ಹುಬ್ಬಳ್ಳಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 10ರಂದು ಹುಬ್ಬಳಿಗೆ ಆಗಮಿಸಲಿದ್ದು, ಪ್ರಚಾರ ಆರಂಭಿಸಲಿದ್ದಾರೆ.
ಬಿಜೆಪಿಯ ಮೊದಲ ಚುನಾವಣಾ ಪ್ರಚಾರ ಸಮಾವೇಶ ಫೆಬ್ರವರಿ 10 ರಂದು ಸಂಜೆ 4ಗಂಟೆಗೆ ಹುಬ್ಬಳ್ಳಿಯ ಹೊರವಲಯದ ಗಬ್ಬೂರ ಸಮೀಪದ ಕೆಎಲ್ಇ ಕಾಲೇಜು ಆವರಣದಲ್ಲಿ 'ಮತ್ತೊಮ್ಮೆ ಮೋದಿ, ಮತ್ತೊಮ್ಮೆ ಪ್ರಧಾನಿ' ಘೋಷವಾಕ್ಯದಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಧಾರವಾಡ, ಉತ್ತರ ಕನ್ನಡ ಹಾಗೂ ಹಾವೇರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಸುಮಾರು 3 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಿದ್ಧತೆಗಾಗಿ ಶಾಮಿಯಾನ, ವಾಹನ, ಪ್ರಚಾರ ವ್ಯವಸ್ಥೆ ಸೇರಿದಂತೆ 33 ತಂಡಗಳನ್ನು ರಚಿಸಲಾಗಿದೆ ಎಂದು ಚುನಾವಣಾ ಪ್ರಚಾರ ಉಸ್ತುವಾರಿ ಆರ್.ಅಶೋಕ್ ತಿಳಿಸಿದ್ದಾರೆ.
ಬಿಜೆಪಿಯಾ ಎರಡನೇ ಸಮಾವೇಶ ಫೆ.17ರಂದು ಕಲಬುರ್ಗಿಯಲ್ಲಿ ನಡೆಯಲಿದೆ. ಹಾಗೆಯೇ ಫೆಬ್ರವರಿ 19 ಮತ್ತು 27 ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಆಗಮಿಸಲಿದ್ದು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.