ಬಜೆಟ್‌ ಮಂಡನೆಗೂ ಮುನ್ನ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ

ರಾಜ್ಯ ಸರ್ಕಾರ 2.38 ಲಕ್ಷ ಕೋಟಿ ಸಾಲ ಮಾಡಿದ. ಈ ಸಾಲ ತೀರಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ? ಯಡಿಯೂರಪ್ಪ  

Last Updated : Jul 4, 2018, 07:49 AM IST
ಬಜೆಟ್‌ ಮಂಡನೆಗೂ ಮುನ್ನ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ title=

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸುವ ಮುನ್ನ ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಆಗ್ರಹಿಸಿದ್ದಾರೆ.

ರಾಜ್ಯಪಾಲರ ಭಾಷಣದ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ 2.38 ಲಕ್ಷ ಕೋಟಿ ರೂ. ಸಾಲದ ಹೊರೆಯಲ್ಲಿದೆ. ಈ ಸಾಲ ತೀರಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ ಬಿಎಸ್ವೈ, ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವ ಮುನ್ನ ರಾಜ್ಯದ ಹಣಕಾಸು ಸ್ಥಿತಿಗತಿ ಬಗ್ಗೆ ಶ್ವೇತ ಪತ್ರ ಮಂಡಿಸಲಿ. ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ಶ್ವೇತಪತ್ರ ಹೊರಡಿಸಬೇಕಾಗಿದೆ ಎಂದು ಹೇಳಿದರು.

ಸಾಲ ಮಾತ್ರವಲ್ಲದೆ, ನೀರಾವರಿ, ಲೋಕೋಪಯೋಗಿ ಸಹಿತ ಪ್ರಮುಖ ಇಲಾಖೆಗಳಲ್ಲಿ 10 ಸಾವಿರ ಕೋಟಿ ರೂ. ಬಿಲ್‌ ಬಾಕಿ ಇದೆ. ಇಲಾಖೆಗಳಲ್ಲಿ ಬಾಕಿ ಪಾವತಿಯಾಗದ ಕಾರಣ ಯಾವುದೇ ಕಾಮಗಾರಿ ಮುಂದುವರಿಸದಂತೆ ಇಲಾಖಾ ಮುಖ್ಯಸ್ಥರಿಂದ ಅಧಿಕಾರಿಗಳಿಗೆ ಸೂಚನೆ ಹೋಗಿದೆ ಎಂದರು. 

ರಾಜ್ಯಪಾಲರಿಂದ ದಿಕ್ಕು ದಿಶೆಯಿಲ್ಲದ ಭಾಷಣ ಮಾಡಿಸಲಾಗಿದೆ. ಇದರಿಂದ ಹಿಂದಿನ ಸರ್ಕಾರದ ಯೋಜನೆಗಳನ್ನು ಪ್ರಸ್ತಾಪಿಸಲು ಸಿಎಂಗೆ ಮನಸ್ಸಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊನೆಯ ದಿನಗಳಲ್ಲಿ ಶಂಕುಸ್ಥಾಪನೆ ಮಾಡಿದ ಯೋಜನೆಗಳಿಗೆ 6-7 ಸಾವಿರ ಕೋಟಿ ರೂ. ಒದಗಿಸಬೇಕಿದೆ. ಇಂದಿರಾ ಕ್ಯಾಂಟೀನ್‌ಗೆ 35 ಕೋಟಿ ರೂ. ಅನುದಾನ ಒದಗಿಸಬೇಕಿದೆ. ಕಳೆದ ಜನವರಿ ತಿಂಗಳಿನಿಂದ ಅಂಗನವಾಡಿ ನೌಕರರಿಗೆ ಗೌರವಧನ ಸಿಕ್ಕಿಲ್ಲ. ಈ ಎಲ್ಲಾ ಕಾರಣಗಳಿಂದ ಬಜೆಟ್ ಮಂಡಿಸುವ ಮುನ್ನ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

Trending News