ಚಿಕ್ಕಬಳ್ಳಾಪುರ: ಕಳೆದ ನಾಲ್ಕು ವರ್ಷ, ನಾಲ್ಕು ತಿಂಗಳಿನಿಂದ ನಾವು ಸರ್ಕಾರ ನಡೆಸುತ್ತಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಸಿಎಂ ಹೇಳಿದರು.
ಚುನಾವಣೆಯ ಸಮಯದಲ್ಲಿ ನಾವು 165 ಆಶ್ವಾಸನೆಯನ್ನು ನೀಡಿದ್ದೆವು, ಅದರಲ್ಲಿ 155 ಆಶ್ವಾಸನೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾವಾಗಲೂ ಯಡಿಯೂರಪ್ಪ ನಾನು ಸೀರೆ ಕೊಟ್ಟಿದ್ದೇನೆ, ಸೈಕಲ್ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ನಮ್ಮ ಸರ್ಕಾರವು 4 ಕೋಟಿ ಜನರಿಗೆ 7ಕೆಜಿ ಅಕ್ಕಿ ಹಾಗೂ 5 ದಿನಗಳ ಕಾಲ ಮಕ್ಕಳಿಗೆ ಹಾಲು ಕೊಡುತ್ತಿದ್ದೇವೆ. ಒಂದೂವರೆ ಲಕ್ಷ ಕೃಷಿ ಹೊಂಡಗಳನ್ನು ತೋಡಿಸಿದ್ದೇವೆ ಇದನ್ನು ಬೇರೆ ಯಾವುದಾದರೂ ಸರ್ಕಾರ ಮಾಡಿದೆಯೇ? ಎಂದು ಸಿಎಂ ಪ್ರಶ್ನಿಸಿದರು.
ರಾಜಕೀಯಕ್ಕೊಸ್ಕರ ನಮ್ಮ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ ಸಿಎಂ. ರೈತರ ಸಾಲ ಮನ್ನಾ ಮಾಡಿಸುವ ಸಲುವಾಗಿ ನಾನು ಸರ್ವಪಕ್ಷ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕರೆದುಕೊಂಡು ಹೋಗಿದ್ದೆ. ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್, ಸದಾನಂದ ಗೌಡ, ಜೆಡಿಎಸ್ ನಿಂದ ರೇವಣ್ಣ ಬಂದಿದ್ದರು. ಯಾರೂ ತುಟುಕ್ ಪಿಟಿಕ್ ಅನ್ನಲಿಲ್ಲ, ಇವರನ್ನು ರೈತ ವಿರೋಧಿ ಎನ್ನಬೇಕೋ? ಬೇಡವೋ? ರೈತರ ಬಗ್ಗೆ ಮಾತನಾಡಲು ಯಡಿಯೂರಪ್ಪ ನವರಿಗೆ ಯಾವ ನೈತಿಕತೆ ಇದೇ ಎಂದು ಯಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡರು.
ನಾವು 50,000ದವರೆಗೆ ರೈತರ ಸಾಲ ಮನ್ನಾ ಮಾಡಿರುವುದನ್ನು ಯಡಿಯೂರಪ್ಪ ಭಿಕ್ಷೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. 2010 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಪರಿಷತ್ ನಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ ಮಾಡಿದಾಗ, ನಾನು ನೋಟು ಮುದ್ರಿಸುವ ಯಂತ್ರ ಇಟ್ಟಿಲ್ಲ ಎಂದಿದ್ದರು ಎಂದು ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು ಹಾಗೂ ಯಡಿಯೂರಪ್ಪ ಒಬ್ಬ ಡೋಂಗಿ ರಾಜಕಾರಣಿ ಎಂದು ಹೇಳಿದರು.