ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಎಚ್ಚರಿಕೆಯಿಂದ ನಿಭಾಯಿಸುವೆ: ನಳಿನ್ ಕುಮಾರ್ ಕಟೀಲ್

ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ಅವರಂತಹ ದೊಡ್ಡ ನಾಯಕರ ಪರಿಶ್ರಮದಿಂದಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಬೆಳೆದು ಬಂದಿದೆ- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  

Yashaswini V Yashaswini V | Updated: Aug 27, 2019 , 02:51 PM IST
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಎಚ್ಚರಿಕೆಯಿಂದ ನಿಭಾಯಿಸುವೆ: ನಳಿನ್ ಕುಮಾರ್ ಕಟೀಲ್
Photo Courtesy: Twitter@BJP4Karnataka

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ  ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳೀನ್ ಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ನಡೆದ ಪದಗ್ರಹಣ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಯಡಿಯೂರಪ್ಪನವರಂಥಹ ಮೇರು ನಾಯಕರ ಆಶೀರ್ವಾದ ನನ್ನ ಮೇಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಎಚ್ಚರಿಕೆಯಿಂದ ನಿಭಾಯಿಸುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ಅವರಂತಹ ದೊಡ್ಡ ನಾಯಕರ ಪರಿಶ್ರಮದಿಂದಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಬೆಳೆದು ಬಂದಿದೆ. ಈ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಲು ಪಕ್ಷದ ಹಿರಿಯ ನಾಯಕರಾದ ಯಡಿಯೂರಪ್ಪ ಸೇರಿದಂತೆ ಎಲ್ಲರ ಸಲಹೆ ಪಡೆದು ಮುಂದುವರೆಯುತ್ತೇನೆ ಎಂದವರು ತಿಳಿಸಿದರು.

ಈ ವೇಳೆ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ವನ್ನೂ ನೆನೆದ ನಳೀನ್ ಕುಮಾರ್ ಕಟೀಲ್, ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಆರ್‌ಎಸ್‌ಎಸ್ ಪ್ರಮುಖ ಕಾರಣ. ಆರ್‌ಎಸ್‌ಎಸ್ ಶಾಖೆಯಲ್ಲಿ ಆಡುತ್ತ ಬೆಳೆದವನು ನಾನು. ಸಾಮಾನ್ಯ ಕಾರ್ಯಕರ್ತರೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಬಹುದು ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಅವರು ನುಡಿದರು.