ಹಿರಿಯ ಸಾಹಿತಿ ನಾಡೋಜ ಡಾ.ಚನ್ನವೀರ ಕಣವಿ ವಿಧಿವಶ: ಸಿಎಂ ಬೊಮ್ಮಾಯಿ ಸೇರಿ ಗಣ್ಯರ ಸಂತಾಪ

ಕನ್ನಡ ಕಾವ್ಯಲೋಕದ ಚೆಂಬೆಳಕಾಗಿದ್ದ, ಸೌಹಾರ್ದತೆಯನ್ನು ಸಾರುತ್ತಾ ಸಮನ್ವಯ ಕವಿ ಎಂದೇ ಖ್ಯಾತರಾಗಿದ್ದ ಕವಿ ಚೆನ್ನವೀರ ಕಣವಿ ಅವರ ನಿಧನದಿಂದ ಅತೀವ ದು:ಖಕ್ಕೀಡಾಗಿದ್ದೇನೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Written by - Zee Kannada News Desk | Last Updated : Feb 16, 2022, 12:55 PM IST
  • ಪ್ರಶಸ್ತಿಗಳಿಗೆ ಗೌರವ ಬರುವ ವ್ಯಕ್ತಿತ್ವವನ್ನು ಚನ್ನವೀರ ಕಣವಿ ಹೊಂದಿದ್ದರೆಂದ ಸಿಎಂ ಬಸವರಾಜ್ ಬೊಮ್ಮಾಯಿ
  • ಚನ್ನವೀರ ಕಣವಿ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ನಷ್ಟವುಂಟಾಗಿದೆ ಎಂದ ಎಚ್.ಡಿ.ದೇವೇಗೌಡ
  • ಚೆನ್ನವೀರ ಕಣವಿ ಆಧುನಿಕ ಕನ್ನಡ ಕಾವ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರು ಎಂದು ಬಣ್ಣಿಸಿದ ಎಚ್.ಡಿ.ಕುಮಾರಸ್ವಾಮಿ
ಹಿರಿಯ ಸಾಹಿತಿ ನಾಡೋಜ ಡಾ.ಚನ್ನವೀರ ಕಣವಿ ವಿಧಿವಶ: ಸಿಎಂ ಬೊಮ್ಮಾಯಿ ಸೇರಿ ಗಣ್ಯರ ಸಂತಾಪ title=
ಸಾಹಿತಿ ಚನ್ನವೀರ ಕಣಿವಿ ನಿಧನಕ್ಕೆ ಗಣ್ಯರ ಸಂತಾಪ

ಬೆಂಗಳೂರು: ಹಿರಿಯ ಸಾಹಿತಿ ನಾಡೋಜ ಡಾ.ಚನ್ನವೀರ ಕಣವಿ(Chennaveera Kanavi)ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

‘ನಾಡು ಕಂಡಂತಹ ಅತ್ಯಂತ ಸೃಜನಶೀಲ ಸಾಹಿತ್ಯ ರಚನೆಕಾರರು, ಚಂಬೆಳಕಿನ ಕವಿ, ನಾಡೋಜ ಚೆನ್ನವೀರ ಕಣವಿ ಅವರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ‌. ಸಾಹಿತ್ಯದ ಮುಖಾಂತರ ಅವರು ತಮ್ಮ ಕಲ್ಪನೆ ಹಾಗೂ ವಾಸ್ತವಾಂಶವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ ಕವಿ ಆಗಿದ್ದರು. ಪ್ರಶಸ್ತಿಗಳಿಗೆ ಗೌರವ ಬರುವ ವ್ಯಕ್ತಿತ್ವ ಅವರದಾಗಿತ್ತು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಹಾನಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ’ ಅಂತಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Rape Case: ಅಪ್ರಾಪ್ತೆಯ ಅತ್ಯಾಚಾರ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(HD Deve Gowda) ಟ್ವೀಟ್ ಮಾಡಿ, ‘ಕನ್ನಡದ ಜನಪ್ರಿಯ ಹಿರಿಯ ಸಾಹಿತಿ ನಾಡೋಜ ಡಾ.ಚನ್ನವೀರ ಕಣವಿ ವಿಧಿವಶರಾದ ಸಂಗತಿ ತಿಳಿದು ಆಘಾತವುಂಟಾಗಿದೆ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ  ಈ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಅಂತಾ ಹೇಳಿದ್ದಾರೆ.

‘ಕನ್ನಡ ಕಾವ್ಯಲೋಕದ ಚೆಂಬೆಳಕಾಗಿದ್ದ, ಸೌಹಾರ್ದತೆಯನ್ನು ಸಾರುತ್ತಾ ಸಮನ್ವಯ ಕವಿ ಎಂದೇ ಖ್ಯಾತರಾಗಿದ್ದ ಕವಿ ಚೆನ್ನವೀರ ಕಣವಿ ಅವರ ನಿಧನದಿಂದ ಅತೀವ ದು:ಖಕ್ಕೀಡಾಗಿದ್ದೇನೆ. ಅವರ ಕುಟುಂಬ ವರ್ಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ‌ ಕೋರುತ್ತೇನೆ’ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Hijab Controversy: ಅಲ್ಪಸಂಖ್ಯಾತ ಸಮುದಾಯದ ಪರ ಕೈ ಬ್ಯಾಟಿಂಗ್!

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy)ಟ್ವೀಟ್ ಮಾಡಿದ್ದು, ‘ಆಧುನಿಕ ಕನ್ನಡ ಕಾವ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರು, ಹೊಂಬೆಳಕಿನ ಕವಿ, ಸುನೀತಗಳ ಸಾಮ್ರಾಟರೆಂದೇ ಕನ್ನಡಿಗರ ಮನಸ್ಸುಗಳಲ್ಲಿ ತುಂಬಿಹೋಗಿರುವ ನಾಡೋಜ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಣವಿ ಅವರು ಚೇತರಿಸಿಕೊಂಡು ಕ್ಷೇಮವಾಗಿ ಮನೆಗೆ ಮರಳುತ್ತಾರೆಂಬ ನಮ್ಮೆಲ್ಲರ ನಿರೀಕ್ಷೆಯನ್ನು ಹುಸಿ ಮಾಡಿ ಅಗಲಿದ್ದಾರೆ. ಅವರಿಲ್ಲದಿರುವಿಕೆ ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿ ಮಾಡಿದೆ ಎನ್ನುವುದು ನನ್ನ ಅಭಿಪ್ರಾಯ’ ಅಂತಾ ಹೇಳಿದ್ದಾರೆ.

‘ಹೂವು ಹೊರಳುವುವು ಸೂರ್ಯನ ಕಡೆಗೆ

ನಮ್ಮ ದಾರಿ ಬರಿ ಚಂದ್ರನವರೆಗೆ

ಇರುಳಿನ ಒಡಲಿಗೆ ದೂರದ ಕಡಲಿಗೆ

ಮುಳುಗಿದಂತೆ ದಿನ ಬೆಳಗಿದಂತೆ

ಹೊರ ಬರುವನು ಕೂಸಿನ ಹಾಗೆ//

ಇಂತಹ ಅನನ್ಯ ಕಾವ್ಯ ರಚಿಸಿದ ಅವರು ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಕುಟುಂಬದವರು, ನಾಡಿನ ಜನರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ’ ಅಂತಾ ಎಚ್ ಡಿಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News