂರಪ್ಪ ಕೂಡ ವಿಡಿಯೋ ಬಿಡುಗಡೆ ಮಾಡಿ ತಾವು ಆದಷ್ಟು ಬೇಗ ಗುಣಮುಖರಾಗುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.

ಜುಲೈ 31ರಂದು ಯಡಿಯೂರಪ್ಪ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ COVID-19 ಪರೀಕ್ಷೆಗೆ ಒಳಗಾಗಿದ್ದು ಅವರಿಗೆ ನೆಗೆಟಿವ್ ಬಂದಿದೆ. ಯಡಿಯೂರಪ್ಪ ಮತ್ತು ವಜೂಬಾಯಿ ವಾಲಾ ಅವರ ಭೇಟಿ ವೇಳೆ ಉಪಸ್ಥಿತರಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ COVID-19 ಪರೀಕ್ಷೆಗೆ ಒಳಗಾಗಿದ್ದು ಅವರಿಗೂ ನೆಗೆಟಿವ್ ಬಂದಿದೆ.