ಕಾನೂನು ಸುವ್ಯವಸ್ಥೆ ಕುರಿತು ನಮಗೆ ಪಾಠ ಮಾಡುವುದು ಬಿಟ್ಟು, ನಿಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಿ- ಸಿದ್ದರಾಮಯ್ಯ

ಬಿಜೆಪಿಯವರು ಕರೆದರು ಎಂದು ಬಂದು ಇಲ್ಲಿ ಮಾತನಾಡುವಿರಾ ? ಕನ್ನಡ ನಾಡಿನ ಇತಿಹಾಸ ನಿಮಗಿಂತ ನನಗೆ ಚೆನ್ನಾಗಿ ಗೊತ್ತಿದೆ- ಸಿದ್ದರಾಮಯ್ಯ

Updated: Dec 22, 2017 , 05:20 PM IST
ಕಾನೂನು ಸುವ್ಯವಸ್ಥೆ ಕುರಿತು ನಮಗೆ ಪಾಠ ಮಾಡುವುದು ಬಿಟ್ಟು, ನಿಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಿ- ಸಿದ್ದರಾಮಯ್ಯ

ಬೆಳಗಾವಿ : ಯೋಗಿ ಆದಿತ್ಯನಾಥರೇ, ನಾನು ಕರುನಾಡಿನ ಮಗ, ಆರೂವರೆ ಕೋಟಿ ಜನರ ಮಗ, ಈ ಮಣ್ಣಿನ ಮಗ. ಕಾನೂನು ಸುವ್ಯವಸ್ಥೆ ಕುರಿತು ನಮಗೆ ಪಾಠ ಮಾಡಬೇಡಿ. ನಿಮ್ಮ ರಾಜ್ಯಕ್ಕೆ ಹೋಗಿ ಅಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿಕೊಳ್ಳಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ. 

ಬಿಜೆಪಿಯವರು ಕರೆದರು ಎಂದು ಬಂದು ಇಲ್ಲಿ ಮಾತನಾಡುವಿರಾ ? ಕನ್ನಡ ನಾಡಿನ ಇತಿಹಾಸ ನಿಮಗಿಂತ ನನಗೆ ಚೆನ್ನಾಗಿ ಗೊತ್ತಿದೆ. ಕರ್ನಾಟಕವನ್ನು ಯಾರೂ ಜಂಗಲ್ ರಾಜ್ಯ ಎಂದು ಕರೆಯುವುದಿಲ್ಲ. ಆ ಹೆಸರು ಇರುವುದು ಉತ್ತರ ಪ್ರದೇಶಕ್ಕೆ ಎಂದರು.

ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಯವರು ಕೆಲವರು ರಾಜ್ಯದಲ್ಲಿ ಸಾಮರಸ್ಯ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವೂ ಹಿಂದೂಗಳೇ... ಆದರೆ ನಾವ್ಯಾರೂ ಹಿಂದುತ್ವ, ಇಸ್ಲಾಂ, ಕ್ರೈಸ್ತ, ಸಿಖ್ಕರ ವಿರೋಧಿಗಳಲ್ಲ ಎಂದು ತಿಳಿಸಿದರು. 

ಹಿಂದುತ್ವ ಯಾರದೋ ಗುತ್ತಿಗೆ ಅಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಬಂದು ಸಿದ್ದರಾಮಯ್ಯ ಟಿಪ್ಪೂ ಜಯಂತಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನಾವು ಬರೀ ಟಿಪ್ಪೂ ಜಯಂತಿ ಮಾಡುತ್ತಿಲ್ಲ. ದೇವರ ದಾಸಿಮಯ್ಯ ಅಂಬಿಗರ ಚೌಡಯ್ಯ, ಅಂಬೇಡ್ಕರ್, ಕನಕದಾಸ, ವಾಲ್ಮೀಕಿ, ಕಿತ್ತೂರು ರಾಣಿ,‌‌ ಕೆಂಪೇಗೌಡ, ಕೃಷ್ಣ ಜಯಂತಿ ಒಳಗೊಂಡು ಸುಮಾರು 26 ಜಯಂತಿಗಳನ್ನು ಮಾಡುತ್ತಿದ್ದೇವೆ. ಇದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ತಿಳಿಯಬೇಕು. ಎಲ್ಲ ಜಯಂತಿಗಳನ್ನು ಆಚರಿಸುತ್ತಿದ್ದೇವೆ. ಸೇವಾಲಾಲ್ ಜಯಂತಿ ಕೂಡಾ ಮಾಡುತ್ತೇವೆ. ಅವರ ಹಾಗೆ ಒಂದು ಬಿಟ್ಟು ಒಂದನ್ನು ಮಾಡುವುದಿಲ್ಲ ಎಂದು ಯೋಗಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

