ಮೈಸೂರು ಕೊರೋನಾ ಮುಕ್ತವಾದ ಬಗ್ಗೆ ಉಸ್ತುವಾರಿ ಸಚಿವರು ಏನಂದ್ರು ಗೊತ್ತಾ?

ನಂಜನಗೂಡಿನ ಜ್ಯೂಬ್ಲಿಯೆಂಟ್ ಫ್ಯಾಕ್ಟರಿಯಿಂದ ಹಬ್ಬಿದ ಕೋವಿಡ್ -19 ವೈರಾಣು ಜಿಲ್ಲೆಯನ್ನು ವ್ಯಾಪಿಸಿ ಒಟ್ಟಾರೆ 90 ಮಂದಿಗೆ ಸೋಂಕು ತಗುಲುವ ಮೂಲಕ ರಾಜ್ಯದಲ್ಲೇ ಅತಿಹೆಚ್ಚು ಪಾಸಿಟಿವ್ ಪ್ರಕರಣವುಳ್ಳ ಜಿಲ್ಲೆ ಹಣೆ ಪಟ್ಟಿ ಪಡೆದುಕೊಂಡಿತ್ತು.    

Updated: May 16, 2020 , 07:00 AM IST
ಮೈಸೂರು ಕೊರೋನಾ ಮುಕ್ತವಾದ ಬಗ್ಗೆ ಉಸ್ತುವಾರಿ ಸಚಿವರು ಏನಂದ್ರು ಗೊತ್ತಾ?

ಮೈಸೂರು: ರಾಜ್ಯದಲ್ಲೇ ಅತಿಹೆಚ್ಚು ಕೊರೋನಾ ಪೀಡಿತ ಜಿಲ್ಲೆಯಾಗಿದ್ದ ಮೈಸೂರು ಈಗ ಕೊರೋನಾ ಮುಕ್ತ ಜಿಲ್ಲೆಯಾಗಿದೆ ಈ ಬಗ್ಗೆ ಸಹಕಾರ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekhar) ಅಭಿನಂದನೆಗಳ ಮಳೆಗೈದಿದ್ದಾರೆ.

ಮೈಸೂರು   ಕೊರೊನಾವೈರಸ್ (Coronavirus)  ಮುಕ್ತ ಜಿಲ್ಲೆಯಾಗಲು ಶ್ರಮಿಸಿದ ಜಿಲ್ಲಾಡಾಳಿತ, ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ವೈದ್ಯರು, ನರ್ಸ್ ಗಳು, ಆಶಾಕಾರ್ಯಕರ್ತೆಯರು, ಪರ್ತಕರ್ತರಿಗೆ  ನನ್ನದೊಂದು ಸಲಾಂ ಎಂದಿದ್ದಾರೆ. ಇದು ಅಭಿನಂದನೆಯ ಚಪ್ಪಾಳೆ, ಹೃದಯಸ್ಪರ್ಶಿ ವಂದನೆಯ ಚಪ್ಪಾಳೆ, ಕೊರೋನಾ ಹಿಮ್ಮೆಟ್ಟಿಸಿದ ಚಪ್ಪಾಳೆ, ಮೈಸೂರು ಜಿಲ್ಲೆಯ ಸಮಸ್ತ ಜನತೆಗೆ ಹೃದಯತುಂಬಿದ ಚಪ್ಪಾಳೆ ಎಂದಿದ್ದಾರೆ.

ಇದೇನು ಕಡಿಮೆ ಸಾಧನೆಯೇನಲ್ಲ!
ನಂಜನಗೂಡಿನ ಜ್ಯೂಬ್ಲಿಯೆಂಟ್ ಫ್ಯಾಕ್ಟರಿಯಿಂದ ಹಬ್ಬಿದ  ಕೋವಿಡ್ -19 (Covid-19) ವೈರಾಣು ಜಿಲ್ಲೆಯನ್ನು ವ್ಯಾಪಿಸಿ ಒಟ್ಟಾರೆ 90 ಮಂದಿಗೆ ಸೋಂಕು ತಗುಲುವ ಮೂಲಕ ರಾಜ್ಯದಲ್ಲೇ ಅತಿಹೆಚ್ಚು ಪಾಸಿಟಿವ್ ಪ್ರಕರಣವುಳ್ಳ ಜಿಲ್ಲೆ ಹಣೆ ಪಟ್ಟಿ ಪಡೆದುಕೊಂಡಿತ್ತು.  ಇದರಿಂದ ಹೊರಬಂದು ಈಗ ಶೂನ್ಯಕ್ಕೆ ಸೋಂಕಿತ ಪ್ರಕರಣ ಇಳಿಯುವುದು ಎಂದರೆ ಕಡಿಮೆ ಸಾಧನೆಯಲ್ಲ. ಹೀಗಾಗಿ ನಾನು ಚಪ್ಪಾಳೆ ಮೂಲಕ ಹೃದಯತುಂಬಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಹಾಗೂ ಅವರ ತಂಡದ ಕಾರ್ಯವೈಖರಿ ಶ್ಲಾಘನೀಯ. ಇವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಸಚಿವರು ಶ್ಲಾಘಿಸಿದರು. 

ವೈದ್ಯರು, ನರ್ಸ್, ಆಶಾಕಾರ್ಯಕರ್ತೆಯರಿಗೆ ಹ್ಯಾಟ್ಸ್ ಆಫ್ :
ಇಲ್ಲಿ ನಾನು ಬಹುಮುಖ್ಯವಾಗಿ ವೈದ್ಯರು, ನರ್ಸ್, ಆಶಾಕಾರ್ಯಕರ್ತೆಯರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಪ್ರಾಣದ ಹಂಗು ತೊರೆದು, ವೈಯಕ್ತಿಕ ಜೀವನವನ್ನು ಮರೆತು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಕೆಲವರಂತೂ ಮನೆಗೇ ಹೋಗದೆ ಹೋಟೆಲ್ ಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಮಕ್ಕಳನ್ನು ದೂರವಿಟ್ಟು ವಾರಗಟ್ಟಲೇ ಭೇಟಿಯಾಗದೆ ಸೇವೆ ಸಲ್ಲಿಸಿದ್ದಾರೆ. ಇವರ ನಿಸ್ವಾರ್ಥ ಸೇವೆ ಅವಿಸ್ಮರಣೀಯ ಎಂದು ಸಚಿವರು ತಿಳಿಸಿದರು. 

ಪತ್ರಕರ್ತರಿಗೆ ಅಭಿನಂದನೆ:
ವೈದ್ಯರಂತೆಯೇ ಪತ್ರಕರ್ತರೂ ಸಹ ಜೀವದ ಹಂಗು ತೊರೆದು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇದಕ್ಕಾಗಿ ನಾನು ಈ ಸಂದರ್ಭದಲ್ಲಿ ಎಲ್ಲ ಪತ್ರಕರ್ತ ಮಿತ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಸೋಮಶೇಖರ್ ಹೇಳಿದರು.

ನಾಗರಿಕರ ಸಹಕಾರ ದೊಡ್ಡದು:
ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವುದರ ಹಿಂದೆ ನಾಗರಿಕರ ಪಾತ್ರವೂ ದೊಡ್ಡದಿದೆ. ಅವರ ಸಹಕಾರ ಇಲ್ಲದಿದ್ದರೆ ಇದರ ನಿಯಂತ್ರಣ ಕಷ್ಟಕರವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರ ದೊಡ್ಡದು ಎಂದು ಸಚಿವ ಸೋಮಶೇಖರ್ ತಿಳಿಸಿದರು.