SM Krishna passes away: ನಾಳೆ ಹುಟ್ಟೂರು ಮಂಡ್ಯ ಜಿಲ್ಲೆ ಸೋಮನಹಳ್ಳಿಯಲ್ಲಿ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ

SM Krishna passes away: ಕರ್ನಾಟಕದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಸಿಎಂ ಎಸ್.​ಎಂ.ಕೃಷ್ಣ ವಿಧಿವಶರಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು (ಡಿಸೆಂಬರ್​ 10) ನಸುಕಿನ ಜಾವ 2:30ರ ಸುಮಾರಿಗೆ ನಿಧನರಾದರು.

Written by - Puttaraj K Alur | Last Updated : Dec 10, 2024, 04:05 PM IST
  • SM Krishna passes away: ಕರ್ನಾಟಕದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಸಿಎಂ ಎಸ್.​ಎಂ.ಕೃಷ್ಣ ವಿಧಿವಶರಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು (ಡಿಸೆಂಬರ್​ 10) ನಸುಕಿನ ಜಾವ 2:30ರ ಸುಮಾರಿಗೆ ನಿಧನರಾದರು.
SM Krishna passes away: ನಾಳೆ ಹುಟ್ಟೂರು ಮಂಡ್ಯ ಜಿಲ್ಲೆ ಸೋಮನಹಳ್ಳಿಯಲ್ಲಿ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ
Live Blog

SM Krishna passes away: ಕರ್ನಾಟಕದ 10ನೇ ಮುಖ್ಯಮಂತ್ರಿಯಾಗಿ, ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮತ್ತು ಹಲವಾರು ಮಹತ್ವದ ಜವಾಬ್ದಾರಿಗಳನ್ನು ನಿಬಾಯಿಸಿ ರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿದ್ದ ಎಸ್​​.ಎಂ.ಕೃಷ್ಣ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್​​.ಎಂ.ಕೃಷ್ಣರನ್ನು ಮೊದಲು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನಲೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಎಸ್.ಎಂ.ಕೃಷ್ಣರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ(ಡಿಸೆಂಬರ್‌ 11) ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

10 December, 2024

  • 16:03 PM

    ನಾಳೆ ಹುಟ್ಟೂರಿನಲ್ಲಿ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಿಎಂ ಎಸ್.​ಎಂ.ಕೃಷ್ಣ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು (ಡಿಸೆಂಬರ್ 10) ನಿಧನರಾಗಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅವರ ಅಂತ್ಯಸಂಸ್ಕಾರ ನೆರವೇರಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ನಾಳೆ (ಡಿಸೆಂಬರ್ 11) ಹುಟ್ಟೂರಾದ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿ ಸಿದ್ಧತೆಗಳು ನಡೆದಿವೆ. ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸ್ಥಳಕ್ಕೆ ತೆರಳಿ ಅಂತ್ಯಕ್ರಿಯೆ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ಎಸ್.​ಎಂ.ಕೃಷ್ಣರ ಅಂತ್ಯಕ್ರಿಯೆಗೂ ಮೊದಲು ವೈದಿಕ ಪುರೋಹಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ‌ಪೂಜೆ-ಪುನಸ್ಕಾರಗಳು ಮತ್ತು ಅಂತಿಮ‌ ವಿಧಿ-ವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ.

  • 11:36 AM

    ಎಸ್‌.ಎಂ.ಕೃಷ್ಣ ಅಂತಿಮ ದರ್ಶನ ಪಡೆದ ಅನಿಲ್‌ ಕುಂಬ್ಳೆ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (92) ವಿಧಿವಶರಾಗಿದ್ದು, ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ನಟಿ ರಮ್ಯಾ ಅವರು ಎಸ್.ಎಂ.ಕೃಷ್ಣರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಮಾಜಿ ಕ್ರಿಕೆಟಿಗ ಕುಂಬ್ಳೆ, ಎಸ್.ಎಂ.ಕೃಷ್ಣ ಅವರ ನಿಧನ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ನಮಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಕರ್ನಾಟಕ ಮತ್ತು ಬೆಂಗಳೂರಿಗೆ ಅವರ ಕೊಡುಗೆ ಅಪಾರವೆಂದು ಸ್ಮರಿಸಿದರು.
     