ಎಲ್ಲ ಇತಿಹಾಸಪುರುಷರು, ಮಹಾಪುರುಷರು, ಸಾಧು ಸಂತರು, ಸೂಫಿಗಳ ಜಯಂತಿಯನ್ನು ನಾವು  ಮಾಡುತ್ತಿದ್ದೇವೆ. ಅಧಿಕಾರದಲ್ಲಿ ಇದ್ದಾಗ ಬಿಜೆಪಿಯವರೇಕೆ ಮಾಡಲಿಲ್ಲ ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ಹೆಸರು ನಾಮಕರಣ ಮಾಡಿದ್ದೇವೆ. ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಬಸವಣ್ಣನ ಛಾಯಾಚಿತ್ರ ಹಾಕಲು ಆದೇಶ ಹೊರಡಿಸಿದವರು ನಾವು. ಸುಮ್ಮನೆ ಕಣ್ಣು ಮುಚ್ಚಿಕೊಂಡು ಜಾತಿ ಭಾವನೆ, ಧಾರ್ಮಿಕ ಭಾವನೆ ಕೆರಳಿಸಲು ಟಿಪ್ಪೂ ಒಬ್ಬ ಮತಾಂಧ ಎನ್ನುವುದು ಚರಿತ್ರೆಗೆ ಮಾಡುವ ಅಪಮಾನ. ಪ್ರತಿಯೊಬ್ಬ ರಾಜಕಾರಣಿಗಳೂ ನಮ್ಮ ಸಂವಿಧಾನದಲ್ಲಿ ಹೇಳಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಹಬಾಳ್ವೆ ದೊರೆಯುವಂತೆ ಕೆಲಸ ಮಾಡಬೇಕು. ಯಾರು ಸಮಾಜದಲ್ಲಿ ಅವಕಾಶ ವಂಚಿತರಾಗಿದ್ದಾರೋ, ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಯಾರಿಗೆ ನ್ಯಾಯ ಸಿಕ್ಕಿಲ್ಲವೋ ಅವರಿಗೆ ನ್ಯಾಯ ಒದಗಿಸುವ, ಅವಕಾಶ ಒದಗಿಸುವ ಕೆಲಸವನ್ನು ಹಾಗೂ ಅವರನ್ನು ಮುಖ್ಯ ವಾಹಿನಿಗೆ ತರುವುದನ್ನು ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದು ಇದನ್ನೇ.  ಬಸವಣ್ಣ ಹೇಳಿದ್ದು ಕೂಡಾ ಇದನ್ನೇ. ಸಮ ಸಮಾಜ ನಿರ್ಮಾಣ ಆಗಬೇಕು. ಜಾತಿರಹಿತವಾದ ಸಮಾಜ ನಿರ್ಮಾಣ ಆಗಬೇಕು ಎನ್ನುವುದು ಅವರೆಲ್ಲರ ಕಾಳಜಿಯಾಗಿತ್ತು. ಯಾವುದೇ ಸಮಾಜದಲ್ಲಿ ಸಾಮರಸ್ಯ ಇಲ್ಲದೇ ಹೋದರೆ ಶಾಂತಿ ನೆಮ್ಮದಿ ಇಲ್ಲದಿದ್ದರೆ  ಆ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಯಡಿಯೂರಪ್ಪ ಕರೆದರೆ ಉತ್ತರ ಪ್ರದೇಶದಿಂದ ಇಲ್ಲಿಗೆ ಬಂದು ಬಾಯಿಗೆ ಬಂದಂತೆ ಮಾತನಾಡಿರುವ ಆದಿತ್ಯನಾಥರೇ,  ಕರ್ನಾಟಕ ಬಸವಣ್ಣ, ಕನಕದಾಸ, ಕುವೆಂಪು, ವಾಲ್ಮೀಕಿ, ಚೆನ್ನಮ್ಮನ ನಾಡು. ಇಲ್ಲಿ ನೀವೇನೂ ಮಾಡಕ್ಕೆ ಸಾಧ್ಯವಿಲ್ಲ. 

