ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಜೆಡಿಎಸ್ನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ ಪತ್ನಿ ನಿರ್ಮಲಾ ಬುಧವಾರ(ಆಗಸ್ಟ್ 22) ಶಂಕರಪುರಂನ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆವರೆಗೆ ದತ್ತ ಅವರ ರಾಜಾಜಿನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ನಂತರ ಸಂಜೆ 4 ಗಂಟೆಗೆ ಕಡೂರು ತಾಲೂಕಿನ ಯಗಟಿ ಗ್ರಾಮದ ದತ್ತ ಅವರ ತೋಟದಲ್ಲಿ ನಿರ್ಮಲಾ ಅವರ ಅಂತ್ಯಸಂಸ್ಕಾರ ಮಾಡುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ಅವರು ದತ್ತ ಅವರ ಪತ್ನಿ ನಿರ್ಮಲಾ ಅವರ ಅಂತಿಮ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, 30 ವರ್ಷದ ಹಿಂದೆ ದತ್ತ ಅವರ ಮದುವೆಗೆ ಹೋಗಿದ್ದೆ. ನಂತರ ಏಳು ತಿಂಗಳಿಗೆ ಹುಟ್ಟಿದ್ದ ಮಗಳನ್ನು ಉಳಿಸಿಕೊಳ್ಳಲು ದತ್ತ ನಡೆಸಿದ ಹೋರಾದ ಸಂದರ್ಭದಲ್ಲೂ ದತ್ತನ ಜತೆಗಿದ್ದೆ. ಈಗ ಮಗಳು ದೊಡ್ಡವಳಾಗಿ ಅಮೆರಿಕದಲ್ಲಿ ವ್ಯಾಸಂಗ ಮುಗಿಸಿ ವಾಪಸ್ ಬಂದ ಬಳಿಕ, ದತ್ತ ಪತ್ನಿ ಅನಾರೋಗ್ಯಕ್ಕೆ ತುತ್ತಾದ್ರು.
ಎರಡೂವರೆ ವರ್ಷದಿಂದ ಅವರನ್ನು ಉಳಿಸಿಕೊಳ್ಳಲು ದತ್ತ ನಡೆಸಿದ ಇನ್ನಿಲ್ಲದ ಪ್ರಯತ್ನಗಳನ್ನೂ ಹತ್ತಿರದಿಂದ ನೋಡಿದ್ದೇನೆ. ಆದರೆ ಉಳಿಸಿಕೊಳ್ಳಲು ಆಗಲಿಲ್ಲ ದತ್ತ ಈ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳಬಾರದು. ರಾಜಕೀಯದಲ್ಲೂ ಅವರು ಈಗ ಸೋಲು ಕಂಡು ನೋವಿನಲ್ಲಿ ಇದ್ದಾರೆ. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಭಗವಂತ ನಿರ್ಮಲಾ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಭಾವುಕರಾಗಿ ನುಡಿದರು.
ಮಾಜಿ ಶಾಸಕ ವೈಎಸ್.ವಿ.ದತ್ತ ಅವರ ಪತ್ನಿ ನಿರ್ಮಲಾರ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಮತಿ ನಿರ್ಮಲ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ವೈ.ಎಸ್.ವಿ.ದತ್ತ ಅವರ ಕುಟುಂಬಕ್ಕೆ ಭಗವಂತ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಜಿ ಶಾಸಕ ವೈಎಸ್.ವಿ.ದತ್ತ ಅವರ ಪತ್ನಿ ನಿರ್ಮಲಾರ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಶ್ರೀಮತಿ ನಿರ್ಮಲ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ವೈ.ಎಸ್.ವಿ.ದತ್ತ ಅವರ ಕುಟುಂಬಕ್ಕೆ ಭಗವಂತ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ— CM of Karnataka (@CMofKarnataka) August 22, 2018
ದತ್ತ ಅವರ ಪತ್ನಿ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ನನ್ನ ಆತ್ಮಿಯ ಸ್ನೇಹಿತ ಹಾಗೂ ಚಿಕ್ಕಮಗಳೂರು ಜಿಲ್ಲೆ ಕಡೂರು ಕ್ಷೇತ್ರದ ಜೆಡಿಎಸ್ನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ ಪತ್ನಿ ನಿರ್ಮಲಾ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ದತ್ತ ಅವರು ಶಾಸಕರಾಗಿದ್ದ ಅವಧಿಯಲ್ಲಿ ಅವರ ಪತ್ನಿ ನಿರ್ಮಲಾ, ದತ್ತ ಅವರ ಬೆನ್ನೆಲುಬಾಗಿ ಸಹಕರಿಸಿದ್ದರು ಮತ್ತು ದತ್ತ ಅವರ ರಾಜಕೀಯ ಅಭಿವೃದ್ಧಿಯಲ್ಲಿ, ಇವರ ಪಾತ್ರ ಬಹು ದೊಡ್ಡದಾಗಿತ್ತು. ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ದತ್ತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಎಂದರು.