ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ಹೇಳಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಿಜೆಪಿ ನಿಯೋಗ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ರಾಜುಅದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು.
ಬಿಜೆಪಿಗೆ ಬಹುಮತವಿಲ್ಲ. ಹಾಗಾಗಿ ಸರ್ಕಾರ ರಚನೆ ಸಾಧ್ಯವಿಲ್ಲ. ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ಶ್ರೀರಾಮುಲು ಅವರು, ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಪಕ್ಷದ ಹೈಕಮ್ಯಾಂಡ್ ಯಾವ ತೋರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಇನ್ನು, ಯಾರ್ಯಾರಿಗೆ ಯಾವ ಹುದ್ದೆ ನೀಡಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರಗಳನ್ನು ಯಡಿಯೂರಪ್ಪನವರು ಕೈಗೊಳ್ಳುತ್ತಾರೆ ಎಂದು ಬಿ.ಶ್ರೀರಾಮುಲು ಹೇಳಿದರು.