ಬಿಜೆಪಿಯವರ ಜಾದೂ ಇಲ್ಲಿ ನಡೆಯದು. ರಾಜಕೀಯದಲ್ಲಿ ಯಾರೂ ಜಾದೂ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಕರ್ನಾಟಕದ ಜನ ಪ್ರಬುದ್ಧರಾದ ಜನ, ವಿವೇಚನೆ ಇರುವಂತಹ ಜನ. ಯಾರನ್ನು ಬೆಂಬಲಿಸಬೇಕು, ಯಾರನ್ನು ತಿರಸ್ಕರಿಸಬೇಕು ಎಂಬ ವಿವೇಚನೆ ಕರ್ನಾಟದ ಜನರಿಗೆ ಇದೆ ಎಂದರು.

ಯಡಿಯೂರಪ್ಪ ಅವರು ಸರ್ಕಾರ ನೀರಾವರಿಗೆ ನಾಲ್ಕೂವರೆ ವರ್ಷದಲ್ಲಿ  ಕೇವಲ 5500 ಕೋಟಿ ರೂ. ಖರ್ಚು ಮಾಡಿದೆ ಎಂದಿದ್ದಾರೆ. 45,000 ಕೋಟಿ ರೂ.ಗಳನ್ನು ನಾವು ಖರ್ಚು ಮಾಡಿದ್ದೇವೆ. ಮಾರ್ಚ್ ಒಳಗಡೆ 50,000 ಕೋಟಿಗೂ ಹೆಚ್ಚು ರೂ.ಗಳನ್ನು ವೆಚ್ಚ ಮಾಡುತ್ತೇವೆ.

ಯಡಿಯೂರಪ್ಪ ಅವರೇ ನಿಮಗೆ ತಾಕತ್ತಿದ್ದರೆ ಬನ್ನಿ ಚರ್ಚೆ ಮಾಡೋಣ. ನಾನು ಪ್ರತಿ ಜಿಲ್ಲೆಯಲ್ಲಿ ನೀರಾವರಿಗೆ ಎಷ್ಟು ಖರ್ಚು ಮಾಡಿದ್ದೇವೆ ಎನ್ನುವುದನ್ನು ಪತ್ರಿಕೆಗಳಿಗೆ ಜಾಹೀರಾತು ಕೊಡಿ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲರಿಗೆ ಹೇಳಿದ್ದೇನೆ. ಅದರಲ್ಲಿ ಯಾವುದೇ ತಕರಾರು ಇದ್ದರೆ ದಾಖಲೆಗಳ ಸಮೇತ ಬರಲಿ.‌ ಸುಳ್ಳಾದರೆ ವಿಧಾನ ಮಂಡಲ ಅಧಿವೇಶನದಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿ ನೋಡೋಣ.

ಶಾಸಕ ಸತೀಶ್ ಜಾರಕಿಹೊಳಿ ಅವರು ಅತ್ಯಂತ ಸಮರ್ಥ ನಾಯಕ, ಅವರಿಗೆ ಮೂಢನಂಬಿಕೆ, ಕಂದಾಚಾರ, ನಂಬಿಕೆ ಕುರಿತು ಸ್ಪಷ್ಟತೆ ಇದೆ. ವೈಜ್ಞಾನಿಕ ಮನೋಭಾವ ಇರುವವರಿಗೆ ಈ ಸ್ಪಷ್ಟತೆ ಬರುತ್ತದೆ. ಸತೀಶ್ ಜಾರಕಿಹೊಳಿ ಮಾತು ಕಡಿಮೆ. ಆದರೆ ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುವ, ಬಡವರ ಬಗ್ಗೆ ಕಾಳಜಿ ಇರುವ ವ್ಯಕ್ತಿ ಎಂದು ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.