ಗಣಿಗಾರಿಕೆ, ಮರಳು ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಜುಲೈ 15 ರವರೆಗೆ ಗಡುವು

  ಜಿಲ್ಲೆಯ ಎಲ್ಲ ಗಣಿಗಾರಿಕೆ, ಕ್ರಷರ್ ಹಾಗೂ ಮರಳು ಸಾಗಾಣಿಕೆಯ ವಾಹನಗಳಿಗೆ ಇದೇ ಜುಲೈ 15 ರ ಒಳಗಾಗಿ ಜಿಪಿಎಸ್ ಅಳವಡಿಸುವುದು ಕಡ್ಡಾಯ. ಒಂದು ವೇಳೆ ಜಿಪಿಎಸ್ ಇಲ್ಲದಿರುವ ವಾಹನಗಳಲ್ಲಿ ಸಾಗಾಣಿಕೆ ಕಂಡುಬಂದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಗಣಿಗಾರಿಕೆಯ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

Written by - Manjunath N | Last Updated : Jul 6, 2023, 12:16 AM IST
  • ಮರಳು ಅಥವಾ ಜಮೀನುಗಳಿಂದ ಮಣ್ಣು ಸಾಗಾಣಿಕೆಗೆ ಸಂಬಂಧಿಸಿದಂತೆ ಇರುವ ನಿಯಮಾವಳಿ ಕುರಿತು ಪ್ರತಿಯೊಂದು ಗ್ರಾಮ ಪಂಚಾಯತಿ ಗಳಿಗೆ ಮಾಹಿತಿಯನ್ನು ನೀಡಬೇಕು.
  • ಮಣ್ಣು ಸಾಗಿಸಲು ಕೂಡ ಜಿಲ್ಲಾ ಟಾಸ್ಕ್ ಫೋರ್ಸ್‌ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
  • ಈ ಬಗ್ಗೆಯೂ ಸಾರ್ವಜನಿಕರಿಗೆ ಮತ್ತು ಗ್ರಾಮ ಪಂಚಾಯತಿಗಳಿಗೆ ಅರಿವು ಮೂಡಿಸಬೇಕು
ಗಣಿಗಾರಿಕೆ, ಮರಳು ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಜುಲೈ 15 ರವರೆಗೆ ಗಡುವು title=

ಬೆಳಗಾವಿ:  ಜಿಲ್ಲೆಯ ಎಲ್ಲ ಗಣಿಗಾರಿಕೆ, ಕ್ರಷರ್ ಹಾಗೂ ಮರಳು ಸಾಗಾಣಿಕೆಯ ವಾಹನಗಳಿಗೆ ಇದೇ ಜುಲೈ 15 ರ ಒಳಗಾಗಿ ಜಿಪಿಎಸ್ ಅಳವಡಿಸುವುದು ಕಡ್ಡಾಯ. ಒಂದು ವೇಳೆ ಜಿಪಿಎಸ್ ಇಲ್ಲದಿರುವ ವಾಹನಗಳಲ್ಲಿ ಸಾಗಾಣಿಕೆ ಕಂಡುಬಂದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಗಣಿಗಾರಿಕೆಯ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಜಿಲ್ಲಾ ಟಾಸ್ಕಫೋರ್ಸ್(ಗಣಿ) ಸಮಿತಿ ಸಭೆ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ನಿಯಂತ್ರಣ ಸಮಿತಿ ಮತ್ತು ಜಿಲ್ಲಾ ಮರಳು ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಪಿಎಸ್ ಅಳವಡಿಸಲು ಕ್ರಮ ಕೈಗೊಳ್ಳದಿದ್ದರೆ ಕ್ರಷರ್ ಮತ್ತು ಗಣಿಗಾರಿಕೆ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ- ಫ್ರೀ ರೇಶನ್ ಜೊತೆಗೆ ಈ ಸೌಲಭ್ಯ ಕೂಡಾ ಇನ್ನು ಸಂಪೂರ್ಣ ಉಚಿತ ! ಪಡಿತರ ಚೀಟಿದಾರರಿಗೆ ಜಾಕ್ ಪಾಟ್