  • 11:29 AM

    ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನದ ಹಿನ್ನೆಲೆ ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ ಸೇರಿ ರಜೆ ಘೋಷಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಸದನದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರಕಟಿಸಲಿದ್ದಾರೆ. ರಜೆ ಘೋಷಿಸಿ ಅಧಿಸೂಚನೆ ಹೊರಡಿಸಿರುವ ಸರ್ಕಾರ, ನಾಳೆ (ಡಿಸೆಂಬರ್‌ 11) ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಎಸ್.ಎಂ.ಕೃಷ್ಣರ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಡಿಸೆಂಬರ್‌ 10ರಿಂದ ಡಿ.12ರವರೆಗೆ ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲಾಗುವುದು. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜನವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಎಂದು ತಿಳಿಸಿದೆ.

  • 10:16 AM

    ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಎಚ್‌.ಡಿ.ದೇವೇಗೌಡ ಸಂತಾಪ: ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ʼಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಮಾಜಿ ವಿದೇಶಾಂಗ ಸಚಿವರು ಹಾಗು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಎಸ್‌ಎಂ ಕೃಷ್ಣ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರ ಕುಟುಂಬದವರಂತೆ ನಾನೂ ಸಮಾನ ದುಃಖಿ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆʼ ಎಂದು ಹೇಳಿದ್ದಾರೆ.
     

  • 10:12 AM

    ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ: ಮಾಜಿ ಸಿಎಂ ಹಾಗೂ ಮಾಜಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಎಸ್.ಎಂ.ಕೃಷ್ಣರ ಜೊತೆಗಿರುವ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ʼಎಸ್.ಎಂ ಕೃಷ್ಣ ಅವರು ಅಸಾಧಾರಣ ನಾಯಕರಾಗಿದ್ದರು, ಸಮಾಜದ ಎಲ್ಲ ವರ್ಗಗಳ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೆ ಶ್ರಮಿಸಿದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದ್ದನ್ನು ಸ್ಮರಿಸಿಕೊಳ್ಳಲಾಗುತ್ತದೆ. ಎಸ್.ಎಂ ಕೃಷ್ಣ ಅವರು ಸಮೃದ್ಧ ಓದುಗ ಮತ್ತು ಚಿಂತಕರೂ ಆಗಿದ್ದರುʼ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. 

  • 09:35 AM

    ಎಸ್.ಎಂ.ಕೃಷ್ಣ ಎದುರಿಸಿದ್ದ ಕಠಿಣ ಸವಾಲುಗಳು

    * ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ಸಂದರ್ಭದಲ್ಲಿ ಎದುರಿಸಿದ ಕಠಿಣ ಸವಾಲುಗಳು
    * 1999 ರಿಂದ 2004ರವರೆಗಿನ ಎಸ್.ಎಂ.ಕೃಷ್ಣರ ಸಿಎಂ ಹಾದಿ ಮುಳ್ಳಿನ ಹಾದಿಯಾಗಿತ್ತು
    * ವರನಟ ಡಾ.ರಾಜಕುಮಾರ್ ಅಪಹರಣದ ದೊಡ್ಡ ಸವಾಲು
    * ತಮಿಳುಮಾಡು ಸರ್ಕಾರದ ಜೊತೆಗೆ ಜೊತೆಗೂಡಿ ಡಾ.ರಾಜಕುಮಾರ್ ಕರೆತರಲು ಹರಸಾಹಸ
    * ಡಾ.ರಾಜಕುಮಾರ್‌ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದಾಗ ಸಂಧಾನಕ್ಕೆ ಎಲ್ಲಿಲ್ಲದ ಹರಸಾಹಸ
    * ರಾಜ್ಯದಾದ್ಯಂತ ಸತತ ಮೂರು ವರ್ಷಗಳ ಭೀಕರ ಬರದ ಛಾಯೆಯನ್ನು ನಿಭಾಯಿಸಿದ್ದ ಎಸ್.ಎಂ.ಕೃಷ್ಣ
    * ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ತಾರಕಕ್ಕೆರಿದ ಹೋರಾಟ
    * ಸಿಲಿಕಾನ್‌ ಸಿಟಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಎದುರಿಸಿದ್ದ ಸವಾಲು
    * ಎಲ್ಲಾ ಸವಾಲುಗಳನ್ನು ಎದುರಿಸಿದ್ರೂ ಸಹ 2004ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದು  

