ಡಿಕೆಶಿ-ಸ್ಟಾಲಿನ್ ಗಾಢ ಸ್ನೇಹ-ಸಂಬಂಧ ನರಕದಲ್ಲಿ ನಿಶ್ಚಯವಾದ ಮದುವೆಯಂತೆ!!: ಬಿಜೆಪಿ ಟೀಕೆ

Cauvery Water Sharing Dispute: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ನಡುವಿನ ಸಂಬಂಧವೂ ಒಂದೇ ತಾಯಿಯ ಮಕ್ಕಳು ನಾವು ಎನ್ನುವಷ್ಟರ ಮಟ್ಟಿಗೆ ಅನ್ಯೋನ್ಯವಾಗಿದೆ ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Sep 27, 2023, 05:45 PM IST
  • ಕಾಂಗ್ರೆಸ್‍ ಪಕ್ಷಕ್ಕೆ ಮತ್ತು ತಮಿಳುನಾಡಿನ ಸ್ಟಾಲಿನ್ ಸರ್ಕಾರಕ್ಕೆ ಅವಿನಾಭಾವ ಸಂಬಂಧವಿದೆ
  • ಕಾಂಗ್ರೆಸ್ ದಶಕಗಳ ಕಾಲದಿಂದಲೂ ಡಿಎಂಕೆಯ ಅತ್ಯಾಪ್ತ ಮಿತ್ರಪಕ್ಷವಾಗಿದೆ
  • ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಹಿತಾಸಕ್ತಿಗಿಂತಲೂ I.N.D.I. ಮೈತ್ರಿಕೂಟದ ಹಿತಾಸಕ್ತಿ ಮುಖ್ಯವಾಗಿದೆ
ಡಿಕೆಶಿ-ಸ್ಟಾಲಿನ್ ಗಾಢ ಸ್ನೇಹ-ಸಂಬಂಧ ನರಕದಲ್ಲಿ ನಿಶ್ಚಯವಾದ ಮದುವೆಯಂತೆ!!: ಬಿಜೆಪಿ ಟೀಕೆ title=
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. #ಕಾವೇರಿನಮ್ಮದು #NadaDrohiCongress ಹ್ಯಾಶ್‍ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾವೇರಿ ವಿಷಯದಲ್ಲಿ ಸ್ವಾರ್ಥದ ಮೈತ್ರಿಕೂಟದ ರಚನೆ ಆರಂಭ ಆದಾಗಿನಿಂದ ಇಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರವು ಎಂ.ಕೆ.ಸ್ಟಾಲಿನ್‌ ಗುಲಾಮರಂತೆ ಕೆಲಸ ಮಾಡಿದೆಯೇ ಹೊರತು ರಾಜ್ಯದ ಹಿತವನ್ನು ಎಳ್ಳಷ್ಟೂ ಕಾಪಾಡಿಲ್ಲ’ವೆಂದು ಟೀಕಿಸಿದೆ.

‘ಕಾವೇರಿಯನ್ನು ಹರಿಯಲು ಬಿಟ್ಟು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಶ್ರಮಪಡದಿದ್ದರೇ... ಆಗುತ್ತಿತ್ತೇ I.N.D.I. ಮೈತ್ರಿಕೂಟ, ಸೇರುತ್ತಿತ್ತೇ ಡಿ.ಎಂ.ಕೆ..??, ಸೇರುತ್ತಿತ್ತೇ ಡಿ.ಎಂ.ಕೆ..?!. ಈ ಸಾಲುಗಳು ಸದ್ಯ ಸಮಾಜದಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿವೆ. ಸದ್ದು ಮಾಡಲು ಪ್ರಮುಖ ಕಾರಣ ಆ ಸಾಲುಗಳಲ್ಲಿರುವ ನಿಜಾಂಶ. ರಾಜ್ಯದ ಕಾಂಗ್ರೆಸ್ ಸರ್ಕಾರ ನ್ಯಾಯಾಲಯದ ಆದೇಶಕ್ಕೂ ಮೊದಲೇ ಸ್ಟಾಲಿನ್ ನಾಡಿನ ಕಡೆಗೆ ನೀರು ಹರಿಸಿದ್ದು ಯಾಕೆ ಅನ್ನುವ ಸತ್ಯ ಕನ್ನಡಿಗರೆಲ್ಲರಿಗೂ ತಿಳಿದಿದೆ’ ಎಂದು ಬಿಜೆಪಿ ಕುಟುಕಿದೆ.

