ಬಿಎಸ್​ಪಿ ಪಕ್ಷದಿಂದ ಉಚ್ಛಾಟನೆ ಬಳಿಕ ವಿಶ್ವಾಸಮತಕ್ಕೆ ಗೈರಾದ ಬಗ್ಗೆ ಶಾಸಕ ಎನ್.ಮಹೇಶ್ ಹೇಳಿದ್ದೇನು?

ವಿಶ್ವಾಸಮತಯಾಚನೆ ವೇಳೆ ನಮ್ಮ ಪಕ್ಷದ ರಾಜ್ಯಸಭಾ ಸದಸ್ಯ ಡಾ. ಅಶೋಕ್ ಸಿದ್ಧಾರ್ಥ ಜೊತೆ ಮಾತನಾಡಿದ್ದೆ. ತಟಸ್ಥವಾಗಿರುವಂತೆ ಮಾಯಾವತಿ‌ ಹೇಳಿದ್ದಾರೆ ಎಂದು ಅಶೋಕ್​ ಹೇಳಿದರು. ಅದಕ್ಕೆ ನಾನು ವಿಶ್ವಾಸ ಮತಯಾಚನೆ ವೇಳೆ ವಿಧಾನಸಭೆಗೆ ಭಾಗವಹಿಸಿಲ್ಲ ಎಂದು ಎನ್.ಮಹೇಶ್ ಹೇಳಿದ್ದಾರೆ.

Updated: Jul 24, 2019 , 03:54 PM IST
ಬಿಎಸ್​ಪಿ ಪಕ್ಷದಿಂದ ಉಚ್ಛಾಟನೆ ಬಳಿಕ ವಿಶ್ವಾಸಮತಕ್ಕೆ ಗೈರಾದ ಬಗ್ಗೆ ಶಾಸಕ ಎನ್.ಮಹೇಶ್ ಹೇಳಿದ್ದೇನು?

ಬೆಂಗಳೂರು: ಮಂಗಳವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಗೆ ಗೈರಾದ ಕಾರಣದಿಂದ ಬಿಎಸ್ಪಿ ಶಾಸಕ ಎನ್.ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಮುಖ್ಯಸ್ಥೆ ಮಾಯಾವತಿ ಆದೇಶ ಹೊರಡಿಸಿದ ಬೆನ್ನಲ್ಲೇ, ತಾವು ವಿಶ್ವಾಸಮತಕ್ಕೆ ಗೈರಾಗಳು ಕಾರಣವೇನು ಎಂಬುದನ್ನು ಸ್ವತಃ ಎನ್.ಮಹೇಶ್ ಅವರೇ ಬಹಿರಂಗಪಡಿಸಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಮುಖ್ಯಸ್ಥೆಯಾದ ಬೆಹನ್ ಜೀ ಮಾಯಾವತಿ ಅವರು ತಟಸ್ಥವಾಗಿರುವಂತೆ ಈ ಹಿಂದೆ ಆದೇಶ ನೀಡಿದ್ದರು. ಅದೇ ಆದೇಶವನ್ನು ನಾನು ಪಾಲಿಸಿದ್ದೇನೆ. ಹಾಗಾಗಿ ವಿಶ್ವಾಸಮತಕ್ಕೂ ಹಾಜರಾಗಲಿಲ್ಲ. ನಾನು ಯಾವುದೇ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿಯೂ ಇಲ್ಲ, ಪಕ್ಷದ ಯಾವ ನಿಯಮವನ್ನೂ ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.

"ವಿಶ್ವಾಸಮತಯಾಚನೆ ವೇಳೆ ನಮ್ಮ ಪಕ್ಷದ ರಾಜ್ಯಸಭಾ ಸದಸ್ಯ ಡಾ. ಅಶೋಕ್ ಸಿದ್ಧಾರ್ಥ ಜೊತೆ ಮಾತನಾಡಿದ್ದೆ. ತಟಸ್ಥವಾಗಿರುವಂತೆ ಮಾಯಾವತಿ‌ ಹೇಳಿದ್ದಾರೆ ಎಂದು ಅಶೋಕ್​ ಹೇಳಿದರು. ಅದಕ್ಕೆ ನಾನು ವಿಶ್ವಾಸ ಮತಯಾಚನೆ ವೇಳೆ ವಿಧಾನಸಭೆಗೆ ಭಾಗವಹಿಸಿಲ್ಲ. ಸೂಕ್ತ ಸಂವಹನದ ಕೊರತೆಯಿಂದಾಗಿ ಈ ರೀತಿ ಆಗಿದೆ. ನಾನು ಪಕ್ಷ ಬಿಡುವುದಿಲ್ಲ. ಎಲ್ಲವೂ ಸರಿ ಹೋಗಲಿದೆ" ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.

"2018ರ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಆ ಹೊಂದಾಣಿಕೆಯ ಮೇಲೆ ನಾವು ಒಟ್ಟು 224 ಕ್ಷೇತ್ರಗಳಲ್ಲಿ 204 ರಲ್ಲಿ ಜೆಡಿಎಸ್, 20ರಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. ಕೊಳ್ಳೆಗಾಲದಲ್ಲಿ ನಾನು ಗೆದ್ದೆ. ನನಗೆ ಮಂತ್ರಿ ಸ್ಥಾನವೂ ಸಿಕ್ಕಿತು. ನಾಲ್ಕು ತಿಂಗಳು ನನ್ನ ಜ್ಞಾನಕ್ಕೆ ತಕ್ಕಂತೆ ಯಶಸ್ವಿಯಾಗಿ ಕೆಲಸ ಮಾಡಿದೆ. ಆದರೆ ಒಂದು ದಿನ ಬೆಹನ್ ಜೀ ನನ್ನನ್ನು ದೆಹಲಿಗೆ ಕರೆಸಿ ಮಧ್ಯಪ್ರದೇಶ, ರಾಜಸ್ಥಾನ ವಿಧಾನಸಭೆ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಜೊತೆ ನಾವು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ಜೊತೆ ಕೈಜೋಡಿಸಿ ಸರ್ಕಾರ ರಚಿಸುತ್ತಿರುವ ಕಡೆ ನೀವು ಮಂತ್ರಿಯಾಗಿರುವುದು ಬೇಡ, ರಾಜೀನಾಮೆ ನೀಡು ಎಂದರು ಅದಕ್ಕೆ ಮರು ಮಾತಾಡದೆ ನಾನು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದೆ. ಅವರು ಮೊದಲು ಒಪ್ಪಲಿಲ್ಲ. ನಾಲ್ಕು ದಿನದ ನಂತರ ಹಿರಿಯರ ಸೂಚನೆ ಮೇರೆಗೆ ರಾಜೀನಾಮೆ ಅಂಗೀಕರಿಸಿದರು" ಎಂದು ಹೇಳಿದರು.