ಜಿಪಿಎಸ್ ಅಳವಡಿಕೆಗೆ ಜುಲೈ 15 ರವರೆಗೆ ಕಾಲಾವಕಾಶ ನೀಡಲಾಗುತ್ತದೆ. ಜುಲೈ 15 ರಿಂದ ಜಿಪಿಎಸ್ ಅಳವಡಿಸಿರುವುದನ್ನು ಪರಿಶೀಲನೆ ಆರಂಭಿಸಲಾಗುತ್ತದೆ. ಒಂದು ವೇಳೆ ಜಿಪಿಎಸ್ ಅಳವಡಿಸದಿದ್ದರೆ ಅಂತಹ ವಾಹನಗಳ ಬಳಕೆಯನ್ನು ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.

ವಾಹನಗಳಿಗೆ ಜಿಪಿಎಸ್ ಇಲ್ಲದಿದ್ದರೆ ಪರವಾನಿಗೆ ರದ್ಸುಗೊಳಿಸಬೇಕು. ವಾಹನಗಳಿಗೆ ಜಿಪಿಎಸ್ ಅಳವಡಿಸುವುದು ಆಯಾ ಕ್ವಾರಿ ಅಥವಾ ಕ್ರಷರ್ ಮಾಲೀಕರ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.

ಅಕ್ಟೋಬರ್ ವರೆಗೆ ನದಿಮರಳು ಗಣಿಗಾರಿಕೆಗೆ ನಿರ್ಬಂಧ:

ಸರಕಾರದ ಮಾರ್ಗಸೂಚಿ ಪ್ರಕಾರ ಜೂನ್ ಮಾಹೆಯಿಂದ ಅಕ್ಟೋಬರ್ 1 ವರೆಗೆ ನದಿಮರಳು ಗಣಿಗಾರಿಕೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ಅಕ್ಟೋಬರ್ ವರೆಗೆ ಯಾವುದೇ ರೀತಿಯ ಗಣಿಗಾರಿಕೆ ಚಟುವಟಿಕೆ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಅವಧಿಯಲ್ಲಿ ಮರಳು ಗಣಿಗಾರಿಕೆ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸ್ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಅವಧಿಯಲ್ಲಿ ನಿರ್ಮಾಣ ಕೆಲಸಗಳಿಗೆ ಅಗತ್ಯವಿರುವ ಎಂ.ಸ್ಯಾಂಡ್ ಸಾಗಾಣಿಕೆಗೆ ಮಾತ್ರ ಅವಕಾಶವಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ- Gold Price Today: ಆಷಾಢ ಬಂದ್ರೂ ಇಳಿಕೆ ಆಗಲೇ ಇಲ್ಲ ಹಳದಿ ಲೋಹ..!!

ಅಕ್ರಮ ಗಣಿಗಾರಿಕೆ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿಯನ್ನು ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ- ರೂ.73.36 ಲಕ್ಷ ದಂಡ: ಜಿಲ್ಲಾಧಿಕಾರಿ ಪಾಟೀಲ

ಜಿಲ್ಲೆಯಲ್ಲಿ ಅನಧಿಕೃತ ಗಣಿಗಾರಿಕೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಪ್ರಸಕ್ತ 2023-24 ನೇ ಸಾಲಿನಲ್ಲಿ ಜೂನ್ 8 ರವರೆಗೆ ಒಟ್ಟಾರೆ ರೂ. 73.36 ಲಕ್ಷ ದಂಡವನ್ನು ವಿಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಲ್ಯಾಟರೈಟ್, ಮರಳು, ಮುರ್ರಂ ಹಾಗೂ ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಖನಿಜಗಳ ಅನಧಿಕೃತ ಗಣಿಗಾರಿಕೆ ಮತ್ತು ಸಾಗಾಣಿಕೆ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಅಕ್ರಮ ಕಂಡುಬಂದರೆ ಮುಲಾಜಿಲ್ಲದೇ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ನಿಯಮಾವಳಿ ಉಲ್ಲಂಘಿಸಿರುವ ಗಣಿಗಾರಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಗಣಿಗಾರಿಕೆ ವಾಹನಗಳ ಮೇಲೆ ನಿಗಾ ವಹಿಸಲು ನಿರ್ದೇಶನ:

ನಿಯಮಾವಳಿ ಮೀರಿ ಗಣಿಗಾರಿಕೆ ಹಾಗೂ‌ ಮರಳು ಸಾಗಾಣಿಕೆ ಕಂಡುಬಂದರೆ ಕೂಡಲೇ ಪೊಲೀಸ್, ಕಂದಾಯ ಇಲಾಖೆಗಳಿಗೆ ಮಾಹಿತಿಯನ್ನು ನೀಡುವುದರ ಜತೆಗೆ ಜಂಟಿ‌ ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಸೂಚನೆ ನೀಡಿದರು.

ಪರ್ಮಿಟ್ ಇಲ್ಲದೆ ಮರಳು ಸಾಗಾಣಿಕೆ, ಮಿತಿಮೀರಿದ ಭಾರ ಹೊತ್ತು ಸಾಗುವ ವಾಹನಗಳ ಸಂಚಾರ ತಡೆಗಟ್ಟಲು ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಗಣಿಗಾರಿಕೆ ಹಾಗೂ ಮರಳು ಸಾಗಾಣಿಕೆಗೆ ಬಳಸಲಾಗುವ ಪ್ರತಿಯೊಂದು ವಾಹನಗಳ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಒಂದು ವೇಳೆ ಸೂಕ್ತ ದಾಖಲಾತಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ವಾಹನ ಬಳಕೆಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾರ್ಗಸೂಚಿ ಕುರಿತು ಅರಿವು ಮೂಡಿಸಲು ಸಲಹೆ:

ಮರಳು ಅಥವಾ ಜಮೀನುಗಳಿಂದ ಮಣ್ಣು ಸಾಗಾಣಿಕೆಗೆ ಸಂಬಂಧಿಸಿದಂತೆ ಇರುವ ನಿಯಮಾವಳಿ ಕುರಿತು ಪ್ರತಿಯೊಂದು ಗ್ರಾಮ ಪಂಚಾಯತಿ ಗಳಿಗೆ ಮಾಹಿತಿಯನ್ನು ನೀಡಬೇಕು.

ಮಣ್ಣು ಸಾಗಿಸಲು ಕೂಡ ಜಿಲ್ಲಾ ಟಾಸ್ಕ್ ಫೋರ್ಸ್‌ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆಯೂ ಸಾರ್ವಜನಿಕರಿಗೆ ಮತ್ತು ಗ್ರಾಮ ಪಂಚಾಯತಿಗಳಿಗೆ ಅರಿವು ಮೂಡಿಸಬೇಕು ಎಂದು ಡಾ.ಸಂಜೀವ ಪಾಟೀಲ ತಿಳಿಸಿದರು.

ಜಿಲ್ಲೆಯಲ್ಲಿ ಕಲ್ಲುಗಣಿ ಗುತ್ತಿಗೆಗೆ ಸ್ವೀಕೃತವಾಗಿರುವ ಅರ್ಜಿಗಳಿಗೆ ನಿರಾಕ್ಷೇಪಣಾ ಪತ್ರ ನೀಡದೇ ಬಾಕಿ ಉಳಿದಿರುವ ಅರ್ಜಿಗಳ ಕುರಿತು ಹಾಗೂ ಅಕ್ರಮ ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾಗಿರುವ ದೂರುಗಳು ಮತ್ತು ಕೈಗೊಂಡ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇದಲ್ಲದೇ ಡಿಎಂ.ಎಫ್. ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಲೋಕೇಶ್ ಕುಮಾರ್ ಅವರು ಸಭೆಯನ್ನು ನಿರ್ವಹಿಸಿದರು.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಗಿತ್ತೆ, ಬೆಳಗಾವಿ ಉಪ ವಿಭಾಗಾಧಿಕಾರಿ ಬಲರಾಮ್ ಚವಾಣ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಗಣಿ ಮತ್ತು ಭೂವಿಜ್ಞಾನ, ಕಂದಾಯ, ಅರಣ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Trending News