‘KRS ಮಡಿಲನ್ನು ಪೂರ್ತಿ ಬರಿದು ಮಾಡಿದ್ದೆಲ್ಲಾ ಮುಗಿದ ಮೇಲೆ ಈಗ ಕೊನೇ ಕ್ಷಣದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂಬ ತಲೆಹರಟೆ ವಾದವನ್ನು ಕಾಂಗ್ರೆಸ್ ತೆಗೆದಿದೆ. ಈ ಅಪ್ರಬುದ್ಧ ವಿತಂಡವಾದದಲ್ಲಿ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶವಿದೆಯೇ ಹೊರತು, ರಾಜ್ಯದ ಹಿತಾಸಕ್ತಿ ಕಾಪಾಡುವ ಉದ್ದೇಶವಂತೂ ಲವಲೇಶವೂ ಇಲ್ಲ. ಕಾವೇರಿ ವಿವಾದ ಇಂದು ನಿನ್ನೆಯದಲ್ಲ, ದಶಕಗಳಿಂದ ಜೀವಂತವಿದೆ. ವಿವಾದ ಬಗೆಹರಿಸಿ ನ್ಯಾಯ ತೀರ್ಮಾನಕ್ಕೆ ಈಗಾಗಲೇ ಹಲವಾರು ನ್ಯಾಯಾಧೀಕರಣ ಮಂಡಳಿಗಳು ಹಾಗೂ ಪ್ರಾಧಿಕಾರಗಳು ರಚನೆಯಾಗಿವೆ. ಈ ಪ್ರಾಧಿಕಾರಗಳೆಲ್ಲವೂ ರಚನೆಯಾಗಿದ್ದು ಕೇಂದ್ರ ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಯೇ! ಮನಸ್ಸು ಮಾಡಿದರೆ ಎರಡೂ ರಾಜ್ಯಗಳು ಎದುರು ಬದುರು ಕೂತು, ತಮ್ಮ ರಾಜ್ಯಗಳ ವಾಸ್ತವ ಪರಿಸ್ಥಿತಿಯ ಅಂಕಿ-ಅಂಶಗಳನ್ನು ಮುಂದಿಟ್ಟು ಕಾವೇರಿ ಸಮಸ್ಯೆ ಬಗೆಹರಿಸಬಹುದು’ ಎಂದು ಬಿಜೆಪಿ ಸಲಹೆ ನೀಡಿದೆ.

ಇದನ್ನೂ ಓದಿ: 3000 ಕ್ಯೂಸೆಕ್ ನೀರು ಹರಿಸಲು ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಆದರೆ ಕಾಂಗ್ರೆಸ್‍ಗೆ ಮತ್ತು ತಮಿಳುನಾಡಿನ ಸ್ಟಾಲಿನ್ ಸರ್ಕಾರಕ್ಕೆ ಅವಿನಾಭಾವ ಸಂಬಂಧವಿದೆ. ಕಾಂಗ್ರೆಸ್ ದಶಕಗಳ ಕಾಲದಿಂದಲೂ ಡಿಎಂಕೆಯ ಅತ್ಯಾಪ್ತ ಮಿತ್ರಪಕ್ಷ. ಕಾಂಗ್ರೆಸ್‌ ಸಹವಾಸವೇ ಬೇಡವೆಂದು ಇದುವರೆಗೆ ನೂರಾರು ಪಕ್ಷಗಳು ದೂರ ಸರಿದಾಗಲೂ ಡಿಎಂಕೆ ಮಾತ್ರ ಜೊತೆಗೇ ನಿಂತಿತ್ತು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ನಡುವಿನ ಸಂಬಂಧವೂ ಒಂದೇ ತಾಯಿಯ ಮಕ್ಕಳು ನಾವು ಎನ್ನುವಷ್ಟರ ಮಟ್ಟಿಗೆ ಅನ್ಯೋನ್ಯವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.