  • 09:03 AM

    ಬ್ರಾಂಡ್ ಬೆಂಗಳೂರಿಗೆ ಎಸ್.ಎಂ.ಕೃಷ್ಣ ಕೊಡುಗೆ ಅಪಾರ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಂಬನಿ ಮಿಡಿದಿದ್ದಾರೆ. ಎಸ್.ಎಂ.ಕೃಷ್ಣ ಸರ್‌ ನಿಧನದಿಂದ ನಮ್ಮ ದೇಶಕ್ಕೆ ದೊಡ್ಡ ನಷ್ಟವಾಗಿದೆ. ದೇಶವು ದೊಡ್ಡ ಆಸ್ತಿಯನ್ನು ಕಳೆದುಕೊಂಡಂತಾಗಿದೆ. ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದ ಅವರ ಬಗ್ಗೆ ಜಂಟಲ್‌ಮ್ಯಾನ್‌ ಪೊಲಿಟಿಷಿಯನ್‌ ಎಂಬ ಅಭಿಪ್ರಾಯವಿದೆ. ಅಪರೂಪದ ರಾಜಕಾರಣಿಯಾಗಿದ್ದ ಅವರಿಗೆ ನಮ್ಮ ರಾಜ್ಯದ ಮೇಲೆ ಬಹಳ ಪ್ರೀತಿ ಇತ್ತು. ಇಡೀ ದೇಶದ ಜನರಿಗೆ ಬೆಂಗಳೂರು ಹಾಗೂ ಕರ್ನಾಟಕದ ಪೊಟೆನ್ಶಿಯಲ್ ಬಗ್ಗೆ ತಿಳಿಯಬೇಕಿದೆ ಎಂದು ನಾನು ಐಟಿ ಬಿಟಿ ಸಚಿವನಾಗಿದ್ದಾಗ ಕರೆಸಿ ಹೇಳಿದ್ದರು. ಐಟಿ ಬಿಟಿಗೆ ನೀನು ರಾಯಭಾರಿಯಾಗಿದ್ದೀಯಾ, ಚೆನ್ನಾಗಿ ನಡೆಸಿಕೊಂಡು ಹೋಗು ಅಂತಾ ಸಲಹೆ ನೀಡಿದ್ದರು. ಬ್ರಾಂಡ್‌ ಬೆಂಗಳೂರಿಗೆ ಅವರ ಕೊಡುಗೆ ಅಪಾರವೆಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.   
     

  • 08:56 AM

    ಕಾಂಗ್ರೆಸ್ ಶಾಸಕಾಂಗದ ಸಭೆ, ಔತಣಕೂಟ ಮುಂದಕ್ಕೆ: ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನರಾಗಿರುವ ಹಿನ್ನೆಲೆ ಕಾಂಗ್ರೆಸ್ ಶಾಸಕಾಂಗದ ಸಭೆ ಮತ್ತು ಔತಣಕೂಟವನ್ನು ಮುಂದೂಡಲಾಗಿದೆ. ಬೆಳಗಾವಿಯ ಶೂನ್ಯ ರೆಸಾರ್ಟ್ನಲ್ಲಿ ಇಂದು ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಔತಣಕೂಟವನ್ನು ಮುಂದೂಡಲಾಗಿದೆ ಅಂತಾ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಎಸ್.ಎಂ.ಕೃಷ್ಣರ ನಿಧನದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಡಿಕೆಶಿಯವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • 08:03 AM

    ಎಸ್.ಎಂ.ಕೃಷ್ಣ ನಿಧನಕ್ಕೆ ಗಣ್ಯರ ಸಂತಾಪ: ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕ ಸಿಟಿ ರವಿ ಸೇರಿದಂತೆ ಅನೇಕರು ಟ್ವೀಟ್‌ ಮೂಲಕ ಕರ್ನಾಟಕದ ಮುತ್ಸದ್ದಿ ರಾಜಕಾರಣಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Trending News