ಬೆಂಗಳೂರು: ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗಗಳಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟವು ಇಂದು ರಾಜ್ಯವ್ಯಾಪಿ ಕರೆ ನೀಡಿರುವ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏತನ್ಮಧ್ಯೆ, ಫರಂಗಿಪೇಟೆಯ ಬಳಿ ತಿರುಪತಿ-ಮಂಗಳೂರು ಬಸ್‌ನಲ್ಲಿ ಕಲ್ಲು ತೂರಾಟ ನಡೆಸಲಾಗಿದೆ.
Mangaluru: Stones pelted on a Tirupati-Mangaluru bus in Farangipet. Several pro-Kannada groups have called for Karnataka bandh today demanding implementation of Sarojini Mahishi report which recommended certain percentage of jobs to Kannadigas in private&public sector companies pic.twitter.com/mPJXUXJTR5
— ANI (@ANI) February 13, 2020
ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಪ್ರಾರಂಭವಾದ ಕರ್ನಾಟಕ ಬಂದ್ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳಲ್ಲಿಯೂ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವೆಂದರೆ, ಓಲಾ ಮತ್ತು ಉಬರ್ ಚಾಲಕರು ಸಹ ಬಂದ್‌ಗೆ ಬೆಂಬಲವನ್ನು ನೀಡಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ಇತರ ಊರುಗಳಿಂದ ಬಂದಿರುವ ಪ್ರಯಾಣಿಕರು ಪರದಾಡುವಂತಾಗಿದೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಈಗಾಗಲೇ ಪ್ರಿಪೇಯ್ಡ್ ಕೌಂಟರ್ ಬಂದ್ ಮಾಡಲಾಗಿದೆ. ಇನ್ನು ಬಂದ್‌ಗೆ ಅಟೋ ಸಂಘಟನೆಗಳು, ಆಟೋ ಚಾಲಕರು ಬೆಂಬಲ ಸೂಚಿಸಿದ್ದು, ಸಾರ್ವಜನಿಕರು ಆಟೋಗಳಿಲ್ಲದೆ ಪರದಾಡುವಂತಾಗಿದೆ.
ಬೆಂಗಳೂರಿನಲ್ಲಿ ಜೈ ಭಾರತಾ ವಾಹನ ಮಾಲೀಕರು ಮತ್ತು ಚಾಲಕರ ಸಂಘ ಮತ್ತು ಆದರ್ಶ ಆಟೋ ಮತ್ತು ಟ್ಯಾಕ್ಸಿ ಯೂನಿಯನ್ ಸೇರಿದಂತೆ ಇನ್ನೂ ಕೆಲವು ಚಾಲಕರ ಸಂಘಗಳು ಬಂದ್‌ಗೆ ಬೆಂಬಲ ನೀಡಿವೆ. ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (ಕೆಎಫ್‌ಸಿಸಿ), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಮತ್ತು ಲಾರಿ ಮಾಲೀಕರ ಸಂಘ ಮುಂತಾದ ಹಲವಾರು ಸಂಸ್ಥೆಗಳು ಫೆಬ್ರವರಿ 13 ರ ಬಂದ್‌ಗೆ ಬೆಂಬಲ ನೀಡಿವೆ.
ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಫೆಬ್ರವರಿ 13 ರಂದು (ಗುರುವಾರ) ನಿಗದಿಯಾಗಿದ್ದ ಎಲ್ಲಾ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿದೆ. ಪ್ರತಿಭಟನೆಗೆ ಅನುಮತಿ ನೀಡಿಲ್ಲ ಮತ್ತು ಯಾರೂ ಬಲವಂತವಾಗಿ ಅಂಗಡಿಗಳು ಅಥವಾ ವ್ಯವಹಾರಗಳನ್ನು ಮುಚ್ಚಲು ಸಾಧ್ಯವಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಪ್ರತಿಭಟನಾಕಾರರು ದೂರವಿರಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಕೋರಿದ್ದಾರೆ. ಜೊತೆಗೆ ಪ್ರತಿಭಟನಾಕಾರರೊಂದಿಗೆ ಮಾತುಕತೆಗೆ ಸಿದ್ಧರಾಗಿರುವುದಾಗಿ ತಿಳಿಸಿರುವ ಸಿಎಂ ಯಡಿಯೂರಪ್ಪ, ಕನ್ನಡಿಗ ಯುವಕರಿಗೆ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗ ಒದಗಿಸಲು ಬದ್ಧರಾಗಿರುವುದಾಗಿ ಭರವಸೆ ನೀಡಿದ್ದಾರೆ.