‘ಇನ್ನು ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಂತೂ ಚುನಾವಣೆಯಲ್ಲಿ ಡಿಎಂಕೆ ಪರ ತಮಿಳುನಾಡಿನಲ್ಲಿ ತನು-ಮನ-ಧನ ಅರ್ಪಿಸಿ ಅಲ್ಲಿಯೇ ಮೊಕ್ಕಾಂ ಹೂಡಿದ್ದರು. ಸ್ಟಾಲಿನ್‌ರ ಹೆಗಲ ಮೇಲೆ ಕೈ ಹಾಕಿ, ಅವರ ಕಿವಿಯಲ್ಲಿ ಪಿಸು ಪಿಸು ಮಾತನಾಡುವಷ್ಟು ಸಲುಗೆಯಿರುವ ಇವರಿಬ್ಬರ ಗಾಢವಾದ ಸ್ನೇಹ-ಸಂಬಂಧ ಒಂದು ರೀತಿ ನರಕದಲ್ಲಿಯೇ ನಿಶ್ಚಯವಾದ ಮದುವೆಯಂತೆ!! ಸ್ಟಾಲಿನ್ ಅವರು ಸಿದ್ದರಾಮಯ್ಯ, ಡಿಕೆಶಿ ಅವರು ಬೆಂಗಳೂರಿನಲ್ಲಿ ನಡೆದ I.N.D.I ಮೈತ್ರಿಕೂಟದ ಸಭೆಯಲ್ಲಿ ಒಂದೇ ಟೇಬಲ್‌ನಲ್ಲಿ ಪೊಂಗಲ್ ತಿನ್ನುವ ಸಮಯದಲ್ಲಿಯೇ, ಮನಸ್ಸು ಮಾಡಿದಿದ್ದರೆ ಕಾವೇರಿ ವಿವಾದವನ್ನು ಬಗೆಹರಿಸಿಕೊಂಡು ರಾಜ್ಯದ ಹಿತ ಕಾಪಾಡಬಹುದಿತ್ತು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಆದರೆ ಪೊಂಗಲ್ ಮೀಟಿಂಗ್‌ನಲ್ಲಿ ರಾಜ್ಯದ ಹಿತ ಕಾಯುವ ಬದಲು, ರಾಜ್ಯದ ಹಿತಕ್ಕೆ ಧಕ್ಕೆ ತರುವ ನಿರ್ಧಾರಗಳನ್ನೇ ಮಾಡಿದ್ದಾರೆ. ಹೀಗಾಗಿ ತಮ್ಮ ಚಿನ್ನತಂಬಿ ಸ್ಟಾಲಿನ್ ಅವರಿಗೆ ಉಡುಗೊರೆಯಾಗಿ ರಾಜ್ಯದ ಕಾವೇರಿಯನ್ನು ಬರಿದು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ದೇವರ ದಯೆಯಿಂದ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿತ್ತು. ಆದಾಗ್ಯೂ 2012ರಲ್ಲಿ ಕಾವೇರಿ ವಿವಾದ ತಲೆದೋರಿದ್ದಾಗ ಅಂದಿನ ರಾಜ್ಯ ಬಿಜೆಪಿ ಸರ್ಕಾರ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಿತ್ತು. ನ್ಯಾಯಾಲಯದಲ್ಲಿ ಸತತವಾಗಿ ಮೇಲ್ಮನವಿಗಳನ್ನು ಸಲ್ಲಿಸುತ್ತಾ ರಾಜ್ಯದ ಹಿತಾಸಕ್ತಿಯನ್ನು ಬಿಜೆಪಿ ಕಾಪಾಡಿತ್ತು. ದರ್ಪ, ಉದ್ದಟತನ ತೋರದೆ, ಬಹಳಷ್ಟು ನೈಪುಣ್ಯತೆಯಿಂದ ‌ಸಮಸ್ಯೆಯನ್ನು ಬಗೆಹರಿಸಿತ್ತೇ ಹೊರತು ಯಾರ ಮೇಲೆಯೂ ಗೂಬೆ ಕೂರಿಸುವಂತಹ ಚಿಲ್ಲರೆ ರಾಜಕಾರಣ ಮಾಡಲಿಲ್ಲ’ವೆಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ಕೋರ್ಟ್ ಆದೇಶ ಪಾಲಿಸಿ ತಮಿಳುನಾಡಿಗೆ ನೀರು ಬಿಡುತ್ತೇವೆ: ಸಚಿವ ಡಾ. ಜಿ. ಪರಮೇಶ್ವರ್

‘ಆ ಸಮಯದಲ್ಲಿ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಎಷ್ಟು ಬಾರಿ ಮಧ್ಯಪ್ರವೇಶಿಸಿತ್ತು ಎಂಬುದನ್ನು ಸಿದ್ದರಾಮಯ್ಯನವರೇ ತಿಳಿಸಬೇಕು. ಕಾಂಗ್ರೆಸ್‍ಗೆ ನಿಜಕ್ಕೂ ರಾಜ್ಯದ ಹಿತ ಕಾಪಾಡುವ ಮಹತ್ವಾಕಾಂಕ್ಷೆಯಿದ್ದರೆ ತಮಿಳುನಾಡು ಸರ್ಕಾರದ ಜೊತೆ ಮಾತನಾಡಿ ಕಾವೇರಿ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಬಹುದು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಹಿತಾಸಕ್ತಿಗಿಂತಲೂ ಹೆಚ್ಚಾಗಿ ತಮ್ಮ ಸ್ವಾರ್ಥದ I.N.D.I. ಮೈತ್ರಿಕೂಟದ ಹಿತಾಸಕ್ತಿ ಮುಖ್ಯವಾಗಿದೆ. ಹೀಗಾಗಿ ರಾಜ್ಯದ ಜನತೆ ಕಣ್ಣೀರು ಹಾಕಿದರೂ ಸರಿಯೇ, ಸ್ಟಾಲಿನ್ ಅವರು ಮಾತ್ರ ಸದಾ ಸಂತಸದಲ್ಲಿರಬೇಕೆಂಬ ಕಾರಣಕ್ಕೆ ಕಾವೇರಿ ನೀರನ್ನು ಮನಸ್ಸಿಗೆ ಬಂದಂತೆ ಸ್ಟಾಲಿನ್‌ ನಾಡಿಗೆ ಹರಿಬಿಡಲಾಗುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News