ಸಿದ್ದರಾಮಯ್ಯ ಯುರೋಪ್ ಪ್ರವಾಸದ ಬಳಿಕ ವಿಚ್ಛೇದನ

ಹೈಕಮಾಂಡ್ ಒತ್ತಡಕ್ಕೆ ಮಣಿದು ಕಾಂಗ್ರೆಸ್, ಜೆಡಿಎಸ್ ಮದುವೆಯಾಗಿವೆ. ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಜಗಳ ಶುರುವಾಗಿದೆ. ಇದು ಆಪರೇಷನ್ ಕಮಲವಲ್ಲ, ಆಪರೇಷನ್ ಸಿದ್ದು- ಜಗದೀಶ್ ಶೆಟ್ಟರ್ ಹೇಳಿಕೆ

Last Updated : Aug 29, 2018, 10:33 AM IST
ಸಿದ್ದರಾಮಯ್ಯ ಯುರೋಪ್ ಪ್ರವಾಸದ ಬಳಿಕ ವಿಚ್ಛೇದನ title=
File Photo

ಗದಗ: ಹೈಕಮಾಂಡ್ ಒತ್ತಡಕ್ಕೆ ಮಣಿದು ಕಾಂಗ್ರೆಸ್, ಜೆಡಿಎಸ್ ಮದುವೆಯಾಗಿವೆ. ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಜಗಳ ಶುರುವಾಗಿದೆ. ಸಿದ್ದರಾಮಯ್ಯ ಯುರೋಪ್ ಪ್ರವಾಸದ ಬಳಿಕ ವಿಚ್ಛೇದನವಾಗಲಿದೆ. ಇದು ಆಪರೇಷನ್ ಕಮಲವಲ್ಲ, ಆಪರೇಷನ್ ಸಿದ್ದು ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗದಗದಲ್ಲಿ ಹೇಳಿದ್ದಾರೆ.

ಯುರೋಪ್ ಪ್ರವಾಸ-ವಿಚ್ಛೇದನ ಪ್ರವಾಸ:
ಗದಗದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಕೆಲವರು ಒತ್ತಾಯದಿಂದ ಮನೆಯಲ್ಲಿ ಮದುವೆ ಮಾಡುವಂತೆ ಹೈಕಮಾಂಡ್ ಒತ್ತಡಕ್ಕೆ ಮಣಿದು ಕಾಂಗ್ರೆಸ್-ಜೆಡಿಎಸ್ ಲಗ್ನವಾಗಿದೆ. ಜಗಳವಾಗಿ ಈಗ ಎಲ್ಲರೂ ಸೇರಿ ಯುರೋಪ್ ದೇಶಕ್ಕೆ ಹೊರಟಿದ್ದಾರೆ. ಯೂರೋಪ್ ದೇಶದಿಂದ ವಾಪಸ್ ಆಗುವ ವೇಳೆಗೆ ಬಹುಶಃ ವಿಚ್ಛೇದನ ಆಗುವ ಸಾಧ್ಯತೆ ಇದೇ ಎಂದು ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

ಇದು ಆಪರೇಷನ್ ಕಮಲವಲ್ಲ- ಆಪರೇಷನ್ ಸಿದ್ದು:
ನಾವ್ಯಾರು ಯಾರನ್ನೂ ಸಂಪರ್ಕ ಮಾಡುತ್ತಿಲ್ಲ ಎಂದ ಜಗದೀಶ್ ಶೆಟ್ಟರ್, ನಾವು ಯಾವ ಆಪರೇಷನ್ ಕಮಲವನ್ನೂ ಮಾಡಿಲ್ಲ. ಅವರವರೇ ಆಪರೇಷನ್ ಮಾಡಿಕೊಳ್ಳಲು ಹೊರಟಿದ್ದಾರೆ. ಸಿದ್ದರಾಮಯ್ಯನವರು ಯುರೋಪ್ ದೇಶಕ್ಕೆ 40 ಮಂದಿ ಶಾಸಕರನ್ನು ಕರೆದುಕೊಂಡು ಹೋಗುತ್ತಾರೆ ಎಂದರೆ ಇದು ಆಪರೇಷನ್ ಕಮಲನೋ? ಆಪರೇಷನ್ ಸಿದ್ದರಾಮಯ್ಯನೋ? ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಸಮ್ಮಿಶ್ರ ಸರ್ಕಾರ ಉರುಳಲು ಬಿಜೆಪಿಯವರ ಅಗತ್ಯವಿಲ್ಲ. ಅವರವರೇ ಕಿತ್ತಾಡಿಕೊಂಡು ಸರ್ಕಾರವನ್ನು ಬೀಳಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಇನ್ನೊಂದು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

 ಮತ್ತೊಂದೆಡೆ ರಾಜ್ಯದಲ್ಲಿ ರಚನೆಯಾಗಿರುವ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇನ್ನೊಂದು ತಿಂಗಳಲ್ಲಿ ಪತನವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ.

ರಾಜ್ಯದ ಜನತೆಯ ಹಿತಾಸಕ್ತಿಯಿಂದಾಗಲಿ ಅಥವಾ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಸಲುವಾಗಿ ಸರ್ಕಾರ ರಚನೆ ಮಾಡಿಲ್ಲ. ಯಾವುದೇ ಒಂದು ಒಳ್ಳೆ ಉದ್ದೇಶದಿಂದ ಈ ಸಮ್ಮಿಶ್ರ ಸರ್ಕಾರ ರಚನೆಯಾಗಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಉಳಿಸಬೇಕು ಎಂಬ ಒಂದೇ ಉದ್ದೇಶದಿಂದ ಸರ್ಕಾರ ರಚನೆಯಾಗಿದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

Trending News