ರಾಮದುರ್ಗ : ಮಹಾದಾಯಿ ಕುರಿತಾದ ಮಾತುಕತೆಗೆ ಗೋವಾ ಮುಖ್ಯಮಂತ್ರಿ ಅವರಿಂದ ಆಹ್ವಾನ ಬಂದ ಕೂಡಲೇ ಹೋಗಲು ತಯಾರಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ``ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆಗೆ ಹಿಂದೆಯೂ ಸಿದ್ಧವಾಗಿದ್ದೇ, ಈಗಲೂ ತಯಾರಿದ್ದೇನೆ'' ಎಂದು ಹೇಳಿದ್ದಾರೆ.
ಕುಡಿಯುವ ನಿರಿಗೆ ನಮ್ಮ ಆದ್ಯತೆ. ನ್ಯಾಯವು ನಮ್ಮ ಪರವಾಗಿದೆ. ನ್ಯಾಯ ಮಂಡಳಿಯಲ್ಲಿಯೂ ನಮಗೇ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
ಈ ಹಿಂದೆ ಮಹದಾಯಿ ಜಲವಿವಾದದ ಕುರಿತಂತೆ ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸವಿಲ್ಲ ಎಂಬ ಅಭಿಪ್ರಾಯವನ್ನು ಗೋವಾ ಮುಖ್ಯಮಂತ್ರಿ ವ್ಯಕ್ತಪಡಿಸಿದ್ದರು. ನಾನೂ ಕೂಡ ಅವರಂತೆ ಮಾತನಾಡಬಹುದು. ಆದರೆ ಹಾಗೆ ಮಾಡಲು ನಮಗೆ ಇಷ್ಟವಿಲ್ಲ. ಈಗಾಗಲೇ ಮಾತುಕತೆಗೆ ಬರುವಂತೆ ಗೋವಾ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಪತ್ರ ಬರೆದರೂ, ಯಾವುದೀ ಪ್ರತಿಕ್ರಿಯೆ ಬಂದಿಲ್ಲ. ಬದಲಿಗೆ ಅಲ್ಲಿನ ನಿರಾವರಿ ಸಚಿವರು ಕರ್ನಾಟಕ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
ಮಾತುಕತೆಗೆ ಮುಂದಾದ ಯಡಿಯೂರಪ್ಪ
ಮಹದಾಯಿ ವಿವಾದದ ಕುರಿತು ಒಂದು ವರ್ಷದಿಂದ ಮಾತನಾಡದಿದ್ದ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಗೋವಾದೊಂದಿಗೆ ಮಾತುಕತೆಗೆ ಮುಂದಾಗಿದ್ದು, ಕರ್ನಾಟಕಕ್ಕೆ ನೀರು ತರಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
''ನಿಯಮದ ಪ್ರಕಾರ ಗೋವಾ ಮುಖ್ಯಮಂತ್ರಿ ಅವರು ನನಗೆ ಪತ್ರ ಬರೆಯಬೇಕಿತ್ತು. ಆದರೆ ಅವರು ಯಡಿಯೂರಪ್ಪ ಅವರಿಗೆ ಮಾತುಕತೆ ಕುರಿತು ಪತ್ರ ಬರೆದಿದ್ದಾರೆ. ಆದರೆ ಮಾತುಕತೆಗೆ ಹೋಗಬೇಕಾದವರು ಯಡಿಯೂರಪ್ಪ ಅಲ್ಲ. ನಾನು ಅಥವಾ ರಾಜ್ಯದ ಜಲಸಂಪನ್ಮೂಲ ಸಚಿವರು'' ಎಂದಿರುವ ಮುಖ್ಯಮಂತ್ರಿಗಳು, ತಾವು ಯಾವಾಗ ಬೇಕಾದರೂ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.